ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭರತ್ ಎನ್ನುವ 4ನೇ ತರಗತಿ ವಿದ್ಯಾರ್ಥಿಯನ್ನು ಮುತ್ತಪ್ಪ ಹಡಗಲಿ ಎನ್ನುವ ಅತಿಥಿ ಶಿಕ್ಷಕ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಭರತ್‌ನನ್ನು ಹೊಡೆಯುವುದು ನೋಡಿ ಅಲ್ಲಿಯೇ ಶಿಕ್ಷಕಿಯಾಗಿದ್ದ ಗೀತಾ ತಡೆಯಲು ಬಂದಾಗ ಆಕೆಗೂ ಬಾರಿಸಿದ್ದಾನೆ. ಮತ್ತೊಬ್ಬ ಶಿಕ್ಷಕ ಸಂಗನಗೌಡ ಪಾಟೀಲ ತಡೆಯಲು ಬಂದರೆ ಅವರಿಗೂ ಬಾರಿಸಿದ್ದಾನೆ. ಬಳಿಕ ಮುಖ್ಯ ಶಿಕ್ಷಕ ಬಿ. ಎಸ್. ಯಾವಗಲ್ ಅವರಿಗೂ ಹೊಡೆಯಲು ಪ್ರಯತ್ನಿಸಿ ಓಡಿಹೋಗಿದ್ದಾನೆ.

ಮಕ್ಕಳೆಲ್ಲ ಚೆಲ್ಲಾಪಿಲ್ಲಿಯಾಗಿ ಹೆದರಿ ಕೂಗುತ್ತ ಓಡಿದರೆ, ಓಡಿ ಬಂದ ಊರವರು ಶಾಲೆಯಲ್ಲಿ ನೆತ್ತರ ಹರಿವು ನೋಡಿ ದಿಗ್ಭ್ರಮೆಗೊಂಡರು. ದಿಗ್ಭ್ರಮೆಯಿಂದ ಹೊರ ಬಂದ ಮುಖ್ಯ ಶಿಕ್ಷಕ ಯಾವಗಲ್ ಅವರು ಕೂಡಲೆ ಮೂವರನ್ನೂ ನರಗುಂದ ತಾಲೂಕು ಆಸ್ಪತ್ರೆಗೆ ಸಾಗಿಸಿದರು. ಸಂಗನಗೌಡ ಪಾಟೀಲ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೇಹ ಸ್ಥಿತಿ ವಿಷಮಿಸಿದ್ದರಿಂದ ತಾಯಿ ಮಗನನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ಒಯ್ಯಲಾಯಿತು. ಬಾಲಕ ಭರತ್ ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾನೆ. ಗೀತಾ ಅವರ ಸ್ಥಿತಿ ಗಂಭೀರವಾಗಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ ಎಂದು ಮುಖ್ಯ ಶಿಕ್ಷಕ ಬಿ. ಎಸ್. ಯಾವಗಲ್ ಪೋಲೀಸರಿಗೆ ತಿಳಿಸಿದ್ದಾರೆ.