ಮಂಗಳೂರು ಡಿ. 26: ಶಕ್ತಿನಗರದಲ್ಲಿರುವ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಆವರಣದಲ್ಲಿ ಗುರುವಾರದಂದು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪರಿವರ್ತನಾ ಟ್ರಸ್ಟ್ ಬೆಂಗಳೂರು ಇವರು ಡ್ರಗ್ಸ್ ಮುಕ್ತ ಕರ್ನಾಟಕ ರಥಯಾತ್ರೆಯನ್ನು ಆಯೋಜಿಸಿದರು. 

ಈ ರಥಯಾತ್ರೆಯು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ನಮ್ಮ ಶಕ್ತಿ ವಿದ್ಯಾಕೇಂದ್ರಕ್ಕೆ ಆಗಮಿಸಿತು. ಈ ಸಂದರ್ಭದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ವೈದ್ಯಕೀಯ ಮಹಾ ವಿದ್ಯಾಲಯದ ಡೀನ್‍ ಡಾ. ಮಹಾಬಲ ಶೆಟ್ಟಿಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಡ್ರಗ್ಸ್ ಸೇವನೆಯಿಂದ ಮಾನಸಿಕ ಹಾಗೂ ದೈಹಿಕ ಸಾಮಥ್ರ್ಯವು ಕಡಿಮೆಯಾಗುತ್ತಾ ಬರುತ್ತದೆ. ಕ್ರೂರವಾಗಿರುವಂತಹ ಸ್ವಭಾವವನ್ನು ಹೊಂದುವಂತಾಗುತ್ತದೆ. ಮನೆಯಲ್ಲಿ ಯಾವುದೇ ನೆಮ್ಮದಿಯ ವಾತಾವರಣ ಇರುವುದಿಲ್ಲ. ಇದರಿಂದ ಮನೆ ಮತ್ತು ಸಮಾಜದಲ್ಲಿ ವ್ಯಸನಿಗಳನ್ನು ನೋಡುವ ದೃಷ್ಠಿಕೋನ ಭಿನ್ನವಾಗಿರುತ್ತದೆ. ಆದುದರಿಂದ ವಿದ್ಯಾರ್ಥಿಗಳು ಹಾಗೂ ಯುವ ಜನರು ಈ ತರದ ಡ್ರಗ್ಸ್ ವ್ಯಸನಕ್ಕೆ ಬಲಿಯಾಗದಂತೆ ನಾವೆಲ್ಲರೂ ಜಾಗೃತಿ ಮಾಡುವ ಆವಶ್ಯಕತೆಯಿದೆ ಎಂದು ಅವರು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಸಂಸ್ಥಾಪಕರಾಗಿರುವ ಡಾ. ಕೆ.ಸಿ ನಾೈಕ್‍ ರವರು ಮಾತನಾಡಿ ನಾವು ಸಂಸ್ಕಾರಯುತ ಶಿಕ್ಷಣವನ್ನು ಪಡೆಯುವುದರ ಮೂಲಕ ದೇಶದ ಸಂಪತ್ತಾಗಬೇಕೆಂಬುದು ನಮ್ಮ ಶಿಕ್ಷಣ ಸಂಸ್ಥೆಯ ಧ್ಯೇಯೋದ್ದೇಶವಾಗಿದೆ. ಆ ನಿಟ್ಟಿನಲ್ಲಿ ನಾವು ನಿರಂತರವಾಗಿರುವಂತಹ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಪರಿವರ್ತನಾ ಟ್ರಸ್ಟ್ ಆಯೋಜಿಸಿರುವಂತಹ ರಥಯಾತ್ರೆ ಒಂದು ಉತ್ತಮವಾಗಿರುವಂತಹ ಕಾರ್ಯವಾಗಿದೆ. ಈ ಕಾರ್ಯವು ಅತ್ಯಂತ ಯಶಸ್ವಿಯಾಗಿ ಮುನ್ನಡೆಯಲಿ ಹಾಗೂ ಡ್ರಗ್ಸ್ ತೆಗೆದುಕೊಳ್ಳುತ್ತಿರುವವರು ಈ ರಥಯಾತ್ರೆಯಿಂದ ಜಾಗೃತಿಗೊಂಡು ಹೊರ ಬರುವಂತಾಗಲಿ ಎಂದು ಶುಭವನ್ನು ಹಾರೈಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೆಲ್ಲರೂ ಸಾಮೂಹಿಕವಾಗಿ ಪ್ರತಿಜ್ಞೆಯನ್ನು ಸ್ವೀಕರಿಸಿದರು.

ಪರಿವರ್ತನ ಟ್ರಸ್ಟ್‍ನ ಸದಸ್ಯರಾದ ಹೇಮಂತೇಶ್, ಲಿಕಿತ್ ಮೂಡುಶೆಡ್ಡೆ, ಸಂದೇಶ್ ಹಾಗೂ ಶಕ್ತಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ಅಧಿಕಾರಿ ಆಗಿರುವ ನಟೇಶ್ ಆಳ್ವರವರು ಉಪಸ್ಥಿತರಿದ್ದರು.