ಬೆಳ್ತಂಗಡಿ: ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಿ ಬಂದಾಗ ಸೌಹಾರ್ದ ಶಾಂತಿ ಪ್ರಾರಂಭವಾಗುತ್ತದೆ. ನಮ್ಮ ಸಂವಿಧಾನದ ತತ್ವವನ್ನು ನಾವು ಅರಿಯಬೇಕು. ಸರ್ವಧರ್ಮ ಸಮನ್ವಯತೆ ಸಾಧಿಸಲು ಸರ್ವಧರ್ಮಿಯರೂ ಪ್ರಯತ್ನಿಸಬೇಕು ಎಂದು ಶ್ರೀ ದಿಗಂಬರ ಜೈನ ಮಠ, ಮೂಡುಬಿದಿರೆ ಇಲ್ಲಿನ 'ಭಾರತ ಭೂಷಣ 'ಸ್ವಸ್ಥಿ ಶ್ರೀ ಭಟ್ಟಾರಕ ಚಾರುಪಕೀರ್ತಿ ಪಂಡಿತಾಚಾರ್ಯ ಭಟ್ಟಾಚಾರ್ಯ ವರ್ಯ ಮಹಾಸ್ವಾಮೀಜಿಗಳು ಹೇಳಿದರು.

ಅವರು ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ನಡೆದ ಸೀರತ್ ಸಾರ್ವಜನಿಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಅವರು ಮುಂದುವರಿದು ಮಾತನಾಡುತ್ತಾ ಸಂವಿಧಾನದ ಮೌಲ್ಯ ಮತ್ತು ಪರಧರ್ಮವನ್ನು ಅರಿಯುವ ವ್ಯವಧಾನ ತೋರುವುದಿಲ್ಲವೋ ಅಲ್ಲಿಯ ತನಕ ನಾವು ಉದ್ದಾರವಾಗಲು ಸಾಧ್ಯವಿಲ್ಲ. ಪರಧರ್ಮ ಸಹಿಷ್ಣುತೆ ಬೆಳೆಸಿ ಸರ್ವಧರ್ಮಿಯರೂ ಸೌಹಾರ್ದತೆಗಾಗಿ ಶ್ರಮಿಸಬೇಕು. ಪರಸ್ಪರ ಧರ್ಮವನ್ನು ಅರಿಯೋಣ. ಇಂತಹ ಸೌಹಾರ್ದ ಸಮ್ಮೇಳನವನ್ನು ಸಂಘಟಿಸೋಣ ಎಂದು ಹೇಳಿದರು.

ಧಾರ್ಮಿಕ ಸೌಹಾರ್ದ: ಸವಾಲುಗಳು ಮತ್ತು ಅವಕಾಶಗಳು ಎಂಬ ವಿಷಯ ದಲ್ಲಿ ದಿಕ್ಸೂಚಿ ಭಾಷಣ ಮಾಡಿ ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ ಮಾತನಾಡುತ್ತಾ ಪರಧರ್ಮವನ್ನು ದ್ವೇಷಿಸುವ ಮೂಲಕ ತನ್ನ ಧರ್ಮನಿಷ್ಠೆ ಸಾಬೀತು ಪಡಿಸುವುದು ಅಸಹ್ಯತನವಾದದ್ದು ಅದು ಧಾರ್ಮಿಕ ದಿವಾಳಿತನವಾಗಿದೆ. ಇತಿಹಾಸದಲ್ಲಿ ಧಾರ್ಮಿಕ ಮಹಾ ಪುರುಷರು ಧರ್ಮವನ್ನು ದ್ವೇಷಿಸಲು ಕಲಿಸಿದ ಒಂದೇ ಒಂದು ಉದಾಹರಣೆ ಕಾಣಸಿಗದು. ಸಮಾಜದಲ್ಲಿ ಧಾರ್ಮಿಕವಾಗಿ ಕೆರಳಿಸುವವರು ನಾಯಕರಾಗುತ್ತಿರುವುದು ಅಪಾಯಕಾರಿಯಾಗಿದೆ.

ಸಮಾಜ ಮಾದಕತೆಯಿಂದ ವಿಕೃತಗೊಂಡಿದೆ. ನಾವು ಸಮಾಜದ ಇಂತಹ ಪಿಡುಗುಗಳ ಬಗ್ಗೆ ನಾವು ಚರ್ಚಿಸುವುದಿಲ್ಲ.

ಸಮಾಜಕ್ಕೆ ವಾಸ್ತವ ವಿಚಾರ ತಿಳಿಸುವ ಮೂಲಕ ಸಂಬಂಧಗಳನ್ನು ಬಲಪಡಿಸಬೇಕಾಗಿದೆ. ಆರೋಗ್ಯ ಪೂರ್ಣ ಸಮಾಜವನ್ನು ನಿರ್ಮಾಣ ಮಾಡೋಣ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡುತ್ತಾ, ಸ್ವಯಂ ಬದಲಾವಣೆಯಿಂದ ಬದಲಾವಣೆಗಳು ಪ್ರಾರಂಭವಾಗುತ್ತದೆ. ಪರಸ್ಪರ ಅರಿಯುವುದರಿಂದ ಬದಲಾವಣೆಗಳು ಪ್ರಾರಂಭವಾಗುತ್ತದೆ ಎಂದು ಹೇಳಿದರು.

ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಅಧ್ಯಕ್ಷರಾದ ರಕ್ಷಿತ್ ಶಿವ ರಾಮ್ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿಕೇತ್ ರಾಜ್ ಮೌರ್ಯ ಮಾತನಾಡುತ್ತಾ ಜಗತ್ತಿಗೆ ಇಸ್ಲಾಮ್ ಬ್ರಾತ್ರತ್ವವನ್ನು ಕಲಿಸಿದೆ. ಜೈನ ಮತ ಶಾಂತಿಯ ಸಂದೇಶವನ್ನು ಕಲಿಸಿತು. ಸ್ವಯಂ ಧರ್ಮವನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನಿಸಿದರೆ ಸಮಸ್ಯೆ ಕಂಡುಬರದು. ಭಾರತವು ಸುಂದರವಾದ ಮಹಾಹೂದೋಟವಾಗಿದೆ. ಮಹಾ ಪುರುಷರು ಮಕರಂದ ಬೀರಿದರು. ಆದರೆ ಕೆಲವರು ಕೊಳಕು ಹಂಚುತ್ತಿದ್ದಾರೆ. ನಾವು ಜಾತಿ ಧರ್ಮ ಭೇದ ಭಾವ ಮರೆತು ಐಕ್ಯದಿಂದ ಬಾಳೋಣ ಎಂದು ಹೇಳಿದರು.

ಬರಕ ಇಂಟರ್ನ್ಯಾಷನಲ್ ಸ್ಕೂಲ್, ಇದರ ಪ್ರಾಂಶುಪಾಲರಾದ ಬಿ.ಎಸ್. ಶರ್ಫುದ್ದೀನ್ ಅಧ್ಯಕ್ಷತೆ ವಹಿಸಿದ್ದರು.

ಶಿಬ್ಲಿಯವರ ಕುರಾನ್ ಪಠಣದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಸಮಾವೇಶದ ಸಂಚಾಲಕ ಅಮೀನ್ ಅಹ್ಸನ್ ರವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ಹಾಜರ್ ಹೈದರ್ ಸಹೋದರಿಯರು ಪ್ರಾರ್ಥನಾ ಗೀತೆ ಹಾಡಿದರು. ಡಾ.ಜಮಾಲುದ್ದೀನ್ ಹಿಂದಿ ಮತ್ತು ಮುಹಮ್ಮದ್ ಸಲ್ವಾನ್ ಬೋಳಂಗಡಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.

ಇದೇ ಸಂದರ್ಭದಲ್ಲಿ ಪ್ರವಾದಿ ಜೀವನಕ್ಕೆ ಸಂಬಂಧಿಸಿದ ಎರಡು ಪುಸ್ತಕಗಳು ಲೋಕಾರ್ಪಣೆಗೊಂಡವು.