ಉಜಿರೆ: ಪ್ರಶಾಂತ ಪ್ರಕೃತಿಯ ಮಡಿಲಲ್ಲಿ ಪರಿಶುದ್ಧ ಗಾಳಿ, ನೀರು ಮತ್ತು ಸಾತ್ವಿಕ ಆಹಾರ ಸೇವನೆಯಿಂದ ಆರೋಗ್ಯಭಾಗ್ಯ ಹೊಂದಬಹುದು ಎಂದು ಬೆಂಗಳೂರಿನ ಕ್ಷೇಮವನದ ಸಿ.ಇ.ಒ. ಶ್ರದ್ಧಾ ಅಮಿತ್ ಹೇಳಿದರು.

ಅವರು ಗುರುವಾರ ಧರ್ಮಸ್ಥಳದಲ್ಲಿ ಶಾಂತಿವನದಲ್ಲಿರುವ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಲ್ಲಿ ನವೀಕರಿಸಿದ ಮಹಿಳೆಯರ ಚಿಕಿತ್ಸಾ ವಿಭಾಗದ “ಸಿಂದೂರ” ಉದ್ಘಾಟಿಸಿ ಮಾತನಾಡಿದರು.

ಧರ್ಮಸ್ಥಳದ ಪವಿತ್ರ ಸಾನ್ನಿಧ್ಯದಲ್ಲಿ ಶಾಂತಿವನದಲ್ಲಿರುವ ಪ್ರಕೃತಿಚಿಕಿತ್ಸಾ ಆಸ್ಪತ್ರೆಯ ಉತ್ತಮ ವಿನ್ಯಾಸ, ಮೂಲಭೂತ ಸೌಕರ್ಯಗಳು, ಸಕಾಲಿಕವಾಗಿ ಯೋಗಾಭ್ಯಾಸ, ಪ್ರಾರ್ಥನೆ, ಜಪ, ತಪ, ಧ್ಯಾನ, ಚಿಂತನ-ಮಂಥನ ಹಾಗೂ ವೈದ್ಯರು ಮತ್ತು ಸಿಬ್ಬಂದಿಯ ಕರ್ತವ್ಯನಿಷ್ಠೆ, ನಗುಮೊಗದ ಸೌಜನ್ಯಪೂರ್ಣ ಸೇವೆ, ತಾಳ್ಮೆ ಮತ್ತು ಸಂಯಮದಿಂದ  ಇಲ್ಲಿ ಸೇರಿದ “ಸಾಧಕರು” ಶೀಘ್ರ ಪೂರ್ಣ ಆರೋಗ್ಯ ಹೊಂದುತ್ತಾರೆ.

ಇಲ್ಲಿನ ಯಶಸ್ಸಿನ ಫಲವಾಗಿ ಮಣಿಪಾಲದ ಬಳಿ ಪರೀಕಾದಲ್ಲಿ “ಸೌಖ್ಯವನ” ಹಾಗೂ ಬೆಂಗಳೂರಿನ  ನೆಲಮಂಗಲದಲ್ಲಿ “ಕ್ಷೇಮವನ” ಎಂಬ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಪ್ರಾರಂಭಿಸಿದ್ದು, ಮೂರೂ ಆಸ್ಪತ್ರೆಗಳು ಸದಾ “ಹೌಸ್‌ಫುಲ್ ಆಗಿರುವುದು ಪ್ರಕೃತಿಚಿಕಿತ್ಸಾ ಪದ್ಧತಿಯ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸುಪ್ರಿಯಾ ಹರ್ಷೇಂದ್ರ ಕುಮಾರ್ ಶುಭಾಶಂಸನೆ ಮಾಡಿದರು.

ಎಸ್.ಡಿ.ಎಂ. ಪ್ರಕೃತಿಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ ಶೆಟ್ಟಿ, ಪ್ರಕೃತಿಚಿಕಿತ್ಸಾ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ. ಶಿವಪ್ರಸಾದ್ ಶೆಟ್ಟಿ, ಆಡಳಿತಾಧಿಕಾರಿ ಜಗನ್ನಾಥ್ ಮತ್ತು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ.ಎಸ್. ಸತೀಶ್ಚಂದ್ರ ಶುಭ ಹಾರೈಸಿದರು.

ಶಾಂತಿವನ ಟ್ರಸ್ಟ್ನ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ ಸ್ವಾಗತಿಸಿದರು.

ಡಾ. ಸುಜಾತ ದಿನೇಶ್ ಧನ್ಯವಾದವಿತ್ತರು. ಡಾ. ಧನ್ಯಶ್ರೀ ಕಾರ್ಯಕ್ರಮ ನಿರ್ವಹಿಸಿದರು.