ಕಾರ್ಕಳ: ಡಾ.ಎನ್.ಎಸ್.ಎ.ಎಮ್ ಪ್ರಥಮದರ್ಜೆ ಕಾಲೇಜು, ನಿಟ್ಟೆಯ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ಐಕ್ಯೂಎಸಿ ಕೋಶವು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘದ ಆಶ್ರಯದಲ್ಲಿ ರಾಣಿ ಅಬ್ಬಕ್ಕ @500 ಪ್ರೇರಣದಾಯಿ ಉಪನ್ಯಾಸ ಮಾಲಿಕೆಯ 41 ನೇ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘದ ಉಡುಪಿ ಜಿಲ್ಲೆಯ ಅಧ್ಯಕ್ಷ ಡಾ. ಸುರೇಂದ್ರ ಶೆಟ್ಟಿ ಇವರು ಈ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘವು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಮಹೋದಯರನ್ನು ಸ್ಮರಿಸುವ ಕೆಲಸವನ್ನು ಮಾಡುತ್ತಿದ್ದು ಹೊಸ ತಲೆಮಾರಿನ ಸಮುದಾಯಕ್ಕೆ ರಾಷ್ಟ್ರಭಕ್ತಿ, ಸಂಸ್ಕೃತಿ, ಮತ್ತು ನಮ್ಮ ಪೂರ್ವಜರ ತ್ಯಾಗ, ಬಲಿದಾನಗಳ ಬಗ್ಗೆ ತಿಳಿದುಕೊಳ್ಳಬೇಕು ಈ ಹಿನ್ನಲೆಯಲ್ಲಿ ನಾವೂ ಈ ರೀತಿಯ ಸರಣಿ ಉಪನ್ಯಾಸಗಳನ್ನು ಆಯೋಜಿಸಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ್ದ ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಮಿತ್ರಪ್ರಭಾ ಹೆಗ್ಡೆ ಮಾತನಾಡಿ ಅಬ್ಬಕ್ಕಳ ಬದುಕು ಮತ್ತು ರಾಜಕೀಯ ಜೀವನದ ಪರಿಚಯವನ್ನು, ಅಬ್ಬಕ್ಕಳ ವ್ಯಾಪಾರ ವ್ಯವಾರಗಳ ತಂತ್ರ ಹಾಗೂ ಪೋರ್ಚುಗೀಸರ ವಿರುದ್ದ ಹೋರಾಡಿದ ಸಾಹಸಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಹಾಗೆಯೇ ರಾಣಿ ಅಬ್ಬಕ್ಕ ಜೈನಳಾದರೂ ಆಕೆಗೆ ಸರ್ವಧರ್ಮೀಯರ ಬೆಂಬಲವಿತ್ತು, ಹಾಗೂ ಬೆಂಬಿಡದೆ ಹೋರಾಡಿ ಗೆಲ್ಲುವ ಛಲ ಅವಳನ್ನು ಪೋರ್ಚುಗೀಸರ ವಿರುದ್ದ ಗೆಲ್ಲುವ ಹಾಗೆ ಮಾಡಿತು ಎಂದು ಅಬ್ಬಕ್ಕನ ಸಾಹಸ ಗಾಥೆಯನ್ನು ವಿವರಿಸಿದರು. ವೈಯಕ್ತಿಕ ಜೀವನದ ಸೋಲು ಸವಾಲುಗಳ ನಡುವೆಯು ಸಾರ್ವಜಿನಿಕ ಜೀವನದಲ್ಲಿ ವಿಜೃಂಬಿಸಿದ ಅಬ್ಬಕ್ಕನ ಸಾಧನೆ ನಮಗೆ ಮಾದರಿ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ.ವೀಣಾ ಕುಮಾರಿ ಬಿ.ಕೆ ಮಾತನಾಡಿ ಅಬ್ಬಕ್ಕನ ಜೀವನೋತ್ಸಾಹ, ಧೈರ್ಯ, ಸಾಹಸ, ತ್ಯಾಗ, ರಾಜಕೀಯ ಮುತ್ಸದ್ದಿತನಗಳನ್ನು ಇಂದಿನ ವಿದ್ಯಾರ್ಥಿ ಸಮುದಾಯ ಅಳವಡಿಸಿಕೊಳ್ಳಬೇಕು ಹಾಗೂ ಅಬ್ಬಕ್ಕ ನಮ್ಮೆಲ್ಲರ ಆದರ್ಶವಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಐಕ್ಯೂಎಸಿ ಸಂಯೋಜಕರಾದ ಪ್ರಕಾಶ್ ಉಪಸ್ಥಿತರಿದ್ದರು, ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ನಮಿರಾಜ್ ಸ್ವಾಗತಿಸಿದರು, ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಸವಿತಾ ವಂದಿಸಿದರು, ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು.