ಮಂಗಳೂರು:- ನಗರದ ಕುಲಶೇಖರದಿಂದ ಕಣ್ಣಗುಡ್ಡೆಯ ಮುಖಾಂತರ ಪಡೀಲು ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಈಗಾಗಲೇ ಮಂಜೂರಾತಿ ದೊರೆತು, ಕಾಮಗಾರಿಯು ಚಾಲ್ತಿಯಲ್ಲಿದ್ದು, ಸ್ಥಳೀಯ ನಾಗರಿಕರಿಗೆ ಕೆಲವೊಂದು ಸಮಸ್ಯೆಗಳು ಇರುವುದರಿಂದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಜೆ.ಆರ್.ಲೋಬೊ ರವರಿಗೆ ಮನವಿಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಜೆ.ಆರ್. ಲೋಬೊ ರವರು ಮಾತನಾಡಿ, "ಸುಮಾರು 40 ವರ್ಷಗಳಿಂದ ಈ ಪ್ರದೇಶದಲ್ಲಿ ಸರಿಯಾದ ರಸ್ತೆ ಸೌಕರ್ಯ ಇರಲಿಲ್ಲ. ಜನರು ಬಹಳಷ್ಟು ತೊಂದರೆಕ್ಕೀಡಾಗಿದ್ದರು. ಅಲ್ಲದೆ, ಈ ಪ್ರದೇಶವು ರೈಲ್ವೇ ವಲಯವಾಗಿದ್ದು, ಅವರ ಅನುಮತಿಯನ್ನು ಪಡೆದುಕೊಂಡು ರಾಷ್ಟ್ರೀಯ ಹೆದ್ದಾರಿ ಇಲಾಖೆಯನ್ನು ಮನದಟ್ಟು ಮಾಡಿ ಅವರ ಅನುಮತಿಯನ್ನು ಕೋರಿ, ಲೋಕೋಪಯೋಗಿ ಇಲಾಖೆಯಿಂದ 2016-17ನೇ ಸಾಲಿನಲ್ಲಿ ‘ಅಪೆಂಡಿಕ್ಸ್-ಇ’ ನಲ್ಲಿ 5 ಕೋಟಿ ರೂ. ಅನುದಾನ ಸೇರಿಸುವ ಷರತ್ತಿಗೆ ಒಳಪಟ್ಟ ಈ ಕಾಮಗಾರಿಯನ್ನು ಅನುಷ್ಠಾನಗೊಳಿಸಿದ್ದೇನೆ". 

"ಈ ರಸ್ತೆಯು ಒಂದು ಕಡೆಯಿಂದ ಮಂಗಳೂರು-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕುಲಶೇಖರದಿಂದ ಹಿಡಿದು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಣ್ಣೂರು (ಕಣ್ಣಗುಡ್ಡೆಯ ಮುಖಾಂತರ) ತನಕ ಕೊಂಡಿ ರಸ್ತೆಯಾಗಿರುತ್ತದೆ. ಈಗಾಗಲೇ ರಸ್ತೆ ಅಭಿವೃದ್ಧಿ ಕಾರ್ಯವು ಪ್ರಾರಂಭವಾಗಿದ್ದು, ಇಲ್ಲಿನ ನಾಗರಿಕರು ಕೆಲವೊಂದು ಸಮಸ್ಯೆಗಳಿಂದ ತೊಂದರೆಕ್ಕೀಡಾದ ವಿಷಯ ನನ್ನ ಗಮನಕ್ಕೆ ಬಂದಿರುತ್ತದೆ.  ಈಗಿನ ಬಿಜೆಪಿ ಶಾಸಕರು ಜನರನ್ನು ದಾರಿ ತಪ್ಪಿಸುವಂತಹ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಮಾಜಿ ಶಾಸಕ ಲೋಬೊರವರು ಮಂಜೂರಾತಿ ಮಾಡಿಸಿದ ಅನುದಾನ ವಾವಸ್ಸು ಹೋಗಿದೆ. ಇದು ಬಿಜೆಪಿ ಆಡಳಿತದ ಸಾಧನೆ ಎಂದು ಸುಳ್ಳಿನ ರಾಜಕೀಯ ಮಾಡುತ್ತಿರುವುದು ತೀರಾ ಖಂಡನೀಯ. ಅದನ್ನು ಬಿಟ್ಟು ಈಗಿನ ಬಿಜೆಪಿ ಶಾಸಕರು ಜನರನ್ನು ವಿಶ್ವಾಸಕ್ಕೆ ಇಟ್ಟುಕೊಳ್ಳಬೇಕು. ಇಲ್ಲಿನ ಜನರ ಸಮಸ್ಯೆಗಳನ್ನು ಅರಿತುಕೊಳ್ಳುವ ಕೆಲಸ ಮಾಡಬೇಕು. ರಸ್ತೆ ಅಗಲೀಕರಣಗೊಳಿಸುವಾಗ ಸ್ಥಳೀಯರ ಜೊತೆ ಮಾತನಾಡಿ ಅವರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಬೇಕು" ಎಂದರು.

ಈ ಸಂದರ್ಭದಲ್ಲಿ ಅಳಪೆ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಡೆನಿಸ್ ಡಿಸಿಲ್ವ, ಶೋಭಾ ಕೇಶವ್, ಹೆನ್ರಿ ಡಿಸೋಜಾ,  ಉಮೇಶ್ ನೂಜಿ, ರಿತೇಶ್ ಹಾಗೂ ಇಲ್ಲಿನ ರಸ್ತೆ ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು ಉಪಸ್ಥಿತರಿದ್ದರು.