ಮಂಗಳೂರು:  ದಕ್ಷಿಣ ಕನ್ನಡ ಜಿಲ್ಲೆಯ ಮೊತ್ತಮೊದಲ ತುಳು ವಾರ್ತಾ ವಾಹಿನಿ 'ನಮ್ಮ ಕುಡ್ಲ' 25ನೇ ವರ್ಷದ ಸಂಭ್ರಮದಲ್ಲಿದ್ದು, ವಾಹಿನಿ ವತಿಯಿಂದ ಪ್ರತೀ ವರ್ಷ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಆಯೋಜಿಸಲಾಗುವ 'ನಮ್ಮ ಕುಡ್ಲ ಗೂಡುದೀಪ ಸ್ಪರ್ಧೆ' ಶನಿವಾರ (ನ.11)  ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆವರಣದಲ್ಲಿ ನಡೆಯಿತು.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಉಪಾಧ್ಯಕ್ಷರಾದ ಊರ್ಮಿಳಾ ರಮೇಶ್‌ ಕುಮಾರ್‌ ದೀಪ ಬೆಳಗಿಸಿದರು.  ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್‌ ಗೂಡು ದೀಪವನ್ನು ಏರಿಸುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು. ಈ ಸಂದರ್ಭ ಕೃಷ್ಣ ಜೆ. ಪಾಲೆಮಾರ್ ಅವರು ಮಾತನಾಡಿ ಹಿಂದಿನ ಕಾಲದಲ್ಲಿ ದೀಪಾವಳಿ ಸಂದರ್ಭದಲ್ಲಿ ಮನೆ ಮನೆಗಳಲ್ಲಿ ಗೂಡು ದೀಪಗಳು ರಾರಾಜಿಸುತ್ತಿದ್ದವು. ಕ್ರಮೇಣ ಈ ಸಂಸ್ಕೃತಿ ನಶಿಸಲು ಆರಂಭಿಸಿತ್ತು. ಇದನ್ನು ಮನಗಂಡು ನಮ್ಮ ಕುಡ್ಲ ವಾಹಿನಿಯು ಗೂಡು ದೀಪ ಸ್ಪರ್ಧೆಯನ್ನು ಏರ್ಪಡಿಸುವ ಮೂಲಕ ಈ ಸಂಸ್ಕೃತಿ ಯನ್ನು ಉಳಿಸಿಕೊಂಡು ಬರಲು ಯುವ ಜನತೆಗೆ ಸ್ಪೂರ್ತಿ  ನೀಡುತ್ತಿದೆ. ಕಳೆದ 24 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಈ ಸ್ಪರ್ಧೆ ಮುಂದುವರಿಯಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು,  ಶಾಸಕ ಡಿ. ವೇದವ್ಯಾಸ ಕಾಮತ್ ಮತ್ತು  ಮಾಜಿ ಸಚಿವರಾದ ವಿನಯ ಕುಮಾರ್‌ ಸೊರಕೆ ಅವರು ಮಾತನಾಡಿ ಗೂಡು ದೀಪ ಸ್ಪರ್ಧೆಯನ್ನು ಏರ್ಪಡಿಸಿ ಈ ಸಂಸ್ಕೃತಿಯನ್ನು ಉಳಿಸಿ ಮುಂದುವರಿಸಲು ಸಹಕಾರ ನೀಡುತ್ತಿರುವ ನಮ್ಮ ಕುಡ್ಲ ವಾಹಿನಿಯ ಕರ್ಕೇರ ಸಹೋದರರಿಗೆ ಅಭಿನಂದನೆ ಸಲ್ಲಿಸಿದರು. ಜತೆಗೆ ಎಲ್ಲರಿಗೂ ದೀಪಾವಳಿಯ ಶುಭಾಶಯ ಸಲ್ಲಿಸಿದರು.

ವೇದಿಕೆಯಲ್ಲಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ  ಎಚ್‌.ಎಸ್. ಸಾಯಿರಾಂ,  ಕೋಶಾಧಿಕಾರಿ ಪದ್ಮರಾಜ್‌ ಆರ್‌., ಟ್ರಸ್ಟಿಗಳಾದ ರವಿ ಶಂಕರ ಮಿಜಾರ್‌ ಮತ್ತು ಹರಿಕೃಷ್ಣ ಬಂಟ್ವಾಳ್‌ , ಸದಸ್ಯಡಾ. ಬಿ. ಜಿ. ಸುವರ್ಣ,ಶೇಖರ್ ಪೂಜಾರಿ, ಉದ್ಯಮಿ ಗೌರವಿ ಅವರು ಉಪಸ್ಥಿತರಿದ್ದರು. ನಮ್ಮಕುಡ್ಲ ವಾಹಿನಿಯ ನಿರ್ದೇಶಕರಾದ ಹರೀಶ್ ಕರ್ಕೇರ , ಲೀಲಾಕ್ಷ ಬಿ. ಕರ್ಕೇರ, ಸುರೇಶ್ ಬಿ. ಕರ್ಕೇರ, ಮೋಹನ್ ಬಿ. ಕರ್ಕೇರ ಅವರು ಉಪಸ್ಥಿತರಿದ್ದರು.  ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಕದ್ರಿ ನವನೀತ್‌ ಶೆಟ್ಟಿ ಸ್ಪರ್ಧೆಯ ನಿಯಮ ವಿವರಿಸಿದರು. ಪ್ರೊ. ಎಂ.ಎಸ್. ಕೋಟ್ಯಾನ್‌ ವಂದಿಸಿದರು. 

ಇದು 24 ನೇ ವರ್ಷದ ನಮ್ಮ ಕುಡ್ಲ ಗೂಡುದೀಪ ಸ್ಪರ್ಧೆಯಾಗಿದ್ದು, ಸಾಂಪ್ರದಾಯಿಕ, ಆಧುನಿಕ ಮತ್ತು ಪ್ರತಿಕೃತಿ ಎಂಬ  ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆದಿದ್ದು, ಸುಮಾರು ಒಂದು ಸಾವಿರ ಸ್ಪರ್ಧಿಗಳು ಭಾಗವಹಿಸಿದ್ದರು. ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಪ್ರಥಮ ಮತ್ತು ದ್ವಿತೀಯ ವಿಜೇತರಿಗೆ ಚಿನ್ನದ ಪದಕ, ತೃತೀಯ ಸ್ಪರ್ಧಾ ವಿಜೇತರು ಬೆಳ್ಳಿ ಪದಕ ಪಡೆಯಲಿರುವರು.