ಮೊದಲ ಬಾರಿಗೆ ಗ್ರಾನ್‌ಸ್ಲಾಮ್ ಫೈನಲ್‌ಗೇರಿ ಅದೂ ತಟಸ್ಥ ಆಟಗಾತಿಯಾಗಿ ಬೆಲಾರಸ್‌ನ ಅರಿಯಾನಾ ಸಬಲೆಂಕಾ ಆಸ್ಟ್ರೇಲಿಯಾ ಓಪನ್ ಟೆನ್ನಿಸ್ ಸಿಂಗಲ್ಸ್ ಚಾಂಪಿಯನ್ ಆದರು. ಪುರುಷರ ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆದ ಸೆರ್ಬಿಯದ ನೊವಾಕ್ ಜಾಕೋವಿಕ್ ಒಟ್ಟು 22 ಗ್ರಾನ್‌ಸ್ಲಾಮ್ ಗೆಲುವುಗಳೊಡನೆ ಸ್ಪೆಯಿನ್‌ನ ರಾಫೆಲ್ ನಡಾಲ್‌ರ ಸಾಧನೆಯನ್ನು ಸರಿಗಟ್ಟಿದರು.
ಜಾಕೋವಿಕ್‌ರಿಗೆ ಇದು ದಾಖಲೆಯ ಹತ್ತನೆಯ ಆಸ್ಟ್ರೇಲಿಯಾ ಓಪನ್ ಗ್ರಾನ್‌ಸ್ಲಾಮ್ ಗೆಲುವಾಗಿದೆ. ಒಂದೇ ಗ್ರಾನ್‌ಸ್ಲಾಮ್‌ನಲ್ಲಿ ಎರಡಂಕಿಯ ಸಾಧನೆ ಮಾಡಿದ ಎರಡನೆಯವರು ಅವರು. ರಾಫೆಲ್ ನಡಾಲ್ ಫ್ರೆಂಚ್ ಓಪನ್ 14 ಬಾರಿ ಗೆದ್ದಿದ್ದಾರೆ.
15 ವರುಷದ ಹಿಂದೆ ತನ್ನ 20ರ ಪ್ರಾಯದಲ್ಲಿ ಜಾಕೋವಿಕ್ ಮೊದಲ ಆಸ್ಟ್ರೇಲಿಯಾ ಓಪನ್ ಟೆನ್ನಿಸ್ ಚಾಂಪಿಯನ್ ಆಗಿದ್ದರು. ಫೈನಲ್‌ನಲ್ಲಿ ಜಾಕೋವಿಕ್ ಗ್ರೀಸ್‌ನ ಸ್ಟೆಫನೋಸ್ ಸಿಟ್ಟಿಪಾಸ್‌ರನ್ನು ಸೋಲಿಸಿದರು. ಎರಡು ಬಾರಿ ಗ್ರಾನ್‌ಸ್ಲಾಮ್ ಫೈನಲ್‌ಗೇರಿದ್ದ ಸಿಟ್ಟಿಪಾಸ್ ಎರಡೂ ಸಲ ಜಾಕೋವಿಕ್‌ಗೆ ಮಣಿದರು.
ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಬೆಲಾರಸ್‌ನ ಅರಿಯಾನಾ ಸಬಲೆಂಕಾ ವಿಂಬಲ್ಡನ್ ಚಾಂಪಿಯನ್ ಎಲೆನಾ ರೈಬಕೀನಾರಿಗೆ ಸೋಲುಣಿಸಿದರು. ಈ ಮೂಲಕ ಸಬಲೆಂಕಾ ಮೂವರು ಫೇವರಿಟ್‌ಗಳನ್ನು ಮಣಿಸಿ ಮೊದಲ ಗ್ರಾನ್‌ಸ್ಲಾಮ್ ಫೈನಲ್‌ನಲ್ಲೇ ಪ್ರಶಸ್ತಿ ಗೆದ್ದರು.
ಮಹಿಳಾ ಡಬಲ್ಸ್ ಪ್ರಶಸ್ತಿ ಜೆಕ್ ಗಣರಾಜ್ಯದ ಜೋಡಿಯಾದ ಕ್ಯಾತೆರಿನಾ ಸಿನಿಯಾಕೋವಾ ಮತ್ತು ಬಾರ್ಬರಾ ಕ್ರೆಜ್ನಿಕೋವಾ ಪಾಲಾಯಿತು. ಕಳೆದ ಮೂರು ವರುಷಗಳಲ್ಲಿ ಹತ್ತು ಮಹಿಳಾ ಗ್ರಾನ್‌ಸ್ಲಾಮ್ ಫೈನಲ್‌ಗೇರಿ ಏಳು ಬಾರಿ ಪ್ರಶಸ್ತಿ ಜಯಿಸಿದೆ.
ಉಕ್ರೇನ್ ಮೇಲೆ ರಶಿಯಾ ಯುದ್ಧ ಸಾರಿದೆ ಎಂದು ರಶಿಯಾ ಮತ್ತು ಬೆಲಾರಸ್ ಗಳನ್ನು ಆಸ್ಟ್ರೇಲಿಯಾ ಓಪನ್ ನಿಂದ ಬಹಿಷ್ಕರಿಸಲಾಗಿತ್ತು. ಬೆಲಾರಸ್ (ಬೈಲೋರಶಿಯಾ) ಮೂಲದ ಸಬಲೆಂಕಾ ಮತ್ತು ರಶಿಯಾ ಮೂಲದ ರೈಬಕೀನಾರಿಗೆ ತಟಸ್ಥ ದೇಶದವರಾಗಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಫೈನಲ್‌ನಲ್ಲಿ ಇಬ್ಬರೂ ತಟಸ್ಥ ಆಟಗಾರರಿದ್ದುದು ಸಹ ದಾಖಲೆ.