ಮಂಗಳೂರು: ವಿಶ್ವವಿದ್ಯಾನಿಲಯ ಬ್ಯಾರಿ ಅಧ್ಯಯನ ಪೀಠದ ವತಿಯಿಂದ ಪದವಿ ಮಟ್ಟದ “ಬ್ಯಾರಿ ಭಾಷಾ ರಸಪ್ರಶ್ನೆ ಸ್ಪರ್ಧೆ – 2023” ಹಿರಾ ಮಹಿಳಾ ಕಾಲೇಜಿನಲ್ಲಿ ನಡೆಯಿತು.
ರಸಪ್ರಶ್ನೆ ಸ್ಪರ್ಧೆ ಉದ್ಘಾಟಿಸಿದ ಶಾಂತಿ ಎಜ್ಯುಕೇಶನ್ ಟ್ರಸ್ಟ್‍ನ ಕಾರ್ಯದರ್ಶಿ ಯು. ಎ. ಅಬ್ದುಲ್ ಕರೀಂ ಮಾತನಾಡಿ, ಬ್ಯಾರಿ ಸಮುದಾಯ ಒಂದು ವಿಶಿಷ್ಟ ಸಮುದಾಯವಾಗಿದ್ದು, ಬ್ಯಾರಿ ಭಾಷೆ ಕರಾವಳಿ ಕರ್ನಾಟಕದ ಶ್ರೀಮಂತ ಭಾಷೆಗಳಲ್ಲೊಂದಾಗಿದೆ. ಬ್ಯಾರಿ ಭಾಷೆಯಲ್ಲಿರುವ ಅನೇಕ ಪದಗಳು ಈಗ ಮಾಯವಾಗಿದ್ದು, ಭಾಷೆಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮದಾಗಿದೆ ಎಂದರು. ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹಿರಾ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಆಯಿಶಾ ಅಸ್ಮಿನ್ ಮಾತನಾಡಿ ಬ್ಯಾರಿ ಭಾಷಾ ರಸಪ್ರಶ್ನೆಯಂತಹ ಸ್ವರ್ಧೆಗಳು ಬ್ಯಾರಿ ಭಾಷೆ, ಸಂಸ್ಕೃತಿ ಹಾಗೂ ಸಾಹಿತ್ಯದ ಬಗ್ಗೆ ಅರಿವು ಮೂಡಿಸಲು ಸಹಾಯಕವಾಗುತ್ತದೆ ಎಂದರು. ಬ್ಯಾರಿ ಸಾಹಿತಿ ಶಂಶುದ್ದೀನ್ ಮಡಿಕೇರಿ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿಕೊಟ್ಟರು. ಹಲವಾರು ಕಾಲೇಜುಗಳ ವಿದ್ಯಾರ್ಥಿಗಳು ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಬ್ಯಾರಿ ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯರಾದ ಡಾ. ಇಸ್ಮಾಯಿಲ್ ಎನ್, ಖಾಲಿದ್ ತಣ್ಣೀರು ಬಾವಿ, ಬಶೀರ್ ಬೈಕಂಪಾಡಿ ಮೊದಲಾದವರು ಉಪಸ್ಥಿತರಿದ್ದರು.
ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಅಬೂಬಕ್ಕರ್ ಸಿದ್ಧಿಕ್ ಪ್ರಸ್ತಾವನೆಗೈದು ಸ್ವಾಗತಿಸಿದರು. ಡಾ. ಇಸ್ಮಾಯಿಲ್ ಎನ್ ವಂದಿಸಿದರು. ಮುಮ್ತಾಜ್ ಕಾರ್ಯಕ್ರಮ ನಿರೂಪಿಸಿದರು.