ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ರಕ್ಷಕ - ಶಿಕ್ಷಕ ಸಂಘದ ಮಹಾ ಸಭೆಯು ಇತ್ತೀಚೆಗೆ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸರಕಾರೀ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕ  ಶ್ರೀ.ಸುಬ್ಬಪ್ಪ ಕೈಕಂಬ, ಇಂದಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳ ಬಗೆಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗಿದೆ. ಕೊವಿಡ್ ಮಹಾಮಾರಿ ಹೋದರೂ ಮೊಬೈಲ್ ಮಕ್ಕಳಿಗೆ ತಗಲಿದೆ. ಮಕ್ಕಳ ಮಾನಸಿಕ, ದೈಹಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಈ ಅಭ್ಯಾಸದಿಂದ ಹೊರ ಬರುವಂತೆ ತಂದೆ, ತಾಯಿ ಮತ್ತು ಪೋಷಕರು ಗಮನ ಹರಿಸಬೇಕಾಗಿದೆ. ತಮ್ಮ ಮಕ್ಕಳು ಮನೆಯಿಂದ ಹೊರ ಬಿದ್ದ ಮೇಲೆ, ಅವರು ಎಲ್ಲೆಲ್ಲಿ ಹೋಗುತ್ತಾರೆ, ಅವರ ಅಭ್ಯಾಸಗಳೇನು, ಅವರ ಸ್ನೇಹಿತ ವರ್ಗ ಯಾವುದು ಎಂಬ ಎಲ್ಲ ಸೂಕ್ಷ್ಮ ವಿವರಗಳನ್ನು ತಂದೆ, ತಾಯಂದಿರು ಅರಿತಿರುವ ಅಗತ್ಯ ಇದೆ  ಎಂದು ಹೇಳಿದರು. 

ಪ್ರಾಸ್ತಾವಿಕ ಮಾತುಗಳನ್ನು ಆಡಿದ ಕಾಲೇಜಿನ ಪ್ರಾಂಶುಪಾಲ ರೆ|ಡಾ|ಎಂಟೋನಿ ಪ್ರಕಾಶ್ ಮಂತೆರೋ,  ಸಂತಫಿಲೋಮಿನಾ ಕಾಲೇಜು ಸದಾ ಸಮಾನತೆಯ ಶಿಕ್ಷಣಕ್ಕೆ ಒತ್ತು ನೀಡುತ್ತದೆ. ರೇಂಕು ಗಳಿಕೆಯೊಂದೇ ನಮ್ಮ ಗುರಿಯಲ್ಲ. ವಿದ್ಯಾರ್ಥಿಗಳಲ್ಲಿ ವೈಚಾರಿಕತೆಗೆ, ಚಿಂತನೆಗೆ, ಬರವಣಿಗೆಯ ಕೌಶಲ್ಯಕ್ಕೆ, ಅಭಿವ್ಯಕ್ತಿಯ ಪ್ರೌಢಿಮೆಗೆ, ಕ್ರೀಡಾ ಪ್ರತಿಭೆಗೆ ಸಂಪೂರ್ಣ ಆಸ್ಪದ ನೀಡಲಾಗುತ್ತದೆ. ಅವರ ಸರ್ವತೋಮುಖ ಅಭಿವೃದ್ಧಿಯೇ ನಮ್ಮ ಗುರಿ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಚಾಲಕರಾದ ರೆ|ಫಾ|ಲಾರೆನ್ಸ್ ಮಸ್ಕರೇನ್ಹಸ್ ಮನೆಯೇ ಮೊದಲ ಪಾಠಶಾಲೆ. ಈ ಅರ್ಥದಲ್ಲಿ ಹೆತ್ತವರು ಕೂಡ ಗುರುಗಳೇ ಮತ್ತು ಈ ಕಾರ್ಯಕ್ರಮ ಗುರುಗಳಿಬ್ಬರ ಸಮಾಗಮ. ಕಾಲೇಜು ಹಂತದ ಮಕ್ಕಳು ಹದಿ ಹರೆಯದವರು.  ಅವರಲ್ಲಿ ಮೌಲ್ಯವನ್ನು ತುಂಬಿಸುವ ನಮ್ಮಲ್ಲಿ ಆ ಮೌಲ್ಯ ಇರಬೇಕು. ಮಕ್ಕಳಿಗೆ ನಾವು ಹಿರಿಯರಾದವರು ಆದರ್ಶವಾಗಿರಬೇಕು ಎಂದು ಹೇಳಿದರು.

ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ .ಡಿ ಅಮ್ಮಣ್ಣ ರೈ ಸ್ವಾಗತಿಸಿದರು. ಕ್ಯಾಂಪಸ್ ನಿರ್ದೇಶಕ ರೆ|ಫಾ}ಸ್ಟ್ಯಾನಿ ಪಿಂಟೋ, ಮಾಯಿದೆದೆವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಮೌರಿಸ್ ಡಿಸೋಜ, ಉಪಪ್ರಾಂಶುಪಾಲ ಪ್ರೊ.ಉದಯಕಾನ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಾರಿಜಾ ಮತ್ತು ಬಳಗ ಸ್ವಾಗತಿಸಿ, ಪ್ರೊ.ಗಣೇಶ್ ಭಟ್ ವಂದಿಸಿ, ಡಾ|ರಾಧಾಕೃಷ್ಣ ಗೌಡ ನಿರ್ವಹಿಸಿದರು. 

ಸಭಾ ಕಾರ್ಯಕ್ರಮದ ಬಳಿಕ ಸಂಘದ  ಮಹಾಸಭೆ ನಡೆಯಿತು. ಸಂಘದ ಕಾರ್ಯದರ್ಶಿ ಪ್ರೊ.ಪ್ರಶಾಂತ್ ರೈ ವರದಿ ವಾಚಿಸಿದರು, ವಾರ್ಷಿಕ ಆಯ ವ್ಯಯವನ್ನು  ಕೋಶಾಧಿಕಾರಿ ಪ್ರೊ.ಪ್ರೇಮಲತಾ ಮಂಡಿಸಿದರು. 22-23ರ ಸಾಲಿಗೆ ಸಂಘದ ಮೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು  ಪ್ರೊ.ಉದಯಕಾನ ನಡೆಸಿಕೊಟ್ಟರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ.ಕೃಷ್ಣಪ್ರಸಾದ್ ಆಳ್ವ ಅವರು ನಿಕಟಪೂರ್ವ ಅಧ್ಯಕ್ಷ , ಡಿ.ಅಮ್ಮಣ್ಣ ರೈ ಅವರಿಂದ ಅಧಿಕಾರ ಸ್ವೀಕರಿಸಿದರು.