ಲೇಖನ ರಾಯಿ ರಾಜಕುಮಾರ ಮೂಡುಬಿದಿರೆ

ಕರ್ನಾಟಕದ, ಕನ್ನಡದ ಮೊದಲ ಪತ್ರಿಕೆ 'ಮಂಗಳೂರು ಸಮಾಚಾರ ಬಿಡುಗಡೆಯಾದುದು ಜುಲೈ 1, 1843. ಆದುದರಿಂದ ಜುಲೈ 1 ನ್ನು ಪತ್ರಿಕಾ ದಿನ ಎಂದು ಕರ್ನಾಟಕದಲ್ಲಿ ಆಚರಿಸಲಾಗುತ್ತದೆ. ಜರ್ಮನ್ ಮತ ಪ್ರಚಾರಕ ಹರ್ಮನ್ ಮೊಗ್ಲಿಂಗ್ ಸಂಪಾದಿಸಿದ ಪತ್ರಿಕೆ ಪ್ರತಿ ತಿಂಗಳ 1 ಮತ್ತು 15 ರಂದು ಬಿಡುಗಡೆಯಾಗುತ್ತಿತ್ತು. ಸತತ 16 ಸಂಚಿಕೆಗಳನ್ನು ಪಾಕ್ಷಿಕವಾಗಿ ಪ್ರಕಟಿಸಿದ ಮೊಗ್ಲಿಂಗ್ 1844 ಫೆಬ್ರವರಿಯಿಂದ 'ಕನ್ನಡ ಸಮಾಚಾರ ' ಎಂದು ಹೆಸರು ಬದಲಿಸಿ ಬಳ್ಳಾರಿಯಿಂದ ಪ್ರಕಟಿಸಿದರು.

ಏನೇ ಆದರೂ, ಕರ್ನಾಟಕದಲ್ಲಿ ಜುಲೈ 1 ನ್ನು ಪತ್ರಿಕಾ ದಿನ ಎಂದು ಆಚರಿಸಲಾಗುತ್ತದೆ. ಕಾಲ, ಪ್ರದೇಶದ ಬದಲಾವಣೆಗೆ ಅನುಗುಣವಾಗಿ, ಜನರ ಅಭಿರುಚಿಗೆ ಅನುಸರಿಸಿ ಪತ್ರಿಕಾ ಸ್ವರೂಪ, ರಚನೆ, ಒಳ-ಹೊರಗುಗಳಲ್ಲಿ ಬದಲಾವಣೆ ಆಗಿದೆ. ಅವೆಲ್ಲವನ್ನೂ ತಿಳಿಸಿ, ಮಾಧ್ಯಮದ ಹಾಗೂ ಕಾರ್ಯನಿರತರಿಗೆ ಸೂಕ್ತ ಸ್ಥಾನಮಾನ ಕೊಡಿಸುವ ಕುರಿತು ಸಾರ್ವಜನಿಕ ಅಭಿಪ್ರಾಯ ಮೂಡಿಸುವ ದಿಸೆಯಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮಗಳು ಅಲ್ಲಲ್ಲಿ ನಡೆದು ಮಾಧ್ಯಮದ ಬಗೆಗೆ ಎಚ್ಚರ ಮೂಡಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಸಾಮಾನ್ಯವಾಗಿ ಪತ್ರಿಕಾ ಮಾಧ್ಯಮದಲ್ಲಿ ದುಡಿಯುತ್ತಿರುವ ಪತ್ರಕರ್ತರಲ್ಲಿ ಹಲವಾರು ವಿಧಗಳಿವೆ. ಪತ್ರಕರ್ತರು ಕಳುಹಿಸಿದ ಸಂಗತಿಗಳನ್ನು ಪರಿಶೀಲಿಸಿ, ಸಂಪಾದಿಸಿ ಪ್ರಕಟಿಸುವವರು ಸಂಪಾದಕರು. ಆದರೆ ಪ್ರಾದೇಶಿಕ ಪತ್ರಕರ್ತರು ತೆರೆಮರೆಯಲ್ಲಿ ಸದಾ ಜಾಗರೂಕರಾಗಿ ಕಾರ್ಯ ನಿರ್ವಹಿಸಬೇಕಾಗಿರುತ್ತದೆ. 

ಬಹಳ ಎದೆಗಾರಿಕೆಯ ಪತ್ರಕರ್ತರು ಮಾತ್ರ ಎಲ್ಲವನ್ನೂ ಸಮರ್ಥವಾಗಿ ನಿರ್ವಹಿಸಬಲ್ಲವರಾಗಿರುತ್ತಾರೆ. ಇಲ್ಲವಾದರೆ ಕೆಲವು ಪತ್ರಕರ್ತರು ಇರುವಂತೆ ಶ್ರೀಮಂತರ, ರಾಜಕಾರಣಿಗಳ, ಆಡುಂಬೊಲವಾಗಿ ಬಾಲ ಅಲ್ಲಾಡಿಸುವವರಾಗಿರುತ್ತಾರೆ. ಅಥವಾ ಪಕ್ಷ, ಜಾತಿ, ಮಾಲಕರ ಆದೇಶಕ್ಕೆ ಬೆಂಡಾಗುವವರಾಗಿರುತ್ತಾರೆ. 

ಇದಾವುದಕ್ಕೂ ಬಾಗದೆ, ಸ್ವತಂತ್ರವಾಗಿ, ಯಾರು ಮುಲಾಜಿಗೂ ಒಳಗಾಗದೆ ಇದ್ದುದನ್ನು ಇದ್ದಂತೆ ಬರೆಯುವ, ಸಮಾಜಕ್ಕೆ ಸಮರ್ಥವಾಗಿ ತೋರಿಸಿ ಕೊಡುವ ಎದೆಗಾರಿಕೆ ತೋರುವವರು ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ. ಅಂತಹವರು ಯಾವುದೇ ಜಾತಿ, ಮತ, ಸಂಪ್ರದಾಯ, ಮಾಲಕ, ಶ್ರೀಮಂತರ ಕಪಿಮುಷ್ಟಿಗೆ ಸಿಲುಕದೆ ನೇರ, ದಿಟ್ಟ, ನಿರಂತರ ಎಂಬಂತೆ ಕೆಲಸ ನಿರ್ವಹಿಸಿ ಕೆಲವರ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಆದರೆ ಅಂತಹ ಪತ್ರಕರ್ತರೇ ತಿಳಿಸುವಂತೆ ಅದರಲ್ಲಿರುವ ತೃಪ್ತಿ, ಕೆಲಸ ಯಶಸ್ಸು ಕಂಡ ತರುವಾಯ ದೊರಕುವ ಸಂತೃಪ್ತಿ ವರ್ಣಿಸಲು ಅಸಾಧ್ಯವಂತೆ. ಒಬ್ಬರು -ಇಬ್ಬರಿಗೆ ತೊಂದರೆಯಾದರೂ ಸಾವಿರಾರು, ಲಕ್ಷಾಂತರ ಮಂದಿಗೆ ಪ್ರಯೋಜನವಾದರೆ ಅದುವೇ ಸಮರ್ಥ ಪತ್ರಿಕಾ ಧರ್ಮ. ಅಂತಹವರ ಸಂಖ್ಯೆ ಬೆಳೆಯಲಿ, ಬೆಳಗಲಿ ಎಂದು ಹಾರೈಸೋಣ.