ಮುಂಬಯಿ: ಬಿ.ಎಸ್. ಕೆ.ಬಿ. ಎಸೋಸಿಯೇಶನ್, ಗೋಕುಲ ಶತಮಾನೋತ್ಸವ ಆಚರಣೆಯ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಜುಲೈ 11 ರಿಂದ ಜುಲೈ 19 ರ ವರೆಗೆ ಹಮ್ಮಿಕೊಂಡ ಋಕ್ ಸಂಹಿತಾ ಯಾಗವು ಜುಲೈ 11, ಶುಕ್ರವಾರದಂದು ಶುಭಾರಂಭಗೊಂಡು ಶನಿವಾರ 19, ಜುಲೈ ಯಂದು ಮಹಾ ಪೂರ್ಣಾಹುತಿಯೊಂದಿಗೆ ಅದ್ದೂರಿಯಾಗಿ ಸಂಪನ್ನಗೊಂಡಿತು.
ಚೆನ್ನೈ ಹಾಗೂ ಉಡುಪಿಯಿಂದ ಆಗಮಿಸಿದ ವೇದಮೂರ್ತಿಗಳಾದ ನಾರಾಯಣ ಆಚಾರ್ಯ, ಶ್ರೀನಿವಾಸ ಆಚಾರ್, ವಿಠ್ಠಲ ಆಚಾರ್, ವಾಮನ ಆಚಾರ್, ರಾಘವೇಂದ್ರ ಆಚಾರ್, ಮನೋಹರ ಆಚಾರ್, ವೇದವ್ಯಾಸ ಆಚಾರ್, ರವಿ ಕುಮಾರ್ ಆಚಾರ್ಯ, ಗೋಕುಲದ ಪ್ರಧಾನ ಅರ್ಚಕರಾದ ವೇದಮೂರ್ತಿ ದರೆಗುಡ್ಡೆ ಶ್ರೀನಿವಾಸ್ ಭಟ್ ರವರ ಪ್ರಧಾನಿಕೆಯಲ್ಲಿ ಸತತ 9 ದಿನಗಳ ಕಾಲ ಮುಂಜಾನೆ 6 ರಿಂದ ಮಧ್ಯಾಹ್ನ 12 ರ ವರೆಗೆ ಋಗ್ವೇದ ಪಾರಾಯಣ, ದೈನಂದಿನ ಪೂರ್ಣಾಹುತಿ, ಮಂಗಳಾರತಿ, ದ್ವಾದಶ ಮೂರ್ತಿ ಆರಾಧನೆ, ವಿಪ್ರ ಸತ್ಕಾರ ಇತ್ಯಾದಿ ಅನೇಕ ಧಾರ್ಮಿಕ ವಿಧಿಗಳು ಸುವ್ಯವಸ್ಥಿತವಾಗಿ ನೆರವೇರಿತು. ಸಂಸ್ಥೆಯ ಪರವಾಗಿ ಗೌ. ಕಾರ್ಯದರ್ಶಿ ಅನಂತಪದ್ಮನಾಭ ಪೋತಿ, ಸಹನಾ ಪೋತಿ ದಂಪತಿ, ಕಂಕಣ ಬದ್ಧರಾಗಿ ಯಜಮಾನ ಸ್ಥಾನ ವಹಿಸಿದ್ದರು. ಚಾತುರ್ಮಾಸ್ಯದ ಸಮಯವಾದ್ದರಿಂದ ಋತ್ವಿಜರಿಗೆ, ಯಜಮಾನರಿಗೆ ಚಾತುರ್ಮಾಸ್ಯ ವ್ರತದ ಅಡುಗೆಯನ್ನು ಉಡುಪಿಯಿಂದ ಆಗಮಿಸಿದ ರವಿ ಭಟ್ ರವರು ನಿಯಮಿತವಾಗಿ ತಯಾರಿಸಿದ್ದರು. ಎಲ್ಲರಿಗೂ ಗೋಕುಲದಲ್ಲಿ ಉಳಕೊಳ್ಳಲು ವ್ಯವಸ್ಥೆಯನ್ನು ಮಾಡಲಾಗಿತ್ತು.
ಯಾಗದ ಮಂಗಳಾಚರಣೆಯ ದಿನವಾದ ಶನಿವಾರ ಶ್ರೀ ಗೋಪಾಲಕೃಷ್ಣ ದೇವರ ಉತ್ಸವ ಮೂರ್ತಿಯನ್ನು ಯಾಗಶಾಲೆಯಲ್ಲಿ ಪ್ರತಿಷ್ಠಾಪಿಸಿ ಯಾಗದ ಪೂರ್ಣಾಹುತಿ, ಮಹಾ ಮಂಗಳಾರತಿಯಾದ ನಂತರ ಋತ್ವಿಜರು ಹಾಗೂ ಯಾಗದ ಯಜಮಾನರೊಂದಿಗೆ ಮೆರವಣಿಗೆಯಲ್ಲಿ ದೇವಾಲಯದ ತುಳಸಿ ವೃಂದಾವನದ ಮುಂದೆ ಪ್ರತಿಷ್ಠಾಪಿಸಿ ಪೂಜಾ ವಿಧಿಗಳನ್ನು ನೆರವೇರಿಸಿದರು. ತದನಂತರ ಶ್ರೀ ದೇವರಿಗೆ ಅವಭೃತ ಅಭಿಷೇಕವಾಗುತ್ತಿದ್ದಂತೆ, ಪವಾಡವೆಂಬಂತೆ, ವರುಣ ದೇವ ನಭೋ ಮಂಡಲದಿಂದ ಶ್ರೀ ದೇವರಿಗೆ, ಋತ್ವಿಜರು , ಯಾಗದ ಯಜಮಾನರು ಮತ್ತು ಇನ್ನಿತರರಿಗೆ ತನ್ನ ಪವಿತ್ರ ಜಲದ ವೃಷ್ಟಿಯನ್ನು ಸುರಿಸಿ ಅವಭೃತ ಸ್ನಾನ ಮಾಡಿಸಿದಾಗ ಭಕ್ತ ವೃಂದ ಭಾವುಕರಾಗಿ ಗೋವಿಂದಾ ಗೋವಿಂದಾ ಎಂಬ ಉದ್ಗಾರದೊಂದಿಗೆ ಹರ್ಷ ಪುಳಕಿತರಾದರು.
ಯಾಗ ಶಾಲೆಯಲ್ಲಿ ಧಾರ್ಮಿಕ ವಿಧಿಗಳು ಮುಂದುವರಿದು ಆಚಾರ್ಯ ಪೂಜೆ, ದಂಪತಿ ಪೂಜೆ, ವಿಪ್ರಾರಾಧನೆ ಇತ್ಯಾದಿ ಧಾರ್ಮಿಕ ವಿಧಿಗಳು ನೆರವೇರಿದವು, ಯಾಗಾಂತ್ಯದಲ್ಲಿ ಋತ್ವಿಜರು, ವಿಶ್ವಸ್ಥ ಮಂಡಳಿ ಸದಸ್ಯರು, ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ, ಧಾರ್ಮಿಕ ಸಮಿತಿ ಸದಸ್ಯರಿಗೆ ಪ್ರಾರ್ಥನೆ, ಅನುಗ್ರಹ ಸಂದೇಶ, ಮಹಾಪ್ರಸಾದ ನೀಡಿ ಅನುಗ್ರಹಿಸಿದರು. ಭಕ್ತಾದಿಗಳಿಗೆ ತೀರ್ಥಪ್ರಸಾದ ವಿತರಣೆ, ಅನ್ನ ಸಂತರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
ಯಾಗದ ಅಂಗವಾಗಿ ಪ್ರತಿದಿನ ಸಂಜೆ ಅಷ್ಟಾವಧಾನ ಸೇವಾ ವಿಧಿಯು ವೇದ ಪಾರಾಯಣ, ಶಾಸ್ತ್ರ, ಪುರಾಣ, ಪ್ರವಚನ, ಸಂಗೀತ, ಭಜನೆ, ನೃತ್ಯ,ಕೊಳಲು , ಚೆಂಡೆ, ಸ್ಯಾಕ್ಸೋಫೋನ್ ವಾದನ ಇತ್ಯಾದಿಗಳೊಂದಿಗೆ ವೈಭವವಾಗಿ ಜರಗಿತು. ಯಾಗದ ಮಧ್ಯೆ ಬುಧವಾರದಂದು ಅದಮಾರು ಶ್ರೀಗಳಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮಿಜಿಯವರು ಯಾಗ ಶಾಲೆಗೆ ಆಗಮಿಸಿದಾಗ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ವಿಶ್ವಸ್ಥರಾದ ಬಿ. ರಮಾನಂದ ರಾವ್ ದಂಪತಿ ಸಮೇತ ಶ್ರೀ ಶ್ರೀಯವರ ಪಾದಪೂಜೆ ಗೈದರು. ಶ್ರೀ ಶ್ರೀಯವರ ಸಮ್ಮುಖದಲ್ಲಿ ಅಷ್ಟಾವಧಾನ ಸೇವೆ ಮುಂದುವರಿದು ತಮ್ಮ ಪ್ರವಚನದೊಂದಿಗೆ ಶ್ರೀ ಶ್ರೀಯವರು ಭಕ್ತಾದಿಗಳನ್ನು ಅನುಗ್ರಹಿಸಿದರು.
ಉಪಾಧ್ಯಕ್ಷರಾದ ವಾಮನ್ ಹೊಳ್ಳ, ಕೋಶಾಧಿಕಾರಿ ಹರಿದಾಸ್ ಭಟ್, ಜೊತೆ ಕೋಶಾಧಿಕಾರಿ ಗಣೇಶ್ ಭಟ್, ಜೊತೆ ಕಾರ್ಯದರ್ಶಿ ಚಿತ್ರಾ ಮೇಲ್ಮನೆ, ವಿಶ್ವಸ್ಥ ಮಂಡಳಿ ಸದಸ್ಯರಾದ ಕೃಷ್ಣ ಆಚಾರ್ಯ, ಶೈಲಿನಿ ರಾವ್, ಕೃಷ್ಣ ಆಚಾರ್ಯ, ಜಗದೀಶ್ಚಂದ್ರ ಕುಮಾರ್, ಆರ್.ಎಲ್.ಭಟ್, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ, ಧಾರ್ಮಿಕ ಸಮಿತಿ ಸದಸ್ಯರು, ಮಾಜಿ ಅಧ್ಯಕ್ಷ ಕೆ. ಸುಬ್ಬಣ್ಣ ರಾವ್, ವೇ.ಮೂ. ಎಸ್. ಎನ್. ಉಡುಪ ಮುಂತಾದವರು ಯಾಗ ಕಾಲದಲ್ಲಿ ಉಪಸ್ಥಿತರಿದ್ದರು. ಒಂಬತ್ತು ದಿನಗಳ ಯಾಗ ಕಾಲದಲ್ಲಿ ನೂರಾರು ಭಕ್ತಾದಿಗಳು ಯಾಗಶಾಲೆಗೆ ಆಗಮಿಸಿದ್ದರು.
ಈ ಮಹಾಯಾಗಕ್ಕೆ ಕೊಡುಗೈ ದಾನ ನೀಡಿ ಸಹಕರಿಸಿದ ಪ್ರಾಯೋಜಕರಿಗೆ/ಭಕ್ತಾದಿಗಳಿಗೆ, ವೇ.ಮೂ. ದರೆಗುಡ್ಡೆ ಶ್ರೀನಿವಾಸ್ ಭಟ್ ಫಲ -ಪ್ರಸಾದ ನೀಡಿ ಅನುಗ್ರಹಿಸಿದರು. ಪ್ರತಿ ನಿತ್ಯವೂ ಯಾಗಕ್ಕೆ ಆಗಮಿಸಿದ ಭಕ್ತಾದಿಗಳಿಗೆ ತೀರ್ಥ-ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನೆರವೇರಿತು.