ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕರಾಗಿದ್ದ ಗುರೂಜಿ ಅವರು ರಾಷ್ಟ್ರಕ್ಕಾಗಿ ತಮ್ಮ ಜೀವನವನ್ನು ತಪಸ್ಸಿನಂತೆ ನಡೆಸಿದ್ದಾರೆ. ರಾಷ್ಟ್ರದ ಒಳಿತು, ಹಿಂದು ಧರ್ಮದ ಉನ್ನತಿಗೆ ಜೀವನದುದ್ದಕ್ಕೂ ಕೆಲಸ ನಿರ್ವಹಿಸಿದ್ದಾರೆ ಎಂದು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್ ಹೇಳಿದರು.

ಸಿಟಿಜನ್ಸ್ ಕೌನ್ಸಿಲ್ ಮಂಗಳೂರು ವತಿಯಿಂದ ನಗರದ ಸಂಘನಿಕೇತನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಚಂದ್ರಶೇಖರ ಭಂಡಾರಿ ಅವರು ಕನ್ನಡಕ್ಕೆ ಅನುವಾದಿಸಿದ ‘ರಾಷ್ಟ್ರತಪಸ್ವಿ ಶ್ರೀಗುರೂಜಿ’ ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಆಶೀರ್ವಚನ ನೀಡಿದರು.

ಗುರೂಜಿ ಅವರು ಹಿಂದು ಧರ್ಮಕ್ಕೆ ನೀಡಿದ ಕೊಡುಗೆ ಅದ್ಭುತ. ರಾಷ್ಟ್ರದ ಮೇಲಿನ ಭಕ್ತಿ ಎಂದರೆ ಅದು ಆಧ್ಯಾತ್ಮಿಕತೆ, ರಾಷ್ಟ್ರಪ್ರೇಮ ಎಂಬುದು ಆಧ್ಯಾತ್ಮಿಕತೆ ಎಂದು ಗುರೂಜಿ ಹೇಳಿದ್ದರು. ಕಠಿಣ ಸಂದರ್ಭದಲ್ಲಿ ತಾಳ್ಮೆ ವಹಿಸಿ ಸವಾಲುಗಳನ್ನು ಎದುರಿಸಿದ್ದರು. ರಾಮಕೃಷ್ಣ ಮಠಕ್ಕೂ ಗುರೂಜಿ ಅವರಿಗೂ ಅವಿನಾಭಾವ ಸಂಬಂಧವಿದ್ದು, ಗುರೂಜಿ ಅವರು ರಾಮಕೃಷ್ಣ ಮಠದ ಸ್ವಾಮೀಜಿಯವರಿಂದ ಮಂತ್ರದೀಕ್ಷೆ ಪಡೆದಿದ್ದರು ಎಂದರು.

ಗ್ರಂಥ ಪರಿಚಯ ಮಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜೇಷ್ಠ ಪ್ರಚಾರಕ ಸು. ರಾಮಣ್ಣ, ಕೇರಳದ ಪ್ರಚಾರಕರಾದ ರಂಗಾ ಹರಿ ಅವರು ಹಿಂದಿಯಲ್ಲಿ ಬರೆದ ಪುಸ್ತಕವನ್ನು ಚಂದ್ರಶೇಖರ ಭಂಡಾರಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಆದರೆ, ಈ ಕೃತಿಯನ್ನು ಓದಿದಾಗ ಇದು ಮೂಲ ಕನ್ನಡ ಕೃತಿಯೆಂದು ಅನಿಸುತ್ತದೆ. 700 ಪುಟಗಳ ಗ್ರಂಥದಲ್ಲಿ ಗುರೂಜಿ ಅವರ ಜೀವನ, ಚಿಂತನೆಗಳ ಹೂರಣವಿದೆ. ಸ್ವಯಂಸೇವಕರಿಗೆ ಕೈಪಿಡಿ ಆಗಬಹುದಾದ ಮೌಲ್ಯ ಈ ಪುಸ್ತಕದಲ್ಲಿದೆ ಎಂದರು.

ಸಂಘದಲ್ಲಿ ವ್ಯಕ್ತಿಪೂಜೆ ಇಲ್ಲ. ವ್ಯಕ್ತಿಪೂಜೆಯನ್ನು ಡಾ. ಹೆಡ್ಗೆವಾರ್, ಗುರೂಜಿ ಅವರು ಒಪ್ಪಿಲ್ಲ. ಆದುದರಿಂದಲೇ ಇಂದು ಸಂಘ ಸಮಾಜದಲ್ಲಿ ವ್ಯಾಪಿಸಿದೆ. ಈ ಗ್ರಂಥದಲ್ಲಿ ಗುರೂಜಿ ಅವರ ವ್ಯಕ್ತಿತ್ವದ ದರ್ಶನವಾಗುತ್ತದೆ. ನನ್ನಿಂದ ಸಂಘ ಬೆಳೆಯುತ್ತಿದೆ ಎಂಬ ಭಾವನೆ ಸ್ವಯಂಸೇವಕನಲ್ಲಿ ಮೂಡಬಾರದು. ಸಂಘಕ್ಕೆ ನಾನು ಅನಿವಾರ್ಯ ಎಂಬ ದುಷ್ಟಬುದ್ದಿಯೂ ಬರಬಾರದು. ಗುರೂಜಿ ಅವರ ವ್ಯಕ್ತಿತ್ವದ ಅನಾವರಣ ಪುಸ್ತಕದಲ್ಲಿ ಆಗಿದೆ. ಈ ಪುಸ್ತಕವನ್ನು ಎಲ್ಲ ಸ್ವಯಂಸೇವಕರೂ ಓದಬೇಕು ಎಂದರು.

ಮಂಗಳೂರು ವಿಶ್ವವಿದ್ಯಾಲಯ ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆ ಛೇರ್ಮನ್ ಪ್ರೊ. ಸೋಮಣ್ಣ ಹೊಂಗಳ್ಳಿ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪ್ರಾಂತ ಕಾರ್ಯವಾಹ ಡಾ.ಪಿ. ವಾಮನ ಶೆಣೈ ಉಪಸ್ಥಿತರಿದ್ದರು. ಸಿಟಿಜನ್ ಕೌನ್ಸಿಲ್ ಮಂಗಳೂರು ಅಧ್ಯಕ್ಷ ಡಾ. ಧನೇಶ ಕುಮಾರ್ ಕೆ.ಯು. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.