ಈ ವಾರದ ಮೂರು ಟಿಪ್ಪಣಿಗಳು ಇಲ್ಲಿವೆ.
೧. ದಸರಾ ಉತ್ಸವದ ಕರೆಯೋಲೆಯಲ್ಲಿ ಅರ್ಧ ಡಜನ್‍ಗೂ ಹೆಚ್ಚು ತಪ್ಪುಗಳು
ಸೆಪ್ಟೆಂಬರ್ ೨೯ರಿಂದ ಅಕ್ಟೋಬರ್ ೮ರವರೆಗೆ ನಡೆಯಲಿರುವ 'ನಾಡಹಬ್ಬ ಮೈಸೂರು ದಸರಾ ೨೦೧೯' - ಇದರ ಆಹ್ವಾನಪತ್ರಿಕೆ (೨೪ ಪುಟಗಳ ಪುಸ್ತಕ) ಬಿಡುಗಡೆಯಾಗಿದೆ. ಒಳ್ಳೊಳ್ಳೆಯ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆಯೆಂದು ಆಹ್ವಾನಪತ್ರಿಕೆ ನೋಡಿದರೆ ತಿಳಿಯುತ್ತದೆ. ಸರಸ್ವತಿ ಸಮ್ಮಾನ ಪುರಸ್ಕೃತ ಹಿರಿಯ ಸಾಹಿತಿ ಪದ್ಮಶ್ರೀ ಡಾ.ಎಸ್.ಎಲ್ ಭೈರಪ್ಪ ಅವರಿಂದ ಉದ್ಘಾಟನೆಗೊಳ್ಳಲಿರುವ, ಸಾಂಸ್ಕೃತಿಕ ರಾಜಧಾನಿ ಎನಿಸಿಕೊಂಡಿರುವ ಮೈಸೂರಿನಲ್ಲಿ ನಡೆಯುವ, ಕನ್ನಡನಾಡಿನ ಹೆಮ್ಮೆಯ ಉತ್ಸವವಿದು. ಆದರೆ ಕಿರಿಕಿರಿ ಎನಿಸುವುದೇನೆಂದರೆ ಆಹ್ವಾನಪತ್ರಿಕೆಯಲ್ಲಿ ಅಲ್ಲಲ್ಲಿ ಕಂಡುಬರುವ ಕಾಗುಣಿತ/ಪದಬಳಕೆ ತಪ್ಪುಗಳು. ಕರ್ನಾಟಕ ಸರಕಾರದ ಲಾಂಛನ, ಮುಖ್ಯಮಂತ್ರಿ, ಮೂವರು ಉಪಮುಖ್ಯಮಂತ್ರಿಗಳು, ಹಲವಾರು ಮಂತ್ರಿಗಳು, ಶಾಸಕರು, ಸಂಸದರು- ಇವರೆಲ್ಲರ ಹೆಸರುಗಳು ಪ್ರತಿ ಪುಟದಲ್ಲಿಯೂ ಎಂಬಂತೆ ರಾರಾಜಿಸುತ್ತಿರುವ ಆಮಂತ್ರಣ ಪತ್ರಿಕೆಯಲ್ಲಿ ತಪ್ಪುಗಳು ನುಸುಳದಂತೆ ನೋಡಿಕೊಳ್ಳುವುದು ಸಾಧ್ಯವಾಗಲಿಲ್ಲವೇ!?
ಯಾವುವು ಆ ತಪ್ಪುಗಳು?
ಅ) ಪ್ರಶಸ್ತಿ ಪ್ರಧಾನ ( "ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರಧಾನ ಸಮಾರಂಭ"). 'ಪ್ರದಾನ' ಸರಿ. ಅಲ್ಪಪ್ರಾಣ ದಾ ಅಕ್ಷರ ಬಳಸಬೇಕು. ಪ್ರದಾನ ಅಂದರೆ ಗೌರವದಿಂದ ಕೊಡುವುದು ಎಂಬ ಅರ್ಥ. ಇಲ್ಲಿ 'ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ' ಯನ್ನು ಗೌರವದಿಂದ ಕೊಡುವುದಾದ್ದರಿಂದ ಪ್ರದಾನ ಸಮಾರಂಭ. ಇದರ ಉದ್ಘಾಟನೆ, ಮುಖ್ಯ ಅತಿಥಿಗಳು, ಅಧ್ಯಕ್ಷತೆ ಎಂದು ಒಟ್ಟು ಎಂಟು ಜನ ರಾಜಕಾರಣಿಗಳ ಹೆಸರುಗಳಿವೆಯೇ ಹೊರತು ಪ್ರಶಸ್ತಿಯನ್ನು ಯಾರಿಗೆ ಪ್ರದಾನ ಮಾಡಲಾಗುವುದೆಂಬ ವಿವರ ಆಹ್ವಾನಪತ್ರಿಕೆಯಲ್ಲಿಲ್ಲ. ಅಥವಾ ಹೀಗೂ ಇರಬಹುದು- ಕೆಂಪೇಗೌಡ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದುವುಗಳಂತೆ ನೂರಿನ್ನೂರು ಮಂದಿಗೆ ಈ ಪ್ರಶಸ್ತಿ ಪ್ರದಾನ ಮಾಡುತ್ತಿರುವುದಾದರೆ ಅವರೆಲ್ಲರ ಹೆಸರುಗಳನ್ನು ಮುದ್ರಿಸಲು ಆಹ್ವಾನಪತ್ರಿಕೆಯಲ್ಲಿ ಇನ್ನಷ್ಟು ಪುಟಗಳು ಬೇಕಾಗುತ್ತವೆಯಾದ್ದರಿಂದ ಬಿಟ್ಟಿರಬಹುದು.
ಆ) ವಿವಿದೋದ್ದೇಶ (" ಶ್ರೀ ದೇವರಾಜ ಅರಸು ವಿವಿದೋದ್ದೇಶ ಕ್ರೀಡಾಂಗಣ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ" ). ವಿವಿಧ + ಉದ್ದೇಶ = ವಿವಿಧೋದ್ದೇಶ. ಗುಣಸಂಧಿ. ವಿವಿಧ ಎಂದು ಬರೆಯುವಾಗ ಮಹಾಪ್ರಾಣ ಧ ಅಕ್ಷರ ಬಳಕೆಯಾಗಬೇಕು.
ಇ) ಸಧೃಡ ( "ಸಧೃಡ ಭಾರತ ಮಕ್ಕಳ ಕ್ರೀಡಾರಂಗ, ಕುಪ್ಪಣ್ಣ ಪಾರ್ಕ್). 'ಸುದೃಢ' ಸರಿ. ಅಂದರೆ ಇಲ್ಲಿ ಎರಡು ತಪ್ಪುಗಳಾಗಿವೆ. ದೃಢ ಎಂದು ಬರೆಯಲು ಧೃಡ ಎಂದು ಬರೆದಿದ್ದಾರೆ. ದೃಢ ಪದಕ್ಕೆ ಒಳ್ಳೆಯ ಎಂಬ ಅರ್ಥದ 'ಸು' prefix ಸೇರಿಸಬೇಕಾದಲ್ಲಿ 'ಸ' ಸೇರಿಸಿದ್ದಾರೆ. ದೃಢ ಎಂದರೆ ಗಟ್ಟಿಯಾದ, ಭದ್ರವಾದ, ಸ್ಥಿರವಾದ ಎಂದು ಅರ್ಥ. ದೃಢ ಎನ್ನುವುದು ಒಂದು ವಿಶೇಷಣಪದ (adjective). ಸಂಸ್ಕೃತದಲ್ಲಿ ಮತ್ತು ಸಂಸ್ಕೃತಮೂಲದ ಕನ್ನಡ ಪದಗಳಲ್ಲಿ 'ಸ' prefix ಸೇರಿಸುವುದು ವಿಶೇಷಣಪದದೊಟ್ಟಿಗೆ ಅಲ್ಲ, ನಾಮಪದದೊಟ್ಟಿಗೆ ಮಾತ್ರ. 'ಸ' ಎಂಬುದರ ಅರ್ಥವೇ 'ಇಂಥದರೊಂದಿಗೆ, ಇಂಥದರ ಜತೆಗೆ' ಎಂದು. ಇಂಗ್ಲಿಷ್‌ನ with ಇದ್ದಂತೆ. ಹಾಗಾಗಿ ಸಕುಟುಂಬ, ಸಪರಿವಾರ, ಸಸ್ನೇಹ, ಸಬಲ ಮುಂತಾದ ಪದಗಳು ಅರ್ಥಬದ್ಧವೆನಿಸುತ್ತವೆ. 'ಸು' prefix ಹಾಗಲ್ಲ. ಅದನ್ನು ವಿಶೇಷಣಪದದೊಟ್ಟಿಗೂ ಬಳಸಬಹುದು. 'ಸು' ಎಂದರೆ ಒಳ್ಳೆಯ ಎಂದು. ಒಳ್ಳೆಯ ಗಟ್ಟಿಮುಟ್ಟಾದ ಎನ್ನಲಿಕ್ಕೆ ಸುದೃಢ ಎನ್ನಬೇಕು. ಇನ್ನೂ ಮನದಟ್ಟಾಗಿಲ್ವಾ? ನೀವು 'ಸಸ್ಥಿರ' ಎಂದು ಬರೆಯುವುದಿಲ್ಲ/ಹೇಳುವುದಿಲ್ಲ 'ಸುಸ್ಥಿರ' ಎಂದು ಬರೆಯುತ್ತೀರಿ/ಹೇಳುತ್ತೀರಿ ಅಲ್ಲವೇ? ಹಾಗೆಯೇ, ಸಭದ್ರ ಅನ್ನೋದಿಲ್ಲ ಸುಭದ್ರ ಎನ್ನುತ್ತೀರಿ. ಮತ್ತೆ 'ದೃಢ'ಕ್ಕೆ ಮಾತ್ರ ಯಾಕೆ 'ಸ'? ಅದು 'ಸು' ಆಗಬೇಕು. ಆಗ ಭಾಷೆಯ ಮೇಲೆ ನಿಮ್ಮ ಪ್ರಭುತ್ವ ಸುದೃಢ ಆಗುತ್ತದೆ.
ಈ) ಸಾಂಸ್ಕ್ರೃತಿಕ ( "ಅರಮನೆ ವೇದಿಕೆಯಲ್ಲಿ ನಡೆಯುವ ವೈಭವಯುತ ದಸರಾ ಸಾಂಸ್ಕ್ರೃತಿಕ ಕಾರ್ಯಕ್ರಮಗಳು" ). 'ಸಾಂಸ್ಕೃತಿಕ' ಸರಿ. ಅರ್ಧಚಂದ್ರಾಕಾರ ಮತ್ತು ವಟೃಸುರುಳಿ ಎರಡೂ ಒಟ್ಟೊಟ್ಟಿಗೇ ಬರುವ ಪದ ಇಲ್ಲ. ಅದಕ್ಕೆ ಸರಿಯಾದ ಉಚ್ಚಾರವೂ ಇಲ್ಲ. ಅರ್ಧಚಂದ್ರಾಕಾರದ ಒತ್ತು ಅಂದರೆ ಒಂದು ವ್ಯಂಜನದ ಜತೆ ರ ವ್ಯಂಜನವು ಸೇರಿದ ಸಂಯುಕ್ತಾಕ್ಷರವಾದಾಗ ಬರೆಯುವಂಥದ್ದು. ವಟೃಸುರುಳಿ ಒತ್ತು ಅಂದರೆ ಒಂದು ವ್ಯಂಜನಕ್ಕೆ ಋ ಸ್ವರವು ಸೇರಿದಾಗ ಬರೆಯುವಂಥದ್ದು. 'ಕ್ರಮ'ದಲ್ಲಿ ಕ ಅಕ್ಷರಕ್ಕೆ ಅರ್ಧಚಂದ್ರಾಕಾರ ಒತ್ತು; 'ಕೃತಕ'ದಲ್ಲಿ ಕ ಅಕ್ಷರಕ್ಕೆ ವಟೃಸುರುಳಿ.
ಉ) ಉದಾಸ್ ( "ಗಜ಼ಲ್ ಗಾಯನ. ಪಂಡಿತ್ ಪಂಕಜ್ ಉದಾಸ್, ಮುಂಬೈ" ). 'ಉಧಾಸ್' ಸರಿ. ಗುಜರಾತ್‌ನ ಜೇಟ್‌ಪುರ ಎಂಬಲ್ಲಿ ಹುಟ್ಟಿದ ಪಂಕಜ್ ಅವರ ತಂದೆ ಕೇಶುಭಾಯ್ ಉಧಾಸ್, ತಾಯಿ ಜಿತುಬೆನ್ ಉಧಾಸ್. ವಿಶ್ವವಿಖ್ಯಾತ ಗಜ಼ಲ್ ಗಾಯಕನ ಹೆಸರನ್ನು ತಪ್ಪಾಗಿ ಬರೆಯುವುದು/ಉಚ್ಚರಿಸುವುದು ಅವರಿಗೆ ಅಗೌರವ ತೋರಿದಂತೆ. ಅಲ್ಲದೇ, 'ಉದಾಸ್' ಅಂದರೆ ಹಿಂದೀ ಭಾಷೆಯಲ್ಲಿ 'ದುಃಖಭರಿತ' ಎಂಬ ಅರ್ಥವಿದೆ. ತನ್ನ ಹೆಸರನ್ನು ತಪ್ಪಾಗಿ ಬರೆದದ್ದು ನೋಡಿ ಪಂಕಜ್ 'ಉದಾಸ್' ಆಗಬಹುದು!
ಊ) ರಸಾಯನಿಕ ("ಶ್ರೀ. ಡಿ.ವಿ.ಸದಾನಂದಗೌಡ, ಮಾನ್ಯ ಕೇಂದ್ರ ರಸಾಯನಿಕ ರಸಗೊಬ್ಬರ ಸಚಿವರು, ಭಾರತ ಸರಕಾರ" ). 'ರಾಸಾಯನಿಕ' ಸರಿ. ರಸಾಯನ ಪದಕ್ಕೆ ಇಕ ಪ್ರತ್ಯಯ ಸೇರಿದಾಗ ಮೊದಲ ಅಕ್ಷರದ ಹ್ರಸ್ವಸ್ವರವು ದೀರ್ಘಸ್ವರವಾಗುತ್ತದೆ. ಸಮಾಜ -> ಸಾಮಾಜಿಕ; ಸಮೂಹ -> ಸಾಮೂಹಿಕ; ಅರ್ಥ -> ಆರ್ಥಿಕ... ಇತ್ಯಾದಿ ಇದ್ದಂತೆ ರಸಾಯನ -> ರಾಸಾಯನಿಕ
ಋ) ಅಂತರಾಷ್ಟ್ರೀಯ ("ನಾಡಹಬ್ಬ ದಸರಾ ಮಹೋತ್ಸವ ಮೈಸೂರಿನ ವೈಶಿಷ್ಟ್ಯವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸಿದೆ" ). 'ಅಂತಾರಾಷ್ಟ್ರೀಯ' ಸರಿ. ಸಂಸ್ಕೃತದಲ್ಲಿ 'ವಿಸರ್ಗ ಸಂಧಿ' ಎಂಬ ವ್ಯಾಕರಣ ಕ್ರಿಯೆಯೊಂದಿದೆ. ಪೂರ್ವಪದದ ಅಂತ್ಯಕ್ಕೆ ಬರುವ ರೇಫ ('ರ್'ಕಾರ)ದ ಮುಂದೆ ಪರಪದ ಯಾವ ವ್ಯಂಜನದಿಂದ ಆರಂಭವಾಗಿದೆ ಎಂಬುದನ್ನವಲಂಬಿಸಿ ಸಂಧಿರೂಪ ನಿರ್ಧಾರವಾಗುತ್ತದೆ. ಪರಪದದ ಆರಂಭದಲ್ಲಿ ರ ವ್ಯಂಜನವೇ ಇದ್ದರೆ ಪೂರ್ವಪದದ ಕೊನೆಯಲ್ಲಿರುವ ರೇಫ ಮಾಯವಾಗುತ್ತದೆ, ಆ ರೇಫದ ಹಿಂದೆ ಹ್ರಸ್ವ ಸ್ವರವಿದ್ದರೆ ದೀರ್ಘಸ್ವರ ಬರುತ್ತದೆ. ಅಂತರ್ + ರಾಷ್ಟ್ರೀಯ = ಅಂತಾರಾಷ್ಟ್ರೀಯ. ('ರ್' ಮಾಯವಾಗಿದೆ. 'ತ' ಹ್ರಸ್ವಾಕ್ಷರ 'ತಾ' ದೀರ್ಘಾಕ್ಷರವಾಗಿದೆ). ಪುನರ್ + ರಚನೆ = ಪುನಾರಚನೆ. ('ರ್' ಮಾಯವಾಗಿದೆ. 'ನ' ಹ್ರಸ್ವಾಕ್ಷರ 'ನಾ' ದೀರ್ಘಾಕ್ಷರವಾಗಿದೆ).
- ಇವಿಷ್ಟಲ್ಲದೆ, ಒಂದುಕಡೆ "ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ" ಎಂದಿದೆ. ಇದರಲ್ಲಿ ಹಾಲು ರಾಜ್ಯ ಮಟ್ಟದ್ದೋ ಸ್ಪರ್ಧೆ ರಾಜ್ಯ ಮಟ್ಟದ್ದೋ ನೀವೇ ನಿರ್ಧರಿಸಿ. "ಮಹಿಳೆಯರ ಭಾರ ಎತ್ತುವ ಸ್ಪರ್ಧೆ" ದಸರಾ ಉತ್ಸವದಲ್ಲಿಲ್ಲ, ಗಾಬರಿಯಾಗಬೇಡಿ!
[ದಸರಾ ಉತ್ಸವದ ಕರೆಯೋಲೆಯಲ್ಲಿ 'ಪ್ರಶಸ್ತಿ ಪ್ರಧಾನ ಸಮಾರಂಭ' ಎಂಬ ಒಂದು ತಪ್ಪನ್ನು ಗಮನಕ್ಕೆ ತರುವುದಕ್ಕಾಗಿ ಆಹ್ವಾನ ಪತ್ರಿಕೆಯ ಪಿಡಿಎಫ್ ಕಳುಹಿಸಿದವರು ಬೆಂಗಳೂರಿನಿಂದ ರವಿಶಂಕರ್ ಕೆಂಗೇರಿ. ಪಿಡಿಎಫ್ ತೆರೆದು ಪೂರ್ತಿಯಾಗಿ ಓದಿದಾಗ ಈ ಎಲ್ಲ ತಪ್ಪುಗಳಿರುವುದು ಗೊತ್ತಾಯಿತು.]
೨. 'ಹೌಡಿ ಮೋದಿ' ಯಿಂದ ಸ್ವಚ್ಛ ಭಾಷೆ ಕಲಿಕೆಗೆ ಅವಕಾಶ!
ಮೊನ್ನೆ ಅಮೆರಿಕದ ಹ್ಯೂಸ್ಟನ್‌ನಲ್ಲಿ ನಡೆದ 'ಹೌಡಿ ಮೋದಿ' ಕಾರ್ಯಕ್ರಮಕ್ಕೆ ಸಂಬಂಧಿಸಿದ ಸುದ್ದಿಗಳಲ್ಲಿ ಮತ್ತು ಪ್ರತಿಕ್ರಿಯೆಗಳಲ್ಲಿ ಕಂಡುಬಂದ ಕಸ. ಇದು ಸ್ವಚ್ಛ ಭಾಷೆ ಕಲಿಕೆಯ ಸಹಪಾಠಿಗಳಿಬ್ಬರು ಗುರುತಿಸಿರುವ ಕಸ.
ಅ) "ಬಾಣಸಿಗ ಪದದ ಸ್ತ್ರೀಲಿಂಗ ಪದ ಯಾವುದು? ಹೂವಾಡಿಗಿತ್ತಿ, ಒಕ್ಕಲಿಗಿತ್ತಿ ತರಹ ಬಾಣಸಿಗಿತ್ತಿ ಎಂಬ ಪದ ಇದೆಯಲ್ಲವೇ? ಹೌದು ಅಂತಾದರೆ, ವಿಶ್ವವಾಣಿ ಪತ್ರಿಕೆಯ 23ಸೆಪ್ಟೆಂಬರ್೨೦೧೯ರ ಸಂಚಿಕೆಯ ಮುಖಪುಟದಲ್ಲಿ ಪ್ರಕಟವಾದ 'ವಿಶೇಷ ನಮೋ ಥಾಲಿ' ವರದಿ ತಪ್ಪಲ್ಲವೇ? "ಪ್ರಧಾನಿ ನರೇಂದ್ರ ಮೋದಿ ತಂಗಿರುವ ಹೋಟೆಲ್‌ವೊಂದರ ಬಾಣಸಿಗ ಮೋದಿಗಾಗಿ ವಿಶೇಷ 'ನಮೋ ಥಾಲಿ' ತಯಾರಿಸಿದ್ದರು. ನಮೋ ಥಾಲಿ ಮಿಠಾಯಿ ಹಾಗೂ ನಮೋ ಥಾಲಿ ಸೆವ್ರಿ ಎಂಬ ಎರಡು ವಿಧದ ಥಾಲಿಯನ್ನು ಸಿದ್ಧಪಡಿಸಿದ್ದಾಗಿ ಬಾಣಸಿಗ ಕಿರಣ್ ವರ್ಮಾ ತಿಳಿಸಿದ್ದಾರೆ." - ಇದು ವಿಶ್ವವಾಣಿ ಮುಖಪುಟದಲ್ಲಿ ಬಾಕ್ಸ್ ಐಟಂ ಮಾಡಿ ಪ್ರಕಟಿಸಿದ ಸುದ್ದಿ. ಕಿರಣ್ ವರ್ಮಾ ಪುರುಷರಲ್ಲ, ಮಹಿಳೆ! ಆದ್ದರಿಂದ ಈ ಸುದ್ದಿಯಲ್ಲಿ 'ಬಾಣಸಿಗ' ಬದಲಿಗೆ 'ಬಾಣಸಿಗಿತ್ತಿ' ಪದ ಬಳಸಬೇಕಿತ್ತು. ಆದರೆ ನನಗನಿಸುತ್ತದೆ, ಸುದ್ದಿ ಬರೆದವರಿಗೆ 'ಬಾಣಸಿಗಿತ್ತಿ' ಪದ ಗೊತ್ತಿಲ್ಲದಿರುವುದಕ್ಕಿಂತಲೂ 'ಕಿರಣ್ ವರ್ಮಾ' ಅಂದರೆ ಮಹಿಳೆ ಎಂದು ಗೊತ್ತಿಲ್ಲದಿರುವುದರಿಂದ ಈ ಅವಾಂತರ ಆಗಿದೆ. Kiran Varma Namo Thali ಎಂದು ಗೂಗಲ್‌ನಲ್ಲಿ ಹುಡುಕುತ್ತಿದ್ದರೆ ವಿಡಿಯೋ ಚಿತ್ರಗಳೂ ಬರುತ್ತಿದ್ದವು, ಕಿರಣ್ ವರ್ಮಾ ಯಾರೆಂದು ತತ್‌ಕ್ಷಣ ಗೊತ್ತಾಗುತ್ತಿತ್ತು. ಅಷ್ಟನ್ನೂ ಕಂಡುಹುಡುಕಲಾರದ ಇವರೆಂಥ ಪತ್ರಕರ್ತರು!" - ಗಜಾನನ ಅಭ್ಯಂಕರ್, ಮಂಗಳೂರು.
ಆ) "ಅಪಶೃತಿ ಎಂಬ ಪದ ಇದೆಯೇ? ಶೃತಿ ಎಂಬ ಪದ ಇಲ್ಲ, 'ಶ್ರುತಿ' ಅಂತ ಇರುವುದು. ಶ್ರುತಿ ಇಲ್ಲದ್ದು 'ಅಪಶ್ರುತಿ'. 'ಹೌಡಿ ಮೋದಿ' ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರಗೀತೆಯನ್ನು ಹಾಡಿದ್ದು 'ಅಪಶೃತಿ' ಆಯ್ತಂತೆ ಬೆಂಗಳೂರಿನ ಅಂಜಲಿ ರಾಮಣ್ಣ ಎಂಬಾಕೆಗೆ! ಬರಹಗಾರ್ತಿ, ಮಕ್ಕಳ ಹಕ್ಕುಗಳ ಹೋರಾಟಗಾರ್ತಿ, ಮಾನಸಿಕ ಹಾಗೂ ದೈಹಿಕವಾಗಿ ಅಶಕ್ತರಾದವರಿಗೆ ಕೌನ್ಸೆಲಿಂಗ್ ಮಾಡುವಾಕೆ ಅನ್ನಿಸ್ಕೊಂಡ ಈಯಮ್ಮನಿಗೆ, ಅಲ್ಲಿ ಹ್ಯೂಸ್ಟನ್‌ನ ಕಾರ್ಯಕ್ರಮದಲ್ಲಿ ಒಬ್ಬ ವಿಶಿಷ್ಟ ವ್ಯಕ್ತಿಯಿಂದ (Osteogenesis Imperfecta ಎನ್ನುವ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ೧೬ ವರ್ಷದ ಸ್ಪರ್ಶ್ ಶಾ ಎಂಬ ಹುಡುಗನಿಂದ) ರಾಷ್ಟ್ರಗೀತೆಯನ್ನು ಹಾಡಿಸಿದ್ದಾರೆ ಅನ್ನುವುದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. 'ಅಮೇರಿಕೆಯಲ್ಲಿ ಮಾನಸಿಕ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ವರದಿಯಾಗಿತ್ತು, ಅದೀಗ ದೃಢಪಟ್ಟಿತು ನೋಡಿ... ಹೌಡಿ ಮೋಡಿ!' ಎಂದು ಚಂಸು ಪಾಟೀಲ ಎಂಬೊಬ್ಬ ಮೋದಿದ್ವೇಷಿಯು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದರೆ 'ಅದರ ಜೊತೆ ಅಪಶೃತಿಯ ರಾಷ್ಟ್ರಗೀತೆ ಬೇರೆ...' ಎಂದು ಪ್ರತಿಕ್ರಿಯೆ ಬರೆದು ವಿಷ ಸೇರಿಸಿದಾಕೆ ಈ ಅಂಜಲಿ ರಾಮಣ್ಣ. ಇವರೆಲ್ಲ ಇಲ್ಲಿ ಬೆಂಗಳೂರಿನಲ್ಲಿ ಮಕ್ಕಳ, ವಿಶಿಷ್ಟ ಚೇತನರ ಹಕ್ಕುಗಳ ಹೋರಾಟಗಾರರು! ಮೋದಿದ್ವೇಷ ಮತ್ತು ಅನಿವಾಸಿಗಳ ಬಗ್ಗೆ ಅಸೂಯೆ ಇವರನ್ನು ಯಾವಯಾವ ರೀತಿ ಆಟ ಆಡಿಸುತ್ತದೆ ನೋಡಿ. ಅಷ್ಟಾಗಿ ಸ್ಪರ್ಶ್ ಶಾ ಹಾಸಿಗೆ ಹಿಡಿದು ಮಲಗಿರುವವನಲ್ಲ. ಅಮೆರಿಕದಲ್ಲಿ ರ‍್ಯಾಪ್ ಸಂಗೀತಗಾರ, ಗೀತರಚನಾಕಾರ, ಮತ್ತು ಪ್ರೇರಣಾಭಾಷಣಕಾರನಾಗಿ ಖ್ಯಾತಿ ಪಡೆದವನು. ಗಾಲಿಕುರ್ಚಿಯಲ್ಲಿ ಕುಳಿತುಕೊಂಡು ಸರಸರನೆ ಓಡಾಡಬಲ್ಲವನು. ಅಂಥವನ ಬಗ್ಗೆ ತಿಳಿದುಕೊಳ್ಳದೆ ಮೂದಲಿಸುವ ಹಂತ ತಲುಪಿದರಲ್ಲ, ಇವರೇ ಇರಬೇಕು ನಿಜವಾಗಿ ಮಾನಸಿಕ ರೋಗಿಗಳು!" - ಸಂದೀಪ್ ಶೆಟ್ಟಿ, ಬೆಂಗಳೂರು.
೩. ಪದೇ ಪದೇ ತಪ್ಪಾಗಿ ಕಾಣಿಸಿಕೊಳ್ಳುವ ಪದಗಳು
ಅ) ಪಾದಚಾರಿ ಸರಿ. ಕಾಲ್ನಡಿಗೆಯವನು/ಳು ಎಂಬ ಅರ್ಥ. ಇಂಗ್ಲಿಷ್‌ನಲ್ಲಾದರೆ Pedestrian. 'ಪಾದಚಾರಿ'ಯನ್ನು ಪಾದಾಚಾರಿ ಎಂದು ಬರೆಯಬಾರದು.
ಆ) ಡಂಭಾಚಾರ ಸರಿ. ಡಂಭ ಎಂದರೆ ಇತರರನ್ನು ಮೆಚ್ಚಿಸಲು ಕಾರ್ಯ ಮಾಡುವವನು. ಸೋಗಲಾಡಿತನದವನು. ಅವನ ಕೆಲಸವೇ ಡಂಭಾಚಾರ. ಅದನ್ನು ಡಂಬಾಚಾರ, ಡೊಂಬಚಾರ ಅಂತೆಲ್ಲ ಬರೆದರೆ ತಪ್ಪು. ಮೊನ್ನೆ ಒಂದು 'ಸಾತ್ವಿಕ ಧಾರ್ಮಿಕ ಸಾಂಸ್ಕೃತಿಕ ಸಾಹಿತ್ತಿಕ ಕಲಾಸಂಘ'ದ ಆಹ್ವಾನಪತ್ರದಲ್ಲಿ "ಪಾಶ್ಚಾತ್ಯರ ಅನುಕರಣೆ ಅಸಭ್ಯತೆಯ ಡೊಂಬಚಾರದ ಸಂದಿಗ್ಧತೆಯಲ್ಲಿರುವ ಯುವಜನತೆಯಲ್ಲಿ ಧಾರ್ಮಿಕತೆ ಸಂಸ್ಕೃತಿಯ ಜಾಗೃತಿ ಮೂಡಿಸಲೋಸುಗ ಹುಟ್ಟಿಕೊಳ್ಳುತ್ತಿರುವ ಸಂಘ"ವಿದು ಅಂತಿತ್ತು!
ಇ) ಸಾಹಿತ್ಯಿಕ ಸರಿ. ಸಾಹಿತ್ಯಕ್ಕೆ ಸಂಬಂಧಿಸಿದ ಎಂಬ ಅರ್ಥ. ಸಾಹಿತ್ಯ ಪದಕ್ಕೆ ಇಕ ಪ್ರತ್ಯಯ ಸೇರಿ ಆಗಿರುವ ಪದ. ಮೇಲೆ ಉಲ್ಲೇಖಿಸಿದ ಕಲಾಸಂಘದ ಹೆಸರಿನಲ್ಲಿ 'ಸಾಹಿತ್ತಿಕ' ಎಂದು ಬರೆದುಕೊಂಡಿದ್ದಾರೆ!
ಈ) ಎಳವೆ ಸರಿ. ಶೈಶವ, ಬಾಲ್ಯ ಎಂದು ಅರ್ಥ. ಎಳೆವೆ ಎಂಬ ರೂಪವಿಲ್ಲ. ಮೇಲೆ ಉಲ್ಲೇಖಿಸಿದ ಕಲಾಸಂಘದ ಆಹ್ವಾನಪತ್ರದಲ್ಲಿ "ಹಿರಿಯರ ಮೂಲಕ ಧರ್ಮಜಾಗೃತಿಯೊಂದಿಗೆ ಸುಸಂಸ್ಕೃತಿಕ ಸಂಸ್ಕಾರವನ್ನು ಎಳೆವೆಯಲ್ಲೇ ಬೋಧಿಸಿ ಸಭ್ಯ ವ್ಯಕ್ತಿಗಳನ್ನು ರೂಪಿಸುವ ಪ್ರಯತ್ನ" ಎಂದು ಬರೆದಿದ್ದಾರೆ. ಸುಸಂಸ್ಕೃತಿಕ ಎಂಬ ಪದವೂ ತಪ್ಪು. ಸುಸಂಸ್ಕೃತ ಎಂದಾಗಬೇಕು.
ಉ) ಬಿತ್ತಿ ಬೆಳೆಸು ಸರಿ. ಭಿತ್ತಿ ಬೆಳೆಸು ಎಂದು ಬರೆದರೆ ಗೋಡೆ ಕಟ್ಟುವುದು ಎಂದಂತಾಗುತ್ತದೆ. ಮೇಲೆ ಉಲ್ಲೇಖಿಸಿದ ಕಲಾಸಂಘದ ಆಹ್ವಾನಪತ್ರದಲ್ಲಿ "ಭಾವೈಕ್ಯತೆಯನ್ನು ಭಿತ್ತಿ ಬೆಳೆಸುವ ಯುವತಲೆಮಾರಿನ ಚಿಂತನೆಗಳಿಗೊಂದು ವೇದಿಕೆ" ಎಂದು ಬರೆದುಕೊಂಡಿದ್ದಾರೆ.
ಉದ್ಘಾಟನೆಯ ಆಹ್ವಾನಪತ್ರದಲ್ಲೇ ಇಷ್ಟೆಲ್ಲ (ಇವುಗಳ ಜತೆಗೆ 'ಮೂಡಿಸುಲೋಸುಗ', 'ಕವಯತ್ರಿ' ಮುಂತಾದುವೂ) ತಪ್ಪುಗಳಿರಬೇಕಾದರೆ ಇದೆಂಥ 'ಸಾತ್ತ್ವಿಕ ಧಾರ್ಮಿಕ ಸಾಂಸ್ಕೃತಿಕ ಸಾಹಿತ್ಯಿಕ ಕಲಾಸಂಘ'ವೋ ಆ ವಾಗ್ದೇವಿಗೇ ಗೊತ್ತು! ಖಾಲಿ ಕೊಡ (ತಲೆ) ಜಾಸ್ತಿ ಶಬ್ದ ಮಾಡುತ್ತದೆ ಎನ್ನುವುದಕ್ಕೆ ಈ ಕಲಾಸಂಘದ ಶಬ್ದಾಡಂಬರವೇ ನಿದರ್ಶನ.
ಸ್ವಚ್ಛ ಭಾಷೆ ಅಭಿಯಾನ ಸಾಪ್ತಾಹಿಕ ಸರಣಿ. ವಾರಕ್ಕೊಂದು ಕಲಿಕೆಯಲ್ಲಿ ಮೂರು ಬೇರೆಬೇರೆ ವಿಚಾರಗಳು. ನಿಮ್ಮ ಪ್ರತಿಕ್ರಿಯೆಗಳಿದ್ದರೆ ಸಾಧ್ಯವಾದಷ್ಟು ಮಟ್ಟಿಗೆ ಆ ವಾರದ ವಿಚಾರಗಳ ಬಗ್ಗೆಯೇ ಇರಲಿ. ಇನ್ನೊಂದು ವಾರ ಇನ್ನೊಂದು ಹೊಸ ಕಲಿಕೆ. - ಶ್ರೀವತ್ಸ ಜೋಶಿ.