ಮುಂಬಯಿ, ಅ.24: ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ, ಸಾಯನ್, ಬಿ.ಎಸ್.ಕೆ.ಬಿ. ಎಸೋಸಿಯೇಶನ್‍ನ ಸಹಯೋಗದೊಂದಿಗೆ ಶರನ್ನವರಾತ್ರಿಯ ಪರ್ವ ಕಾಲದಲ್ಲಿ ಮಹಾ ನವಮಿ ಪುಣ್ಯ ದಿನವಾದ ಸೋಮವಾರ ದಿನಾಂಕ ಸೋಮವಾರ (ಅ.23)ರಂದು ದೀಪಾರಾಧನೆಯನ್ನು ಗೋಕುಲ  ಸಭಾಗೃಹದಲ್ಲಿ  ಅತ್ಯಂತ ಸಂಭ್ರಮ  ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಿತು. 

ಪ್ರಧಾನ ಪುರೋಹಿತ, ವೇದಮೂರ್ತಿ ದರೆಗುಡ್ಡೆ ಶ್ರೀನಿವಾಸ್ ಭಟ್ ನೇತೃತ್ವದಲ್ಲಿ  ಸಹ ಪುರೋಹಿತ ವರ್ಗದವರಾದ  ಶ್ರೀಧರ್ ಭಟ್, ಕೃಷ್ಣಮೂರ್ತಿ ಭಟ್, ನಾಗರಾಜ್ ಐತಾಳ್, ಚಂದ್ರ ಶೇಖರ್ ಭಟ್, ರಾಮವಿಠಲ ಕಲ್ಲೂರಾಯ, ಗುರುಪ್ರಸಾದ್ ಭಟ್  ಪೂಜಾ ವಿಧಿಗಳಿಗೆ ಸಹಕರಿಸಿದರು. ಸಭಾಗೃಹದಲ್ಲಿ ಪುರೋಹಿತವರ್ಗದವರು ಬೃಹತ್ ಮಂಡಲ ರಚಿಸಿ, ಮಂಡಲ ಮಧ್ಯದಲ್ಲಿ ಶ್ರೀದೇವಿಯನ್ನು ಪ್ರತಿಷ್ಠಾಪಿಸಿ, ಸಪ್ತಶತಿ ಪಾರಾಯಣ, ಭುವನೇಶ್ವರಿ ಪೂಜೆ, ಲಲಿತಾ ಸಹಸ್ರನಾಮ ಪಠನೆ ಇತ್ಯಾದಿ ಪೂಜಾ ವಿದಿ ವಿಧಾನಗಳೊಂದಿಗೆ ಸಾಂಪ್ರದಾಯಿಕವಾಗಿ ದೀಪಾರಾಧನೆ ನೆರವೇರಿಸಿದರು. ಯಜಮಾನ ಸ್ಥಾನವನ್ನು ಸಂಘದ ಕೋಶಾಧಿಕಾರಿ ಹರಿದಾಸ್ ಭಟ್  ಮತ್ತು ಆಶಾ ಭಟ್ ದಂಪತಿ ವಹಿಸಿದ್ದರು.  ರಾಮವಿಠಲ ಕಲ್ಲೂರಾಯರು ಸೇವಾಥಿರ್sಗಳಿಗೆ ಸಂಕಲ್ಪ ನೆರವೇರಿಸಿದರು.

ಇದೇ ಸಂದರ್ಭದಲ್ಲಿ, ಸರಸ್ವತಿ ಪೂಜೆಯ ಅಂಗವಾಗಿ,  ಶಾರದಾ ಮಾತೆಯ ಭಾವಚಿತ್ರ ಹಾಗೂ  ದಾರ್ಮಿಕ ಗ್ರಂಥಗಳನ್ನು ಇರಿಸಿ, ಗೋಕುಲ ಭಜನಾ ಮಂಡಳಿ, ಶ್ರೀಕೃಷ್ಣ ಭಜನಾ ಮಂಡಳಿ ಹಾಗೂ ಹರಿಕೃಷ್ಣ ಭಜನಾ  ಮಂಡಳಿಯಿಂದ ದೇವಿ ಭಜನೆ,  ಸ್ತೋತ್ರ  ಪಠನೆ ಇತ್ಯಾದಿ ನೆರವೇರಿತು.  ರಾಮವಿಠಲ ಕಲ್ಲೂರಾಯರು ಶ್ರೀ ಶಾರದಾ ದೇವಿಗೆ ಮಂಗಳಾರತಿ  ಬೆಳಗಿದರು.  

ಶ್ರೀ ದೇವಿಗೆ ಮಹಾ ಮಂಗಳಾರತಿಯಾದ ನಂತರ ಶ್ರೀ ಬದ್ರಿನಾರಾಯಣ ಪಿಲಿಂಜೆ ಪರಿವಾರದವರ ಪ್ರಾಯೋಜಕತ್ವದಲ್ಲಿ  ಕನ್ನಿಕೆ ಮತ್ತು ಸುವಾಸಿನಿ ಪೂಜೆ ನೆರವೇರಿತು. ಕನ್ನಿಕಾ ಸ್ಥಾನವನ್ನು ಕುಮಾರಿ ವಿಧಿ ರಾವ್. ಹಾಗೂ  ಮಹಾಕಾಳಿ, ಮಹಾಲಕ್ಷ್ಮಿ, ಮಹಾ ಸರಸ್ವತಿ  ಸ್ಥಾನವನ್ನು ಶ್ರೀಮತಿಯರಾದ  ಪ್ರಫುಲ್ಲ ರಾವ್, ಯಶೋದಾ ವೈಲಾಯ  ಮತ್ತು  ಕೀರ್ತಿ ಕಾರಂತ್  ಅಲಂಕರಿಸಿದ್ದರು. 

ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ವಿಶ್ವಸ್ಥ ಮಂಡಳಿ ಹಾಗೂ ಬಿ.ಎಸ್.ಕೆ.ಬಿ. ಅಸೋಸಿಯೇಶನ್‍ನ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರುಗಳ ಸಹಿತ ನೂರಾರು ಭಕ್ತಾದಿಗಳು ಈ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಸೇವಾರ್ಥಿಗಳಿಗೆ ಹಾಗೂ ನೆರೆದ ಭಕ್ತಾದಿಗಳಿಗೆ ತೀರ್ಥ ಪ್ರಸಾದ  ಹಾಗೂ ಪ್ರಸಾದ ಭೋಜನ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.