ಮೂಡುಬಿದಿರೆ: ಸಮಾಜದ ಸಂಬಂಧಗಳು ಛಿದ್ರಗೊಂಡು ನೈತಿಕ  ಅಧಃಪಥನಕ್ಕೊಳಗಾದಾಗ ನಾವೇ ಕಟ್ಟಿ ಬೆಳೆಸಿದ  ಸಮೃದ್ಧ ವ್ಯವಸ್ಥೆ ಹೇಗೆ ವಿನಾಶದ ಹಾದಿಯನ್ನು ಹಿಡಿಯುತ್ತದೆ ಎಂಬುದನ್ನು ರಾಜಶ್ರೀ ಟಿ ರೈ ಪೆರ್ಲರವರು ಬರೆದ  ಮುಸ್ರಾಲೊ ಪಟ್ಟೊ ಕಾದಂಬರಿ ತೆರೆದಿಡುತ್ತದೆ ಎಂದು  ಕರ್ನಾಟಕ  ಜಾನಪದ  ವಿಶ್ವವಿದ್ಯಾಲಯದ  ವಿಶ್ರಾಂತ ಕುಲಪತಿ  ಡಾ ಕೆ ಚಿನ್ನಪ್ಪ ಗೌಡ ನುಡಿದರು.

ಆಳ್ವಾಸ್ ಶಿಕ್ಷಣ ಸಂಸ್ಥೆ ಹಾಗೂ ಆಳ್ವಾಸ್ ತುಳು ಸಂಸ್ಕ್ರತಿ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ರಾಜಶ್ರೀ ಟಿ ರೈ ಪೆರ್ಲರವರು ಬರೆದ  ಮುಸ್ರಾಲೊ ಪಟ್ಟೊ ಕಾದಂಬರಿ ಬಿಡುಗಡೆ ಹಾಗೂ ಅವಲೋಕನ ಕಾರ್ಯಕ್ರಮದಲ್ಲಿ  ಮಾತನಾಡಿದರು. 

ಒಂದು ಗುತ್ತಿನ ಮನೆಯ ನೈತಿಕ ಅಧಃಪಥನಕ್ಕೆ ಹೇಗೆ ಆ ಗುತ್ತಿನ ಮನೆಯ ನಾಯಕನ ಅಹಂಕಾರ ಕಾರಣವಾಗುತ್ತದೆ ಎಂಬುದನ್ನು ಪರಿಣಾಮಕಾರಿಯಾಗಿ ವಿವರಿಸಿದ ತುಳುವಿನ  ಶ್ರೇಷ್ಠ ಕಾದಂಬರಿಗಳಲ್ಲಿ ಅಗ್ರಗಣ್ಯವಾಗಿ ನಿಲ್ಲುವ ಕಾದಂಬರಿ ಇದು.  ಗುತ್ತಿನ ಮನೆಯ ಒಳಗಡೆ ಇರುವ  ಹೆಣ್ಣಿನ ಅಸಹನೆ, ನೋವು, ಸಂಕಟ, ವೇದನೆ, ಅಸ್ತಿತ್ವದ ಪ್ರಶ್ನೆಗಳನ್ನೊಳಗೊಂಡ ಅಂತರಂಗದ ಪಿಸುಧ್ವನಿಯನ್ನು ಬಹಳ ಮಾರ್ಮಿಕವಾಗಿ ಈ ಕಾದಂಬರಿ ದಾಖಲಿಸಿದೆ.  ಈ ಕಾದಂಬರಿ  ಪ್ರತಿಯೊಬ್ಬರಲ್ಲೂ ಒಂದು ಗಾಢ ಮೌನ ಹಾಗೂ ವಿಷಾದ ಭಾವದ ಜೊತೆಗೆ ಹೊಸ ಚಿಂತನೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗುತ್ತದೆ.  ತುಳುವಿನ ಒದುಗರಿಗೆ ಹೊಸ ಸಂವೇದನೆಯನ್ನು ನೀಡಿ, ತುಳುವಿನ ಸಮೃದ್ಧ ಬದುಕನ್ನ, ಆರಾಧನಾ ಪದ್ದತಿಯನ್ನು ತಿಳಿಸುವ ಒಂದು ಸಾಂಸ್ಕ್ರತಿಕ ಕಥನ.  ಈ ಕಾದಂಬರಿ ಆರಾಮ ಖುರ್ಚಿಯಲ್ಲಿ( ಈಸೀ ಚೇರ್) ಕುಳಿತು ಬರೆದ ಕಥನವಲ್ಲ, ಕಾದಂಬರಿಗಾರ್ತಿಯ ಶ್ರಮ ಪ್ರತಿ ಹಂತದಲ್ಲೂ ನಮ್ಮ ಅರಿವೆಗೆ ಬರುತ್ತದೆ ಎಂದರು. 

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಕೃತಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು. 

ಕಾದಂಬರಿಗಾರ್ತಿ ರಾಜಶ್ರೀ ಟಿ ರೈ ಮಾತನಾಡಿ ‘ನಾವು ಇವತ್ತಿನ ತಪ್ಪನ್ನು ತಿದ್ದಿಕೊಂಡರೆ, ನಾಳೆ ಪಶ್ಚಾತ್ತಾಪ ಪಡುವ ಅವಶ್ಯಕತೆ ಬರುವುದಿಲ್ಲ ಎಂಬ ಸಾರ್ವಕಾಲಿಕ ಸತ್ಯ ಈ ಕಾದಂಬರಿಯ ಮೂಲವಸ್ತು.  ಇಲ್ಲಿ ಬರುವ ಹೆಚ್ಚಿನ ಅಂಶಗಳು ಸ್ವಾನುಭವದ ಸಂಗತಿಗಳಾದರೂ, ಕಾಲ್ಪನಿಕ ಹಿನ್ನಲೆಯಲ್ಲಿ ಪರಿಪೂರ್ಣಗೊಳಿಸದ್ದೇನೆ.  ನನ್ನ ತಾಯಿ ಭಾಷೆಗೆ ಕಾಣಿಕೆ ನೀಡುವ ಹಿನ್ನಲೆಯಲ್ಲಿ 5ನೇ ಕಾದಂಬರಿಯಾಗಿ ಈ ಕೃತಿ ಮೂಡಿಬಂದಿದೆ ಎಂದರು.  ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಡಾ ಕುರಿಯನ್ ಅಧ್ಯಕ್ಷತೆ ವಹಿಸಿದ್ದರು.  ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ  ಉಪಸ್ಥಿತರಿದ್ದರು.   ಆಳ್ವಾಸ್ ತುಳು ಸಂಸ್ಕøತಿ ಅಧ್ಯಯನ ಕೇಂದ್ರದ ಸಂಯೋಜಕ ಡಾ ಯೋಗೀಶ್ ಕೈರೋಡಿ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.  ಶ್ರಾವ್ಯ ಕಾರ್ಯಕ್ರಮ ನಿರೂಪಿಸಿ, ಡಾ ಜ್ಯೋತಿ ರೈ ವಂದಿಸಿದರು.