ಫೋಟೋ ಲೇಖನ ರಾಯಿ ರಾಜಕುಮಾರ ಮೂಡುಬಿದಿರೆ
ಅಣ್ಣಾ, ಅಕ್ಕಾ, ಮೂಡುಬಿದಿರೆ ಬಸ್ಸು ನಿಲ್ದಾಣದಲ್ಲಿ ನಾನು ಅನಾಥನಾದೆನಾ? ಇಲ್ಲಾ ನನ್ನನ್ನು ಅನಾಥ ಮಾಡಲಾಯಿತೇ? ತಿಳಿಯದು. ಅಂತೂ ನನ್ನನ್ನು ಕೇಳುವವರಿಲ್ಲದ ಅನಾಥ ಪ್ರಜ್ಞೆ ನನ್ನಲ್ಲಿ ಬೆಳೆದಿದೆ. ಪ್ರತಿ ದಿನ ನೂರಾರು ಮಂದಿ ತೃಷೆ ತೀರಿಸಲು ನನ್ನ ಬಳಿ ಬರುತ್ತಿದ್ದರು. ಬಸ್ಸು ನಿಲ್ದಾಣದ ಆಗ್ನೇಯ ಬದಿಯಲ್ಲಿದ್ದ ನನ್ನನ್ನು ಅಹಿಂಸಾ ಪರಮೋಧರ್ಮದ ಸ್ನೇಹಿತರು ಆದರಿಸಿ, ಗೌರವಿಸಿ ನನಗೊಂದು ಸುಂದರ ನೆಲೆಯನ್ನು ವಾಯುವ್ಯ ಬದಿಯಲ್ಲಿ ನಿರ್ಮಿಸಿದರು.
ಆದರೆ ದಿನ ಕಳೆದಂತೆ ನನ್ನ ಅಹಿಂಸಾ ಸ್ನೇಹಿತರು ನನ್ನ ಬಗೆಗೆ ಆಸ್ಥೆಯನ್ನು ಬಿಟ್ಟುಬಿಟ್ಟರು. ಅವರ ಒಡನಾಟ, ಇತರ ಜನರ ಪ್ರೀತಿಯನ್ನು ಕಳಕೊಂಡು ನಾನು ಎಲ್ಲರಿಂದಲೂ ದೂರವಾದೆ. ನನ್ನಲ್ಲಿದ್ದ ಪೈಪುಗಳು ತುಕ್ಕು ಹಿಡಿದು ಊನಗೊಂಡವು. ನನ್ನ ಒಂದೊಂದೇ ಅಂಗಗಳು ಊನಗೊಂಡಂತೆ, ಅವೆಲ್ಲವೂ ಮಾಯವಾಗಹತ್ತಿದವು. ವಿಕಲಾಂಗನಾದ ನನ್ನ ಮೇಲೆ ಕಲ್ಲು, ಮಣ್ಣು, ಇತ್ಯಾದಿ ಎಲ್ಲಾ ತುರುಕಲಾಯಿತು.
ನನ್ನ ವಿಕಲಾಂಗತೆ ಕಂಡು ನನ್ನ ಮೇಲೆ ಬಹಿರ್ದೆಸೆಗೂ ಪ್ರಾರಂಭಿಸಿದರು. ನನ್ನ ಅಹಿಂಸಾ ಮಿತ್ರರು ಆಗಲೂ ನನ್ನತ್ತ ಗಮನಿಸಲಿಲ್ಲ. ನನಗೆ ಬಹಳ ಖೇದವಾಯಿತು.
ಅವರ ಗುರುತು ನನ್ನಲ್ಲಿ ಇರುವುದರಿಂದ ಈಗಲೂ ನನಗೆ ಅವರ ಮಿತ್ರತ್ವ ಬೇಕೆಂಬ ಆಸೆ. ಇನ್ನಾದರೂ ನನ್ನನ್ನು ಹಿಡಿದೆತ್ತಿ, ಸಿಂಗರಿಸಿ, ಅಲ್ಲೇ ಸ್ವಲ್ಪ ದೂರದಲ್ಲಿರುವ, ಈಗಿನ ಶಾಸಕರು ಎಂ.ಆರ್.ಪಿ.ಎಲ್. ಸಹಕಾರದಲ್ಲಿ ಒದಗಿಸಿದ ಎಸ್.ಕೆ.ಎಫ್.ಎಲಿಕ್ಸೆರ್ ನ್ನು ನನ್ನಲ್ಲಿ ಇರಿಸಿ ಮತ್ತೆ ಸುಂದರಾಂಗ ಮಾಡಿ ಯಾರೇ?
ನನ್ನ ಹಿಂದೆ ಬೆಳೆದ ಮರಗಳಿಂದ ನಾನು ಸಂಪೂರ್ಣ ವಿಕಲಾಂಗ. ಆ ಮರಗಳು ವಿದ್ಯುತ್ ಕಂಬ, ತಂತಿಗೆ ಮುತ್ತಿಡುತ್ತಾ ಇರುವಾಗ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಅಂತೂ ನನ್ನಿಂದ ಎಲ್ಲರಿಗೂ ತೊಂದರೆಯಾಗಬಹುದೇ ಎಂಬ ಗುಮಾನಿ ಇದೆ. ಆದುದರಿಂದ ನನ್ನ ಆ ಅಹಿಂಸಾ ಮಿತ್ರರು ಆದಷ್ಟು ಬೇಗ ಬಂದು ಕಾಪಾಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಅಣ್ಣಾ, ಅಕ್ಕಾ.