ಮುಂಬಯಿ: ನಾನು ಹೆಚ್ಚು ಕವಿತೆಗಳನ್ನು ರಚಿಸಿದವನಲ್ಲ. ಆದರೆ ಅನೇಕರ ಕವಿತೆಗಳನ್ನು ಕೇಳಿ ಅನುಭವಿಸಿದ್ದೇನೆ. ಇಂತಹ ಕಥಾ ಸಂಕಲನ, ಕವಿತೆಗಳ ಕೃತಿಗಳು ಇನ್ನಷ್ಟು ಮೂಡಿಬರಬೇಕು. ಕೇವಲ ಮೊಬಾಯ್ಲ್‌ನಲ್ಲೇ ಜೀವನ ಕಳೆಯುವುದು ಸೂಕ್ತವಲ್ಲ. ಬದಲಾಗಿ ನಾವು ಸಾಹಿತ್ಯ ಮೂಡಿಸುವ ಸಮಯಪ್ರಜ್ಞರಾಗುವ ಅಗತ್ಯವಿದೆ. ಕೇವಲ ಭಾಷೆಯನ್ನು ಮಾತೃಭಾಷೆಯಲ್ಲಿ ಓದಿದಾಗ ಮಾತ್ರ ಅದರ ಸರಳತೆ, ಅನುಭವ, ರುಚಿ, ಸ್ವಾದ ಅರ್ಥೈಸಿಕೊಳ್ಳಲು ಸಾಧ್ಯವಿದೆ. ಮಾತೃಭಾಷೆಯ ಪ್ರಭಾವವು ಪ್ರಧಾನವಾದದ್ದು. ಆ ಪ್ರಭಾವದಿಂದ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದು ಕವಿ, ನಿವೃತ್ತ ಶಿಕ್ಷಕ ಅಮರೇಶ್ ಪಾಟೀಲ್ ತಿಳಿಸಿದರು.

ಮಾಟುಂಗಾ ಪೂರ್ವದ ಮೈಸೂರು ಅಸೋಸಿಯೇಷನ್‌ನ ಕಿರು ಸಭಾಗೃಹದಲ್ಲಿ ಇಂದಿಲ್ಲಿ ಶನಿವಾರ ಸಂಜೆ ‘ಸೃಜನಾ’ ಮುಂಬಯಿ ಕನ್ನಡ ಲೇಖಕಿಯರ ಬಳಗವು ಆಯೋಜಿಸಿದ್ದ ಕವಿ, ಕಾವ್ಯ ಸಮೀಕ್ಷೆ, ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಸೃಜನಾ ಬಳಗ ಪ್ರಕಾಶಿತ ಡಾ| ದಾಕ್ಷಾಯಣಿ ಯಡಹಳ್ಳಿ ರಚಿತ "ಕೊರವಂಜಿ" ಕಥಾ ಸಂಕಲನವನ್ನು ಲೋಕಾರ್ಪಣೆಗೊಳಿಸಿ ಅಮರೇಶ್ ಮಾತನಾಡಿದರು.

ಸೃಜನಾ ಸಂಚಾಲಕಿ ಪದ್ಮಜಾ ಮಣ್ಣೂರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕವಿ, ಶಿಕ್ಷಕ ಡಾ| ದುರ್ಗಪ್ಪ ಕೋಟಿಯವರ್ ಕಾವ್ಯಗಳ ಸಮೀಕ್ಷೆಗೈದು ಕವಿತೆ ಎಂದಿಗೂ ಏಕಾಏಕಿಯಾಗಿ ಹುಟ್ಟುವುದಿಲ್ಲ. ಅದೊಂದು ತಪಸ್ಸು. ಮುಂಬಯಿ ಕವಯಿತ್ರಿಯರು ಸದಾ ಕುತೂಹಲವನ್ನು ಕಣ್ಣಿಗೊತ್ತಿಕೊಂಡೆ ಲವಲವಿಕೆಯಿಂದ ಕಾವ್ಯ ನಿರೀತಿಯಲ್ಲಿ ನಿರತರಾಗುತ್ತಿರುವುದು ಅಭಿನಂದನೀಯ. ಮುಂಬಯಿಯಲ್ಲಿನ ಕನ್ನಡಿತಿಯರು ಅದ್ಭುತವಾಗಿ ಕಾವ್ಯವನ್ನು ಕಟ್ಟಿಕೊಟ್ಟಿದ್ದಾರೆ ಎಂದರು.

ಇತ್ತೀಚಿಗೆ ನಾವೂ ಹಮ್ಮಿಕೊಂಡಿರುವ ಕಥಾ ಸಾಹಿತ್ಯದಲ್ಲಿ ಮಹಿಳಾ ಚಿತ್ರಣ ಕಾರ್ಯಕ್ರಮದಲ್ಲಿ ನಾಲ್ಕು ಭಾಷೆಗಳಲ್ಲಿ ಅಭಿಪ್ರಾಯ ನೀಡಿದ್ದಾರೆ. ಕನ್ನಡ, ಇಂಗ್ಲೀಷ್, ಮರಾಠಿ ಹಾಗೂ ಹಿಂದಿ ಭಾಷೆಗಳಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಮಾಹಿತಿ ನೀಡಿದ್ದು, ಇಂದಿನ ಈ ಕಾರ್ಯಕ್ರಮದಲ್ಲಿ ದುರ್ಗಪ್ಪ ಅವರು ಹೇಳುವ ವಿಷಯ ಮತ್ತು ಕವಿಯತ್ರಿಗಳು ವಾಚಿಸಿದ ಕವಿತೆಗಳು ಈ ಎಲ್ಲಾ ವಿಷಯಗಳನ್ನು ನಾವೂ ಮುದ್ರಿಸುವ ವಿಚಾರವನ್ನು ಮಾಡಿದ್ದೇವೆ ಎಂದು ಪದ್ಮಜಾ ಮಣ್ಣೂರ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.

ಸೃಜನಾ ಪ್ರಧಾನ ರೂವಾರಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿ ಡಾ| ಸುನೀತಾ ಎಂ.ಶೆಟ್ಟಿ, ಸೃಜನಾ ಗೌರವ ಕಾರ್ಯದರ್ಶಿ ಲತಾ ಸಂತೋಷ್ ಶೆಟ್ಟಿ ಮುದ್ದುಮನೆ, ಜತೆ ಕೋಶಾಧಿಕಾರಿ ಸರೋಜಾ ಅಮಾತಿ ವೇದಿಕೆಯಲ್ಲಿದ್ದರು. ಸೃಜನ ಬಳಗದ ಪದಾಧಿಕಾರಿಗಳು, ಸದಸ್ಯೆಯರನೇಕರು ಉಪಸ್ಥಿತರಿದ್ದರು.









ಸರೋಜಾ ಅಮಾತಿ ಪ್ರಾರ್ಥನೆಯನ್ನಾಡಿ ಅತಿಥಿಗಳನ್ನು ಪರಿಚಯಿಸಿದರು. ಪದ್ಮಜಾ ಮಣ್ಣೂರ ಸ್ವಾಗತಿಸಿದ ರು. ಡಾ| ದಾಕ್ಷಾಯಣಿ ಯಡಹಳ್ಳಿ ಪ್ರಸ್ತಾವನೆಗೈದರು. ಕವಯಿತ್ರಿ ಗಾಯತ್ರಿ ನಾಗೇಶ್ ಕೃತಿ ಪರಿಚಯಿಸಿದರು. ಸೃಜನಾ ಬಳಗದ ಸುಮಾರು 20 ಕವಿಯತ್ರಿಯರು ತಮ್ಮ ಕಾವ್ಯ ಪ್ರಸ್ತುತಿಗೈದರು. ಲತಾ ಸಂತೋಷ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶೋಭಾ ಶೆಟ್ಟಿ ಉಪಕಾರ ಸ್ಮರಿಸಿದರು.