ನಿಟ್ಟೆ, ಕಾರ್ಕಳ: ಎನ್.ಎಂ.ಏ.ಎಂ.ಐ.ಟಿ ಸಂಸ್ಥೆಯ ಎಂ.ಸಿ.ಎ ವಿಭಾಗವು ಮಿನಿಸ್ಟ್ರಿ ಆಫ್ ಯೂತ್ ಅಫೇರ್ಸ್ ಅಂಡ್ ಸ್ಪೋರ್ಟ್ಸ್, ಮೈ ಭಾರತ ಉಡುಪಿ ಹಾಗೂ ಸ್ಟಾಫ್ ಡೆವಲಪ್ಮೆಂಟ್ ಸೆಂಟರ್, ನಿಟ್ಟೆ ಇವರೆಲ್ಲರ ಸಹಯೋಗದೊಂದಿಗೆ "ಬಿಲ್ಡಿಂಗ್ ಫ್ಯೂಚರ್ ಇಂಡಿಯಾ" ಎಂಬ ಕಾರ್ಯಾಗಾರವನ್ನು ನಿಟ್ಟೆ ಎನ್.ಎಂ.ಏ.ಎಂ.ಐ.ಟಿ ಯಲ್ಲಿ ಆಯೋಜಿಸಿತ್ತು.
ಕಾರ್ಯಾಗಾರವನ್ನು ಉದ್ಧೇಶಿಸಿ ದಕ್ಷಿಣ ಕನ್ನಡ ಜಿಲ್ಲಾ ಮೈ ಭಾರತ ಯುವ ಅಧಿಕಾರಿ ಉಲ್ಲಾಸ್ ಕೆ.ಟಿ.ಕೆ. ಮಾತನಾಡಿದರು. ಅವರು ಯುವಕರು ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಸ್ವ ಉದ್ಯೋಗದಲ್ಲಿ ತಮ್ಮ ಭವಿಷ್ಯ ನಿರ್ಮಿಸಬಹುದು ಎಂಬುದನ್ನು ಒತ್ತಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ಎನ್.ಎಂ.ಏ.ಎಂ.ಐ.ಟಿ ಯ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಲಂಕರ್ ವಹಿಸಿ, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಸ್ವ ಉದ್ಯೋಗದತ್ತ ತೋರಿಸುತ್ತಿರುವ ಆಸಕ್ತಿಯ ಬಗ್ಗೆ ಮಾತನಾಡಿ, ಸರ್ಕಾರದ ಯೋಜನೆಗಳು ಈ ಯುಗದಲ್ಲಿ ತುಂಬಾ ಉಪಯುಕ್ತವೆಂದರು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಸಿ.ಎ. ಎಸ್.ಎಸ್. ನಾಯಕ್, ಎಂ.ಎಸ್.ಎಂ.ಇ, ಸ್ಟಾರ್ಟ್‌ಅಪ್ ಮೆಂಟರ್ ಭಾಗವಹಿಸಿ ವಿದ್ಯಾರ್ಥಿಗಳಿಗೆ ಲಭ್ಯವಿರುವ ಹಣಕಾಸು ಸೌಲಭ್ಯಗಳು ಮತ್ತು ನೆರವಿನ ಕುರಿತು ಪ್ರಾಯೋಗಿಕ ಮಾಹಿತಿ ನೀಡಿದರು. ಯುವಜನರನ್ನು ಸ್ವ ಉದ್ಯೋಗದತ್ತ ಹೋಗುವಂತೆ ಪ್ರೇರೇಪಿಸಿದರು.
ಎಂ.ಸಿ.ಎ ವಿಭಾಗದ ಮುಖ್ಯಸ್ಥೆ ಪ್ರೊ. ಮಮತಾ ಬಲಿಪ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕಿಯರಾದ ಮಂಗಳ ಶೆಟ್ಟಿ ಮತ್ತು ಸ್ಪೂರ್ತಿ ಪಿ. ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು.
ರಾಮಕೃಷ್ಣ ಆಚಾರ್ಯ (ಮಿಷನ್ ಮ್ಯಾನೇಜರ್, ಸ್ಕಿಲ್ ಡೆವಲಪ್ಮೆಂಟ್) ಮತ್ತು ಮೀರಾ (ಕೌನ್ಸೆಲರ್) ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮೌಲ್ಯಯುತ ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ದೀಕ್ಷಿತಾ ಪ್ರಭು ನಿರೂಪಿಸಿದರು, ಶುಭಶ್ರೀ ಕಾರಂತ್ ಧನ್ಯವಾದ ಅರ್ಪಿಸಿದರು ಹಾಗೂ ವಿದ್ಯಾರ್ಥಿಗಳಾದ ವರುಣ ಕೆ. ಮತ್ತು ಕೆ. ಕಿರಣ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಕಾರ್ಯಕ್ರಮದಲ್ಲಿ 100 ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಪಾಲ್ಗೊಂಡು ಮಾಹಿತಿ ಪಡೆದರು.