ಮೊನ್ನೆ ಭೂಕುಸಿತ , ಜಲ ಪ್ರವಾಹ ಆದಂತಹ ಚಾರ್ಮಾಡಿ ಘಾಟಿಯ ಇನ್ನೊಂದು ದಿಕ್ಕಿನ ಹೊರಟ್ಟಿ, ಅಲೇಖಾನ, ಮಲೆ ಮನೆ, ಜಾವ್ಳೇ, ಬಾಳೂರೂ, ಮಧು ಗುಂಡಿ, ದುರ್ಗದ ಹಳ್ಳಿ, ಆತ್ತಿಗೆರೆ .ಮುಂತಾದ ಕಡೆ ನಿನ್ನೆ ನಾವು ಮತ್ತು ಮಾದ್ಯಮ ಮಿತ್ರರು ಜೊತೆಯಾಗಿ ಹೋದಾಗ ಕಂಡದ್ದು ಯುದ್ಧ ಮುಗಿದ ನಂತರ ಅಳಿದುಳಿದ ಕುರುಹುಗಳ ಹಾಗೆ ಭಯಾನಕ ಮತ್ತು ಊಹಿಸಲೂ ಆಗದಂತಹ ದುರಂತದ ಅವ ಶೇಷಗಳು...ಮನೆಗಳು ಛಿದ್ರ ಆಗಿ ಅಲ್ಲಿ ಮನೆ ಇತ್ತೆ ಎಂಬುದಕ್ಕೆ ಯಾವ ಸಾಕ್ಷಿಗಳನ್ನು ಬಿಡದೇ ಮನೆಯ ಗೋಡೆ, ಕಿಟಕಿ, ಬಾಗಿಲು, ಗೊಡ್ರೆಜ್, ನೆಲಕ್ಕೆ ಹಾಸಿದ ಟೈಲ್ಸ್ ಎಲ್ಲವೂ ಛಿಂಧಿ ಚೂರುಗಳಾಗಿ ಎಲ್ಲೆಲ್ಲೋ ಹರಡಿ ಕೊಂಡು ಮಣ್ಣಿನಲ್ಲಿ ಕೊಚ್ಚಿಕೊಂಡು ಹೋಗಿದ್ದವು. ಕೆಲವು ಕಡೆ ಕಾಂಕ್ರೀಟು ರಸ್ತೆಗಳು ಬಿಸ್ಕಿಟ್ ಹುಡಿಯಾ ದ ರೀತಿಯಲ್ಲಿ ಛಿದ್ರ ಗೊಂಡಿವೆ. 3 ಅಡಿ ಅಗಲದ ಚಿಕ್ಕ ತೊರೆ ಮೊನ್ನೆ 100 ಅಡಿ ಅಗಲ ಕೆ ಹರಿದು 60 ಅಡಿ ಎತ್ತರಕ್ಕೆ ಬ್ರಹತ್ ಕಲ್ಲು, ಮರಗಳನ್ನು ಎಳೆದುಕೊಂಡು 2 ರಿಂದ 4 ಕೀ.ಮೀ. ನಷ್ಟೂ ದೂರಕ್ಕೆ ಎಳೆದುಕೊಂಡು ಬಂದಿವೆ ಎಂದು ಅಲ್ಲಿನ ದುರಂತವನ್ನು ಕಣ್ಣಾರೆ ಕಂಡ ಪ್ರತ್ಯಕ್ಷದರ್ಶಿಗಳು ವಿವರಿಸುತ್ತಾರೆ. 

ಭೋರ್ಗರೆಯುವ ಮಳೆ ಸದ್ದು ಕೇಳಿಸುತ್ತಿತ್ತು ಅದೇ ಹೊತ್ತಿಗೆ ಬೆಟ್ಟದ ಮೇಲೆ ಸಿಡಿಲು ಬಡಿದಂತೆ ಭಯಾನಕ ಸದ್ದು ಕೇಳಿಸಿದ ಮೂರೇ ನಿಮಿಷದಲ್ಲಿ 50 ಅಡಿ ಎತ್ತರದಲ್ಲಿ ಕೆಸರು ಮಣ್ಣಿನ ಜೊತೆ ಬಂಡೆ, ಮರ, ಗಿಡಗಳ ಜೊತೆ ನೀರು ನಾವು ನಿಂತ ಜಾಗಕ್ಕೆ ಬ್ರಹತ್ ಸದ್ದಿನೊಂದಿಗೆ ಸಡನ್ ಆಗಿ ಬಂದಾಗ ಎಲ್ಲೋ ಏನೋ ಹಾರಿ ಬಿದ್ದು ಎತ್ತರಕ್ಕೆ ಓಡಿ ಹೋಗಿ ನಿಂತಾಗ ಊರಿಡೀ ಕೆಸರು, ಕಲ್ಲು, ಮರಗಳ ಜೊತೆ ನೀರು ಹರಿದು ನಾವು ದ್ವೀಪದಲ್ಲಿ ನಿಂತ ಹಾಗೆ ಆಗಿತ್ತು ಎಂದು ಮಲೆ ಮನೆಯ ವೀರಪ್ಪ ಗೌಡ ಹೇಳುವಾಗ ಅಲ್ಲಿನ ಅಂದಿನ ಪರಿಸ್ಥಿತಿ ಹೇಗಿತ್ತು ಎಂಬುದು ಊಹಿಸಲೂ ನಿಲುಕದ ವಿಚಾರ.

 

ಒಟ್ಟಾರೆ ಇಲ್ಲಿ ನಾವು ಗಮನಿಸಲೇಬೇಕಾದ ವಿಷಯ..... ವರ್ಷಾನುಗಟ್ಟಲೆ ನಾವು ನೀಡಿರುವ ಕಿರುಕುಳಕ್ಕೆ ವಿರುದ್ಧವಾಗಿ ಪ್ರಕೃತಿಗೆ ತನ್ನ ವಿಕೋಪ ತೋರಿಸಲು ಕೇವಲ ನಿಮಿಷಗಳು ಸಾಕು... ನಿಸರ್ಗ ತನ್ನ ಅಸಹನೆಯನ್ನು ವ್ಯಕ್ತ ಪಡಿಸುತ್ತಾ ಇದೆ, ಇನ್ನಾದರೂ ನಾವು ಪಶ್ಚಿಮ ಘಟ್ಟದ ತಾಳ್ಮೆಯ ಪರೀಕ್ಷೆ ಮಾಡುವುದು ಸರಿಯಲ್ಲ ಎಂಬ ಪ್ರಮುಖ ವಿಷಯವನ್ನು ಮೊನ್ನೆಯ ಪ್ರಾಕೃತಿಕ ದುರಂತದಿಂದ ಕಲಿಯಲೇಬೇಕು.

ದಿನೇಶ್ ಹೊಳ್ಳ(Environmentalist )