ಉಜಿರೆ: ಬೆಂಗಳೂರಿನ ಅಖಿಲ ಕರ್ನಾಟಕ ಬ್ರಾಹ್ಮಣ ಯುವಕರ ಸಂಘ ಮತ್ತು “ನಮ್ಮ ಸಂಕಲ್ಪ ಪ್ರತಿಷ್ಠಾನ”ದ ಆಶ್ರಯದಲ್ಲಿ ಸೋಮವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಲೋಕಕಲ್ಯಾಣಾರ್ಥವಾಗಿ 108 ದಂಪತಿಗಳಿಂದ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಗಿರಿಜಾಕಲ್ಯಾಣ ಮಹೋತ್ಸವ ನಡೆಯಿತು.

ಸುಪ್ರಭಾತ, ಗಣಪತಿ ಪೂಜೆ, ದೇವನಾಂದಿ, ಕಂಕಣಧಾರಣೆ, ಗೋ ಪೂಜೆ, ಗಜ ಪೂಜೆ, ಸಾಮೂಹಿಕ ಶಿವಪೂಜೆ, ಅಷ್ಟಾವಧಾನ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳು ನಡೆದವು.

ಮಹರ್ಷಿ ಆನಂದ ಗುರೂಜಿ ಶುಭಾಶಂಸನೆ ಮಾಡಿ ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಈ ಪವಿತ್ರ ಕಾರ್ಯಕ್ರಮದಿಂದ ಸಮಾಜದ ಆಪತ್ತುಗಳೆಲ್ಲ ನಿವಾರಣೆಯಾಗಿ ಸುಖ-ಶಾಂತಿ, ನೆಮ್ಮದಿ ನೆಲೆಸಲೆಂದು ಹಾರೈಸಿದರು.

ಆನಂದ ಗುರೂಜಿಯವರ ನೇತೃತ್ವದಲ್ಲಿ ವಿಶ್ವಶಾಂತಿಗಾಗಿ ಸಾಮೂಹಿಕ ಶಿವಪಂಚಾಕ್ಷರಿ ಪಠಣ ಮಾಡಲಾಯಿತು. ಭಕ್ತಿಗೀತೆಗಳ ಗಾಯನ, ನೃತ್ಯಪ್ರದರ್ಶನ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.