ಉಜಿರೆ: ಮೊಸಳೆಯು ಯಾವುದೇ ವಸ್ತುವನ್ನು ಹಿಡಿದರೆ ಅದಕ್ಕೆ ಬಿಡುವ ಅಭ್ಯಾಸವಿಲ್ಲ. ಅದೇರೀತಿ ಮದ್ಯವು ಮನುಷ್ಯನನ್ನು ಆವರಿಸಿದರೆ ಬಿಡಲು ಬಹಳ ಕಷ್ಟ. ಜಾತಿ, ಮತ, ಪಂಥ ಎಂಬ ಭೇದವಿಲ್ಲದೆ ಎಲ್ಲರಲ್ಲಿಯೂ ಮದ್ಯಪಾನ ಸವಾರಿ ನಡೆಸುತ್ತದೆ. ಮದ್ಯಪಾನದಿಂದಾಗಿ ಅನೇಕ ಸಂಸಾರಗಳು ಬೀದಿ ಪಾಲಾಗಿವೆ. ವ್ಯಸನಿಯು ತನ್ನ ಜವಾಬ್ದಾರಿಯನ್ನು ಮರೆತು ವೈಯಕ್ತಿಕವಾಗಿ, ಕೌಟುಂಬಿಕವಾಗಿ ತನ್ನ ವ್ಯಕ್ತಿತ್ವವನ್ನು ಹಾಳು ಮಾಡಿಕೊಳ್ಳುತ್ತಾನೆ. ಹುಚ್ಚು ಧೈರ್ಯ ಭರಿಸುವ ಈ ವ್ಯಸನ ಯಾವುದೇ ಕೆಟ್ಟ ಕೆಲಸ ಮಾಡಲು ಹಿಂಜರಿಯುವುದಿಲ್ಲ. ಸಮಾಜದಲ್ಲಿರುವ ಬಹುತೇಕ ಅನ್ಯಾಯ, ಅನಿಷ್ಠಗಳಿಗೆ ಮದ್ಯಪಾನವೇ ಪ್ರಮುಖಕಾರಣವಾಗಿದೆ. ಆದುದರಿಂದ ಇದನ್ನು ವರ್ಜಿಸಿ ಕುಟುಂಬ ಜೀವನವನ್ನು ಸಾರ್ಥಕಗೊಳಿಸುವಂತೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದರು. ಅವರು ಉಜಿರೆ, ಲಾೈಲದ ಶ್ರೀ ಕ್ಷೇತ್ರ ಧರ್ಮಸ್ಥಳ ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರದಲ್ಲಿ ದಾಖಲಾಗಿ ಮದ್ಯವರ್ಜನದ ಚಿಕಿತ್ಸೆ ಪಡೆದ 200ನೇ ವಿಶೇಷ ಶಿಬಿರದ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಶಿಬಿರದಲ್ಲಿ ರಾಜ್ಯದ23 ಜಿಲ್ಲೆಗಳಿಂದ 51 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಶಿಬಿರಾರ್ಥಿಗಳನ್ನು ಉದ್ದೇಶಿಸಿ “ಇನ್ನು ಮುಂದಿನ ದಿನಗಳಲ್ಲಿ ಮತ್ತೆ ಮದ್ಯಪಾನಕ್ಕೆ ದಾಸನಾದರೆ ಅದು ಅವನ ಸೋಲು ಎಂದು ಅರ್ಥ. ಆದುದರಿಂದ ಹಳೆಯ ಸ್ನೇಹಿತರೊಂದಿಗೆ ಬಹಳ ಎಚ್ಚರಿಕೆಯಿಂದಿರಿ. ಮತ್ತೆ ವ್ಯಸನಕ್ಕೆ ವಾಲದಂತೆ ಮನಸ್ಸನ್ನು, ಬುದ್ಧಿಯನ್ನು ಹಿಡಿತದಲ್ಲಿಟ್ಟುಕೊಳ್ಳಿ. ಗಟ್ಟಿ ಮನಸ್ಸು ಮಾಡಿ,ಇನ್ನು ವಿಚಲತರಾಗುವುದಿಲ್ಲ ಎಂದು ದೃಢವಾದ ಸಂಕಲ್ಪ ಮಾಡಿ. ನಿಮಗೆ ಮತ್ತು ನಿಮ್ಮಕುಟುಂಬಕ್ಕೆಆಯುರಾರೋಗ್ಯ ಭಾಗ್ಯ ಲಭಿಸಲಿ”ಎಂದು ಹಾರೈಸಿದರು.
ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್.ಹೆಚ್. ಮಂಜುನಾಥ್‍ರವರು ಶಿಬಿರಾರ್ಥಿಗಳಿಗೆ ಮತ್ತು ಅವರ ಕುಟುಂಬಸ್ಥರಿಗೆ ವಿಶೇಷ ಮಾರ್ಗದರ್ಶನ ನೀಡಿದರು. ಶಿಬಿರದಲ್ಲಿ ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಯಿಂದ ಮನೋವೈದ್ಯಕೀಯ ವಿಭಾಗದ ಡಾ| ಶ್ರೀನಿವಾಸ್ ಭಟ್, ಸಲಹೆಗಾರರಾದ ಸುಮನ್ ಪಿಂಟೊ, ಡಾ| ಮೇಖಲಾ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ| ಬಾಲಕೃಷ್ಣ ಭಟ್, ಪಂಚಮಿ ಹಿತಾಯುರ್ಧಾಮ ಆಸ್ಪತ್ರೆಯ ಮೋಹನ್‍ದಾಸ್ ಗೌಡ, ಚಿಕಿತ್ಸೆ ನೀಡಿದರು. ಶಿಬಿರಕ್ಕೆ ಫ್ರೊ. ಶಂಕರ್, ಪಟ್ಟಾಭಿರಾಮ, ಅಶೋಕ್ ಪೊಳಲಿ, ಶ್ರೀ ಕೃಷ್ಣ ರವರು ಶಿಬಿರಾರ್ಥಿಗಳಿಗೆ ಮನೋರಂಜನೆಗೈದರು. ಡಿ.ಎ. ರಹಿಮಾನ್, ಡಾ| ನಾರಾಯಣ ಭಟ್, ಯೋಜನೆಯ ಮುಖ್ಯ ನಿರ್ವಹಣಾಧಿಕಾರಿಗಳಾದ ಅನಿಲ್ ಕುಮಾರ್ ಎಸ್.ಎಸ್., ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ. ಪಾೈಸ್, ಯೋಜನಾಧಿಕಾರಿ ಮೋಹನ್, ಶಿಬಿರಾಧಿಕಾರಿ ನಾಗೇಂದ್ರ ಹೆಚ್.ಎಸ್. ಆರೋಗ್ಯ ಸಹಾಯಕ ವೆಂಕಟೇಶ್‍ರವರು ಮಾಹಿತಿ ಕಾರ್ಯಕ್ರಮವನ್ನು ನೆರವೇರಿಸಿದರು. ಮುಂದಿನ ವಿಶೇಷ ಶಿಬಿರವು ದಿನಾಂಕ: 15.05.2023ರಿಂದ ಪ್ರಾರಂಭವಾಗಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.