ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ: ಅಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ ಎಂದು ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಆರ್ ಎಸ್ ಎಸ್ 100: ಶತ ಪಥ ಸಂಚಲನ ಕೃತಿ ಲೋಕಾರ್ಪಣೆ ಯಾಗಲಿದೆ ಎಂದು ತತ್ಸಂಬಂಧಿ ಕಾರ್ಯಕ್ರಮದ ಪೂರ್ವಭಾವಿ ಪತ್ರಿಕಾಗೋಷ್ಠಿಯಲ್ಲಿ ಲೇಖಕ, ಪ್ರಕಾಶಕ ನಂದಿಕೇಶ್ವರ ಸೇವಾ ಟ್ರಸ್ಟ್ ನ ಅಧ್ಯಕ್ಷ, ಮಾಜಿ ಪತ್ರಕರ್ತ ಹಾಗೂ ಶಿಕ್ಷಕ ಶಿಕಾರಿಪುರ ಈಶ್ವರ ಭಟ್ ತಿಳಿಸಿದ್ದಾರೆ. 

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪನೆ, ಹಿನ್ನೆಲೆ, ನೂರು ವರ್ಷಗಳ ಏಳು ಬೀಳು, ಚಟುವಟಿಕೆಗಳನ್ನು ಸಮಗ್ರವಾಗಿ ನೆನಪಿಸಿಕೊಟ್ಟ ಈಶ್ವರ ಭಟ್ ಅವರು ಮಾತನಾಡಿ: ಸರ್ವರ ಉದ್ಧಾರ, ಸ್ವದೇಶಿ ಚಿಂತನೆ, ತಾಯಿ ಭಾರತಿಗೆ ನಮನ, ಸ್ವಸ್ಥ ಸಮಾಜ ಹಾಗೂ ಸಮಗ್ರ ದೇಶದ ಅಭಿವೃದ್ಧಿಯನ್ನು ಚಿಂತನೆಯಲ್ಲಿಟ್ಟುಕೊಂಡು ಸಂಘ ಪರಿವಾರ ತನ್ನ ವಿವಿಧ ಶಾಖೆಗಳ ಮೂಲಕವಾಗಿ ಪರಿಸರ ಸಂರಕ್ಷಣೆ, ಸಾಮಾಜಿಕ ಸಾಮರಸ್ಯ, ಅಸ್ಪೃಶ್ಯತಾ ನಿವಾರಣೆ, ಸ್ವದೇಶಿ ಜಾಗರಣೆ, ಕುಟುಂಬ ಪ್ರಬೋಧನೆ, ನಾಗರಿಕ ಕರ್ತವ್ಯ ಜಾಗೃತಿ ಎಂಬಿತ್ಯಾದಿ ಉದ್ದೇಶಗಳನ್ನು ಇಟ್ಟುಕೊಂಡು ಸುಮಾರು ಒಂದುವರೆ ಲಕ್ಷ ಗ್ರಾಮಗಳನ್ನು ದತ್ತು ಸ್ವೀಕರಿಸಿ ಪ್ರತೀ ಗ್ರಾಮಗಳಲ್ಲಿ ವಿಕಾಸದ ಮಜಲುಗಳನ್ನು ತೆರೆಯುವಂತೆ ಮಾಡುತ್ತಿದೆ. ವ್ಯಸನ ಮುಕ್ತ, ಸ್ವಾವಲಂಬಿ, ಸ್ವಚ್ಛ, ಸದೃಢ, ಸಜ್ಜನ ಶಕ್ತಿಯ ಒಗ್ಗೂಡುವಿಕೆಯೊಂದಿಗೆ ರಾಷ್ಟ್ರಭಕ್ತರು ರಾಷ್ಟ್ರ ರಥದ ಪ್ರಗತಿ ಪಥವನ್ನು ಮುನ್ನಡೆಸುವ ಕಾರ್ಯದಲ್ಲಿ ಸದಾ ಕಂಕಣ ಬದ್ಧರಾಗಿದ್ದಾರೆ. 

ಪ್ರಪಂಚದ ಒಟ್ಟು 100 ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶ್ವ ಹಿಂದೂ ಪರಿಷತ್ ವಿವಿಧ ಹೆಸರಿನಲ್ಲಿ ಸೇವಾ ಚಟುವಟಿಕೆಗಳನ್ನು ಮುಂದುವರಿಸುತ್ತಿದೆ. ಜಾತಿ, ಮತ, ಪ್ರಾಂತ, ಪಂಥ ರಹಿತವಾಗಿ ನಿಸ್ವಾರ್ಥ ಸೇವೆಯನ್ನು ಒದಗಿಸುತ್ತಿರುವ ಒಂದು ಕೋಟಿಗೂ ಹೆಚ್ಚು ಜವಾಬ್ದಾರಿಯುತ ಸೇವಾಕರ್ತರು ಸಂಘದ ಬೆನ್ನೆಲುಬು. ಶೈಕ್ಷಿಕ, ಕಾರ್ಮಿಕ, ತಾಂತ್ರಿಕ, ಇತ್ಯಾದಿ ಸರ್ವಸ್ಪರ್ಶಿ ವ್ಯಾಪ್ತಿಯಾಗಿರುವ ದೇಶಾದ್ಯಂತದ ಆರುವರೆ ಲಕ್ಷ ಗ್ರಾಮಗಳಲ್ಲಿ ನಿರಂತರವಾಗಿ ಕೈಂಕರ್ಯ ನಡೆಸುತ್ತಾ ನೂರು ವರ್ಷಗಳಲ್ಲಿ ಕಾರ್ಯರೂಪಕ್ಕೆ ತರುವ ಪ್ರಯತ್ನ ನಡೆದಿದೆ. ಆ ಎಲ್ಲವನ್ನು ಬರಹ ರೂಪದಲ್ಲಿ ಪುಸ್ತಕದಲ್ಲಿ ದಾಖಲಿಸಲಾಗಿದೆ. ಪತ್ರಕರ್ತನಾಗಿ, ವಿಮರ್ಶಕನಾಗಿ, ಶಿಕ್ಷಕನಾಗಿ, ಪ್ರಜೆಯಾಗಿ ಕಂಡುಕೊಂಡ ಎಲ್ಲ ವಿಚಾರಗಳನ್ನು ಭಟ್ಟಿ ಇಳಿಸಿ ಪುಸ್ತಕದ ರಚನೆ ಮಾಡಲಾಗಿದೆ. 

ಸುಮಾರು 192 ಪುಟಗಳಲ್ಲಿ ಈ ಗ್ರಂಥ ರಚನೆಯಾಗಿದ್ದು ಸ್ವಾತಂತ್ರ್ಯ ದಿನಾಚರಣೆಯಂದು ವಿದ್ಯಾರ್ಥಿ ಪರಿಷತ್ ನ ರಾಜ್ಯಾಧ್ಯಕ್ಷ, ಲೇಖಕ, ಪ್ರಾಧ್ಯಾಪಕ ಡಾ. ರವಿ ಮಂಡ್ಯ ಬಿಡುಗಡೆ ಮಾಡಲಿದ್ದಾರೆ. ಬೆಂಗಳೂರು ವಿದ್ಯಾಭಾರತಿ ಸಂಸ್ಥೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ್ ಕುಮಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.