ಮಂಗಳೂರು: ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪುಟ್ಟಪರ್ತಿಯಲ್ಲಿ ಕೇಂದ್ರ ಕಛೇರಿ ಹೊಂದಿರುವ ಶ್ರೀ ಸತ್ಯ ಸಾಯಿ ಸೆಂಟ್ರಲ್ ಟ್ರಸ್ಟ್ ಗೆ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಕೌನ್ಸಿಲ್ ( ಇ. ಸಿ. ಒ. ಎಸ್. ಒ. ಸಿ) ವಿಶೇಷ ಸಲಹೆಗಾರ ಸ್ಥಾನಮಾನ ನೀಡಿ ಗೌರವಿಸಿದೆ. ಈ ಸ್ಥಾನಮಾನದಿಂದಾಗಿ ಶ್ರೀ ಸತ್ಯಸಾಯಿ ಸೆಂಟ್ರಲ್ ಟ್ರಸ್ಟ್ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಕೌನ್ಸಿಲ್ ಜತೆಗೆ ಸಕ್ರಿಯವಾಗಿ ಮಾತ್ರವಲ್ಲದೇ ಅದರ ಉಪಸಮಿತಿಗಳು ವಿಶೇಷವಾಗಿ ವಿಶ್ವಸಂಸ್ಥೆಯ ಸಚಿವಾಲಯದ ಕಾರ್ಯಕ್ರಮಗಳ ಜತೆಗೆ ಹಲವು ರೀತಿಯಲ್ಲಿ ಸ್ಪಂದಿಸಲು ಅನುಕೂಲವಾಗಿದೆ.
ವಿಶ್ವಸಂಸ್ಥೆಯ ಆರು ಪ್ರಮುಖ ಅಂಗ ಸಂಸ್ಥೆಗಳ ಪೈಕಿ ಪ್ರಮುಖವಾಗಿರುವ ಆರ್ಥಿಕ ಮತ್ತು ಸಾಮಾಜಿಕ ಕೌನ್ಸಿಲ್, ಅಂತಾರಾಷ್ಟ್ರೀಯ ಆರ್ಥಿಕ ಮತ್ತು ಸಾಮಾಜಿಕ ವಿಷಯಗಳಲ್ಲಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಿಗೆ ಮಹತ್ವದ ನೀತಿ ನಿಯಮಗಳನ್ನು ರೂಪಿಸುವಲ್ಲಿ ಪ್ರಧಾನ ವೇದಿಕೆಯಾಗಿದೆ.
ಇಂತಹ ಮಹತ್ವದ ಸಂಸ್ಥೆಯಲ್ಲಿ ಶ್ರೀ ಸತ್ಯ ಸಾಯಿ ಸೆಂಟ್ರಲ್ ಟ್ರಸ್ಟ್ ಗೆ ಸಲಹೆಗಾರ ಸ್ಥಾನ ದೊರೆತಿರುವುದರಿಂದ ಶ್ರೀ ಸತ್ಯಸಾಯಿಬಾಬಾ ಅವರು ಪ್ರತಿಪಾದಿಸಿದ್ದ ಪಂಚ ಶ್ರೇಷ್ಠ ಮೌಲ್ಯಗಳ ಪ್ರಸರಣಕ್ಕೆ ಅನುಕೂಲವಾಗಿದೆ ಎಂದು ಶ್ರೀ ಸತ್ಯ ಸಾಯಿ ಸೆಂಟ್ರಲ್
ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಆರ್ ಜೆ. ರತ್ನಾಕರ್ ಸಂತಸ ವ್ಯಕ್ತ ಪಡಿಸಿರುವುದಾಗಿ ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಯ ಕರ್ನಾಟಕ ರಾಜ್ಯ ಉತ್ತರ ಘಟಕದ ಅಧ್ಯಕ್ಷ ಮಂಗಳೂರಿನ ಎಂ ಪದ್ಮನಾಭ ಪೈ ತಿಳಿಸಿದ್ದಾರೆ.