ದೇಶದ ಹಾಗೂ ರಾಜ್ಯದ ಹಿತದೃಷ್ಟಿಯಿಂದ ಇದು ಅನಿವಾರ್ಯ, ಮತ್ತು ಅತ್ಯಗತ್ಯ. ಜನರು ಎಷ್ಟೇ ಅಂತರ ಕಾಪಾಡಿಕೊಂಡು, ಮಾಸ್ಕ್ ಧರಿಸಿ, ವ್ಯಾಕ್ಸಿನೇಷನ್ ಮಾಡಿಸಿಕೊಂಡು ಕೋವಿಡ್ ನಿಯಂತ್ರಿಸಲು ಪ್ರಯತ್ನಿಸಿದರೂ, ಆಡಳಿತ ಮಂದಿ ಸಾಕಷ್ಟು ಕಟ್ಟು ನಿಟ್ಟಿನ ಕ್ರಮ ಕೈಗೊಂಡರೂ ಕೂಡಾ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ ಎಂಬ ಯಥಾ ಸತ್ಯ ಎಲ್ಲರಿಗೂ ತಿಳಿದಿದೆ. ಅದೇಕೆ ಹಾಗೆ? ಇದಕ್ಕೆ ಹಲವಾರು ಕಾರಣಗಳಿರಬಹುದು. ಕೆಲವನ್ನಾದರೂ ತಿಳಿದು ಪರಿಹಾರ ಇದೆಯೇ ಎಂದು ಚಿಂತಿಸುವ.

1. ನೆರೆಯ ರಾಜ್ಯಗಳೊಂದಿಗಿನ ಅವಿನಾಭಾವ, ಆತ್ಮೀಯ ಸಂಬಂಧ, ಒಡನಾಟ: ನಮಗೆಲ್ಲಾ ತಿಳಿದಂತೆ ನಾವೆಲ್ಲರೂ ಭಾರತೀಯರು ಹೀಗಾಗಿ ಪ್ರಾಂತೀಯ ಭೇದ ಮರೆತು ನಾವೆಲ್ಲರೂ ಒಟ್ಟಾಗಿ ಸೇರುತ್ತೇವೆ. ಗಡಿಜಿಲ್ಲೆಯ ಕನಿಷ್ಠ 10-20 ಕಡೆಗಳಲ್ಲಿ ವಾಹನ ಸಂಪರ್ಕದ ದಾರಿಗಳಿವೆ. ಆದರೆ ಅದಕ್ಕಿಂತ ಹಲವಾರು ಪಟ್ಟು ಹೆಚ್ಚು ಕಾಲ್ನಡಿಗೆಯ ಸಂಪರ್ಕದ ಮಾರ್ಗಗಳಿವೆ. ಹೀಗಿರುವಾಗ ಕೇವಲ ವಾಹನ ಸಂಪರ್ಕದ ಮಾರ್ಗವನ್ನು ಮಾತ್ರ ಮುಚ್ಚುವುದರಿಂದ ಸಾವಿರಾರು ಕೇಸ್ ಪ್ರತೀದಿನ ದಾಖಲಾಗುವ ನೆರೆಯ ರಾಜ್ಯದಿಂದ ಪ್ರಭಾವ ಇಲ್ಲದಿರಲು ಸಾಧ್ಯವೇ? ಕೆಲವೇ ಗಂಟೆ-ನಿಮಿಷಗಳಲ್ಲಿ ಎರಡೂ ರಾಜ್ಯಕ್ಕೆ ಬಂದು ಹೋಗುವ ಸೋಂಕಿತ ವ್ಯಕ್ತಿಗಳ ಪ್ರಭಾವ ಎಷ್ಟೊಂದು ಮಂದಿಯ ಮೇಲೆ ಆಗಲಿಕ್ಕಿಲ್ಲ? ಹೀಗಾಗಿ ಇಂತಹ ಸೋಂಕಿತರ ಪ್ರಭಾವ ತಡೆಗಟ್ಟಲು ಇರುವ ಒಂದೇ ಒಂದು ಮಾರ್ಗ ಸಾರ್ವತ್ರಿಕ, ಎಲ್ಲರಿಗೂ ಲಸಿಕೆ ಹಾಕಿಸುವುದು. ಅದರಲ್ಲೂ ಗಡಿ ಜಿಲ್ಲೆಯ ಎಲ್ಲಾ ಜನರಿಗಂತೂ ಅತ್ಯಗತ್ಯ. ಇಲ್ಲದಿದ್ದಲ್ಲಿ ನಿಯಂತ್ರಣ ಕಷ್ಟ ಸಾಧ್ಯ. ಇದು ಕೇವಲ ಕರ್ನಾಟಕ ಮಾಡಿದರೆ ಸಾಲದು ಎಲ್ಲಾ ರಾಜ್ಯಗಳಲ್ಲೂ ಜಾರಿಗೆ ಬರಬೇಕು.

2. ಎಲ್ಲಾ ಸಭೆ, ಸಮಾರಂಭ, ಕಾರ್ಯಕ್ರಮಗಳಲ್ಲೂ ಲಸಿಕೀಕರಣ: ದೇಶದ ಯಾವುದೇ ಪ್ರದೇಶದ ಮಂದಿ ಯಾವುದೇ ಸಭೆ, ಸಮಾರಂಭ, ಕಾರ್ಯಕ್ರಮ ಆಯೋಜಿಸುವದಿದ್ದರೂ ಕನಿಷ್ಠ 10-15 ಮಂದಿಗೆ ಅಥವಾ ಎಲ್ಲರಿಗೂ ಲಸಿಕೆ ಕೊಡಿಸುವ ಜವಾಬ್ದಾರಿ ಹೊತ್ತುಕೊಳ್ಳಬೇಕು. ಇಲ್ಲದಿದ್ದರೆ ಕಾರ್ಯಕಮಕ್ಕೆ ಅನುಮತಿಯನ್ನೇ ನೀಡಬಾರದು. ಸಾಮಾನ್ಯವಾಗಿ ಗ್ರಾಮೀಣ ಪ್ರದೇಶzಲ್ಲಿ ಯಾವುದೇ ಕಾರ್ಯಕ್ರಮ ಮಾಡುವದಿದ್ದರೂ ಕೂಡಾ ಎಲ್ಲರೂ ಒಟ್ಟು ಸೇರುತ್ತಾರೆ. ಅಂತಹ ಸಂದರ್ಭದಲ್ಲಿ ಯಾರೆಲ್ಲಾ ಬರುತ್ತಾರೋ ಅವರೆಲ್ಲರಿಗೂ ಲಸಿಕೀಕರಣ ಮಾಡುವದರಿಂದ ಅತಿ ಹೆಚ್ಚಿನ ಮಂದಿ ಲಸಿಕೆ ಪಡೆದು ಕೊರೊನಾದಿಂದ ಮುಕ್ತಿ ಹೊಂದಲು ಸಾಧ್ಯವಾಗುತ್ತದೆ. ಮತ್ತು ಆಡಳಿತದ ಮಂದಿಗೆ ವ್ಯಕ್ತಿಗಳನ್ನು ಹುಡುಕಿಕೊಂಡು ಅಲೆದಾಡುವ ಅನಿವಾರ್ಯತೆಯೂ ತಪ್ಪುತ್ತದೆ. ಅಥವಾ ಕಾರ್ಯಕ್ರಮ ಮಾಡುವಾಗ ಹಿಂದಿನಂತೆ ಮಾಸ್ಕ್, ಸ್ಯಾನಿಟೈಸರ್‍ಗೆ ಖರ್ಚು ಮಾಡುವ ಬದಲು ನೇರವಾಗಿ ಲಸಿಕೆಗೆ ಖರ್ಚು ಮಾಡಿ ಸರಕಾರದೊಂದಿಗೆ ಕೈಜೋಡಿಸಬಹುದಾಗಿರುತ್ತದೆ.

3. ಎಲ್ಲಾ ಸಾಮಾಜಿಕ ಜವಾಬ್ದಾರಿಯ ಕ್ಲಬ್‍ಗಳು ಕೈಜೋಡಿಸಲಿ: ದೇಶದ ಹೆಚ್ಚಿನ ಪ್ರದೇಶಗಳಲ್ಲಿ ಹಲವಾರು ಸಾಮಾಜಿಕ ಜವಾಬ್ದಾರಿಯ ಕ್ಲಬ್, ಸಂಘ ಸಂಸ್ಥೆಗಳು ಇವೆ ಅಂತಹ ಸಂಸ್ಥೆಗಳಲ್ಲಿ ಇರುವವರು ತಮ್ಮ ಸಾಮಾಜಿಕ ಜವಾಬ್ದಾರಿಯ ಒಂದು ಭಾಗವಾಗಿ ಸ್ವಲ್ಪ ಮಟ್ಟಿಗಾದರೂ ಲಸಿಕೀಕರಣದಲ್ಲಿ ಸರಕಾರದೊಂದಿಗೆ ಕೈಜೋಡಿಸಿ ಅಲ್ಲಲ್ಲಿ ಲಸಿಕಾ ಮೇಳಗಳನ್ನು ಆಯೋಜಿಸುವುದರಿಂದ ಬಹಳ ಬೇಗ ನೂರು ಶೇಕಡಾ ಯಶಸ್ಸು ಸಾಧ್ಯ. ಇದರಿಂದಾಗಿ ಜನರ ಪ್ರಾಣ, ಧನ ಉಳಿಸಿದ ಸಾಮಾಜಿಕ ಜವಾಬ್ದಾರಿ ಸಾಧ್ಯವಾಗಿ, ಸರಕಾದೊಂದಿಗೆ ಕೈಜೋಡಿಸಿ ಉದ್ದೇಶವೂ ಈಡೇರಿ, ಆರೋಗ್ಯದ ಕಾಳಜಿಯನ್ನು ಜನರಲ್ಲಿ ಹುಟ್ಟಿಸಿದ ಮಹಾನ್ ಕಾರ್ಯ ಸಾಧ್ಯವಾಗಲಿದೆ.

4. ಪ್ರತೀ ಶಾಲೆ-ಕಾಲೇಜುಗಳಲ್ಲಿ ಆರೋಗ್ಯ ಮೇಳಗಳನ್ನು ಮಾಡಿ : ವಿದ್ಯಾರ್ಥಿಗಳಿಗೆ ಲಸಿಕೆಗಳನ್ನು ನೀಡಿ ಕಾಲೇಜುಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಯಾರಿಗೂ ಯಾವುದೇ ರೋಗದ ಲಕ್ಷಣ ಕಂಡುಬಂದಿಲ್ಲ. ಈಗ ಶಾಲೆಗಳನ್ನೂ ಪ್ರಾರಂಭಿಸಲು ಸರಕಾರ ಯೋಚಿಸುತ್ತಿದೆ. ಉದ್ಯೋಗಿಗಳಿಗೆ ಈಗಾಗಲೇ ಲಸಿಕೆ ನೀಡಿರುವುದರಿಂದ ಇದೀಗ ಎಲ್ಲಾ ವಿದ್ಯಾರ್ಥಿಗಳ ಹೆತ್ತವರಿಗೂ ಕಡ್ಡಾಯವಾಗಿ ಲಸಿಕೆ ಹಾಕಬೇಕು. ಮತ್ತು ಎಲ್ಲಾ ಹೆತ್ತವರೂ ಬಂದು ಲಸಿಕೆ ಹಾಕಿಸಿಕೊಂಡ 10-15 ದಿನದ ತರುವಾಯವೇ ಶಾಲೆ ಪ್ರಾರಂಭಿಸುವ ಬಗೆಗೆ ತಿಳಿಹೇಳಬೇಕು. ಇದರಿಂದ ಈಗಾಗಲೇ ಮನೆಯಲ್ಲಿದ್ದು ರೋಸಿಹೋಗಿರುವ ವಿದ್ಯಾರ್ಥಿಗಳು, ಅನಿವಾರ್ಯವಾಗಿ ಹೆತ್ತವರನ್ನು ಲಸಿಕೆ ಪಡೆಯಲು ಒತ್ತಾಯಿಸುತ್ತಾರೆ. ಇದಕ್ಕಾಗಿ ಪ್ರತೀ ಶಾಲೆಯಲ್ಲೂ ಆರೋಗ್ಯ ಮೇಳಗಳನ್ನು ಮಾಡಬೇಕು. ಇದರಿಂದ ಅತಿಹೆಚ್ಚು ಲಸಿಕೀಕರಣ ಸಾಧ್ಯವಾಗಲಿದೆ. ಆದರೆ ಇಲ್ಲೂ ಕೂಡಾ ಸಾಕಷ್ಟು ಪ್ರಮಾಣದಲ್ಲಿ ಲಸಿಕೆಯ ಲಭ್ಯತೆ ಅನಿವಾರ್ಯ.

5. ಸುಳ್ಳು ವದಂತಿಗೆ ತಿಲಾಂಜಲಿ: ಹೆಚ್ಚಿನ ವಾಣಿಜ್ಯಿಕ, ಇತ್ಯಾದಿ ಸಂಸ್ಥೆಗಳು ತಮ್ಮಲ್ಲಿಯ ಎಲ್ಲಾ ಉದ್ಯೋಗಿಗಳಿಗೂ ಲಸಿಕೆಯನ್ನು ಕೊಟ್ಟಿದ್ದರೂ ಕೂಡಾ ಕೆಲವಾರು ಮಂದಿ ಕೆಲವಾರು ಸುಳ್ಳು ವದಂತಿ, ಮಾಹಿತಿಯ ಕಾರಣದಿಂದ ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ. ಅಂತಹ ವ್ಯಕ್ತಿಗಳು ಲಸಿಕೆ ಪಡೆಯದೇ ಸಿಕ್ಕ ಸಿಕ್ಕಲ್ಲಿ ತಿರುಗಾಡಿ ಕೊರೊನಾ ಪ್ರಸಾರಕ್ಕೆ ಕಾರಣವಾಗುತ್ತಿದ್ದಾರೆ. ಹೀಗಾಗಿ ದೇಶದ ಎಲ್ಲೆಲ್ಲಿ ಮಾಲ್ ಇತ್ಯಾದಿ ವಾಣಿಜ್ಯ ವಹಿವಾಟಿನ ದೊಡ್ಡ ಸಂಸ್ಥೆಗಳಿವೆಯೋ ಅಲ್ಲೆಲ್ಲಾ ಲಸಿಕೀಕರಣ ಕಾರ್ಯಕ್ರಮ ಆಯೋಜಿಸಬೇಕು. ಎರಡೂ ಲಸಿಕೆ ಪಡೆದವರಿಗೆ ಮಾತ್ರ ಅಲ್ಲಿಗೆ ಪ್ರವೇಶ ನಿರ್ದಿಷ್ಟ ಪಡಿಸಬೇಕು. ಇದರಿಂದ ಮಾಲ್ ಆಕರ್ಷಿತ ಮಂದಿ ಅನಿವಾರ್ಯವಾಗಿ ಲಸಿಕೆ ಪಡಯಲೇ ಬೇಕಾಗುತ್ತದೆ. ಇದನ್ನು ಚಿತ್ರ ಮಂದಿರಗಳಿಗೂ ಅನ್ವಯಿಸಬಹುದಾಗಿರುತ್ತದೆ. ಆದರೆ ಮಾಸ್ಕ್, ಸ್ಯಾನಿಟೈಸರ್ ಅನಿವಾರ್ಯ.

6. ಗ್ರಾಮೀಣ ಪ್ರದೇಶಗಳ ಪಂಚಾಯತಗಳಲ್ಲಿ: ಲಸಿಕೀಕರಣ ಆಯೋಜಿಸಿ ಪ್ರತೀ ವಾರ್ಡ್‍ನ ಕನಿಷ್ಠ 50 ಮಂದಿಗೆ ಆಯಾ ವಾರ್ಡ್‍ನ ಸದಸ್ಯರು ಪ್ರತೀ ತಿಂಗಳು ಲಸಿಕೆ ಕೊಡಿಸಬೇಕೆಂದು ನಿರ್ದಿಷ್ಟ ಪಡಿಸಬೇಕು. ಇದರಿಂದಾಗಿ ಇಡೀ ದೇಶದಲ್ಲಿರುವ ಅಷ್ಟೂ ಪಂಚಾಯತ್‍ನ ಅಷ್ಟೂ ವಾರ್ಡ್‍ನ ಅತಿ ಹೆಚ್ಚಿನ ಮಂದಿ ಲಸಿಕೆ ಪಡೆದು ಕೊರೊನಾದ ವಿರುದ್ಧ ಹೋರಾಡಲು ಸಾಧ್ಯವಾಗಲಿದೆ. ಇಂತಹ ಕ್ರಮದಿಂದ ಕೆಲವೇ ತಿಂಗಳಲ್ಲಿ ಎಲ್ಲಾ ದೇಶವಾಸಿಗಳು ಲಸಿಕೆ ಪಡೆದು ಕೊರೊನಾವನ್ನು ದೇಶದಿಂದಲೇ ತೊಲಗಿಸಬಹುದಾಗಿದೆ.

ಕಾರಣಗಳು ಯಾವುದೇ ಆಗಿದ್ದರೂ ಕೂಡಾ ಮುಕ್ತಿಗೆ ಇರುವ ಒಂದೇ ಒಂದು ಮಾರ್ಗವೆಂದರೆ ಅತಿ ಹೆಚ್ಚು ಪ್ರಮಾಣದಲ್ಲಿ ಲಸಿಕೆ ಲಭ್ಯವಾಗುವಂತೆ ಮಾಡುವುದು. ಇರುವ ಲಸಿಕೆಗಳು ಎಲ್ಲಾ ಪ್ರದೇಶಗಳಿಗೂ, ಅಥವಾ ಅÀತಿ ಹೆಚ್ಚು ಕೊರೊನಾ ಪ್ರಸರಿಸಿರುವ ಪ್ರದೇಶಗಳಿಗೆ ನೀಡುವುದು. ಅಪೇಕ್ಷಿಸಿದ ಎಲ್ಲರಿಗೂ , ಎಲ್ಲರೂ ಲಸಿಕೀಕರಣದ ಮಹಾಯಜ್ಞವನ್ನು ಆಯೋಜಿಸಿ ಅತಿ ಹೆಚ್ಚು ಮಂದಿ, ಅತ್ಯಂತ ಬೇಗ ಲಸಿಕೆಯನ್ನು ಪಡೆಯುವಂತೆ ಮಾಡಿ ಮುಂದುವರಿದ ದೇಶಗಳಿಗಿಂತಲೂ ಮೊದಲು ಯಶಸ್ಸು ಪಡೆಯುವುದು. ಲಸಿಕೆ ಉತ್ಪಾದನೆ, ವಿತರಣೆಯಲ್ಲಿ ಹೇಗೆ ನಾವು ಮಂಚೂಣಿಯಲ್ಲದ್ದೇವೋ ಅದೇರೀತಿ ಜಾತಿ, ಮತ, ಪಕ್ಷ ಭೇದ ಮರೆತು ಎಲ್ಲರೂ ಲಸಿಕೆ ಪಡೆಯಲು, ಆರೋಗ್ಯ ಕಾಪಾಡಿಕೊಳ್ಳಲು, ರಕ್ಷಣೆ ಹೊಂದಲು ಮನವೊಲಿಸಲು, 75 ನೇ ಸ್ವಾತಂತ್ಯದ ಹೊಸ್ತಿಲಲ್ಲಿ ಎಲ್ಲರೂ ಪಣ ತೊಡಬೇಕಾಗಿದೆ.

ಲೇಖನ: ರಾಯೀ ರಾಜಕುಮಾರ್,ಮೂಡುಬಿದಿರೆ
(ಲೇಖಕರು: ಹಿರಿಯ ಶಿಕ್ಷಕರು, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತರು, ಸಂಪನ್ಮೂಲ ವ್ಯಕ್ತಿ, ಸಮಾಜ ಚಿಂತಕರು, ಲೇಖಕರು,)