ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಪುತ್ತಿಗೆ, ಮೂಡುಬಿದಿರೆ: ಒಳ್ಳೆಯ ಮಾತು ಬರಲು ಉತ್ತಮವಾದ ಉತ್ಸಾಹದ ಮನಸ್ಸು ಇರಬೇಕು. ಇದು ಮನುಷ್ಯನನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಉಮಾ ಸಹಿತ ರುದ್ರದೇವರೇ ಸೋಮನಾಥ ಆಗಿದ್ದಾರೆ. ಅಂತಹ ರುದ್ರನ ಸಾನಿಧ್ಯದಲ್ಲಿ ಕಡುವೈರಿಗಳಾದ ನಂದಿ, ಸಿಂಹ, ಇಲಿ, ನಾಗ, ಮಯೂರ ಎಲ್ಲವೂ ಕೂಡಿಕೊಂಡು ಬದುಕುತ್ತವೆ. ಅದಕ್ಕೆ ಕಾರಣ ರುದ್ರನ ಮಹಿಮೆ ಎಂದು ಉಡುಪಿ ಕಾಣಿಯೂರು ಮಠದ ವಿದ್ಯಾ ವಲ್ಲಭ ತೀರ್ಥ ಸ್ವಾಮೀಜಿ ನುಡಿದರು.
ಅವರು ಮೂಡುಬಿದರೆ ತಾಲೂಕಿನ ಪುತ್ತಿಗೆ ಗ್ರಾಮದ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂಬಂಧದ ತಿರುಮಲರಾಯ ಚೌಟ ವೇದಿಕೆಯಲ್ಲಿ ಧಾರ್ಮಿಕ ಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದರು. ಗುರುಪುರ ಜಂಗಮ ಮಠದ ರುದ್ರಮುನಿ ಸ್ವಾಮೀಜಿಯವರು ಉಪಸ್ಥಿತರಿದ್ದರು. ಪೊಳಲಿ ಜ್ಯೋತಿಷ್ಯ ವಿದ್ವಾನ್ ವೇ.ಮೂ.ಕೋಡಿಮಜಲು ಅನಂತ ಪದ್ಮನಾಭ ಉಪಾಧ್ಯಾಯರು ತಮ್ಮ ಧಾರ್ಮಿಕ ಉಪನ್ಯಾಸದಲ್ಲಿ ಸ್ವಾಧ್ಯಾಯ, ಧಾರ್ಮಿಕತೆ ವ್ಯವಹಾರಕ್ಕೆ ಪೂರಕವಾಗಿರಬೇಕು. ಶಾಸ್ತ್ರ ಸಮ್ಮತ ಜ್ಞಾನದಿಂದ ಕರ್ಮಕ್ಕೆ ಪ್ರಾಯಶ್ಚಿತ್ತ ಕಾರ್ಯ ಭಕ್ತಿ, ಸ್ಮರಣೆ, ಭಜನೆಗಳಿಂದ ನಡೆದು ಮನಸ್ಸಿಗೆ ನೆಮ್ಮದಿ, ಶಾಂತಿ ದೊರೆಯುತ್ತದೆ ಎಂದರು.
ದೇವರು, ಮಾತಾಪಿತ್ರ ಋಣ ತೀರಿಸುವುದೇ ಬದುಕಿನ ಧ್ಯೇಯ ಎಂದು ಕಟೀಲು ಲಕ್ಷ್ಮೀ ನಾರಾಯಣ ಆಸ್ರಣ್ಣ ಹೇಳಿದರು. ತತ್ವಗಳ ಮೇಲೆ ನೆಲೆಗೊಂಡಿರುವ ಸನಾತನ ಧರ್ಮವೇ ಸದಾ ಸ್ಮರಣೀಯ ಎಂದು ಕೇಂದ್ರದ ಮಾಜಿ ಮಂತ್ರಿ, ರಾಜ್ಯದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳದ ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್ ಮಾತನಾಡಿ ಆತ್ಮಶಕ್ತಿಯ ಸಾಧನೆ ಶ್ರೇಷ್ಠವಾಗಿ ಬೆಳಗುತ್ತಿರುವದು ಇಲ್ಲಿ ವೇದ್ಯವಾಗುತ್ತಿದೆ ಎಂದರು., ಕೆ.ಎಂ.ಎಫ್. ನ ಸುಚರಿತ ಶೆಟ್ಟಿ ಶುಭಹಾರೈಸಿದರು. ವೇದಿಕೆಯಲ್ಲಿ ಡಾ.ಪದ್ಮನಾಭ ಉಡುಪ, ಶರವು ದೇವಾಲಯದ ರಾಘವೇಂದ್ರ ಶಾಸ್ತ್ರಿ, ರಾಮ್ ಪ್ರಸಾದ್ ಭಟ್, ಪುತ್ತಿಗೆ ಪಂಚಾಯತ್ ಅಧ್ಯಕ್ಷೆ ರಾಧಾ, ಕಾಯರ್ ಪುಂಡು ಸುಭಾಷ್ ದೇವಾಡಿಗ, ಜಲಗೋಳಿ ಭಾಸ್ಕರ್ ಕೋಟ್ಯಾನ್, ಅರ್ಬಿ ಲಿಂಗಪ್ಪ ಗೌಡ, ಮಿಜಾರು ಶಕ್ತಿ ಪ್ರಸಾದ್ ಶೆಟ್ಟಿ ಹಾಜರಿದ್ದರು. ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರ್ವಹಿಸಿದರು.