ಕುಂದಾಪುರ:- ದಿನಾಂಕ 02.09.2020 ರಂದು ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ, ಕುಂದಾಪುರ ತಾಲೂಕು ಕಲ್ಪವೃಕ್ಷ ತೆಂಗು ಉತ್ಪಾದಕರ ಫೆಡರೇಷನ್ ಮತ್ತು ತೋಟಗಾರಿಕೆ ಇಲಾಖೆ ಕುಂದಾಪುರ ಇವರ ಸಹಯೋಗದೊಂದಿಗೆ ವಿಶ್ವ ತೆಂಗು ದಿನಾಚರಣೆಯ ಅಂಗವಾಗಿ ತೆಂಗಿನಲ್ಲಿ ಸಮಗ್ರ ಬೇಸಾಯ ತರಬೇತಿ ಕಾರ್ಯಕ್ರಮವನ್ನು ಕುಂದಾಪುರ ತಾಲೂಕು ನಾಗೂರು ಗ್ರಾಮದ ಗೋಪಾಲ್ ಕೃಷ್ಣ ಮಂಟಪದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ವಿಸ್ತರಣಾ ನಿರ್ದೇಶಕರಾದ ಡಾ. ಶಶಿಧರ್ ಕೆ.ಸಿ ಇವರು ತೆಂಗು ಈ ಭಾಗದ ಬಹು ಮುಖ್ಯ ಬೆಳೆಯಾಗಿದ್ದು ಆರ್ಥಿಕವಾಗಿ ಹೆಚ್ಚು ಲಾಭವನ್ನು ತಂದು ಕೊಡುವ ಬೆಳೆಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೂಲಿ ಆಳುಗಳ ಸಮಸ್ಯೆಯಿಂದ ತೆಂಗು ಕೃಷಿ ಕಷ್ಟಕರವಾಗಿ ಪರಿವರ್ತನೆಗೊಂಡಿದೆ. ಇತ್ತೀಚಿನ ದಿನಗಳಲ್ಲಿ ತೆಂಗಿನ ಮರ ಹತ್ತುವ ಕೌಶಲ್ಯ ತರಬೇತಿ ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಹಮ್ಮಿಕೊಂಡಿದ್ದು ಗ್ರಾಮೀಣ ಭಾಗದ ಯುವಕ ಯುವತಿಯರು ಇದರ ಲಾಭ ಪಡೆಯಬೇಕೆಂದು ತಿಳಿಸಿದರು.
ಶಿವಮೊಗ್ಗ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಇದರ ಸಹ ವಿಸ್ತರಣಾ ನಿರ್ದೇಶಕರಾದ ಡಾ. ಎಸ್ ಯು.ಪಾಟೀಲ್ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತ "ತೆಂಗು ಉತ್ಪಾದಕರ ಕಂಪನಿ ಮುಖಾಂತರ ಮೌಲ್ಯವರ್ದನೆ ಮಾಡಿ ಹೆಚ್ಚು ಉತ್ಪನ್ನಗಳನ್ನು ಬ್ರಾಂಡ್ ಮಾಡಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವುದರಿಂದ ಅಧಿಕ ಲಾಭ ಪಡೆಯಬಹುದು" ಎಂದು ತಿಳಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲುಗೊಂಡ ಸಂಜೀವ್ ನಾಯ್ಕ್ , ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಕುಂದಾಪುರ ತಾಲೂಕು ಇವರು ತೆಂಗು ಫೆಡರೇಶನ್ ಮತ್ತು ಕಂಪನಿಗಳ ಅಸ್ತಿತ್ವದಿಂದ ರೈತರಿಗೆ ಆಗುವ ಲಾಭಗಳ ಕುರಿತು ಉಲ್ಲೇಖಿಸಿದರು.
ಭಾರತೀಯ ಕಿಸಾನ್ ಸಂಘ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸತ್ಯನಾರಾಯಣ ಉಡುಪ ಇವರು ತೆಂಗಿನ ಮರದಿಂದ ಉತ್ಪಾದಿಸುವ ಕಲ್ಪ ರಸ ಇತ್ತಿಚಿನ ದಿನಗಳಲ್ಲಿ ಜನರ ಆರೋಗ್ಯ ದೃಷ್ಟಿಯಿಂದ ಪ್ರಾಮುಖ್ಯತೆ ಪಾತ್ರ ವಹಿಸಿದ್ದು ಹೆಚ್ಚಿನ ಬೇಡಿಕೆ ಇರುವುದು ಹಾಗೂ ಪ್ರತಿ ತೆಂಗಿನ ಮರದಿಂದ ಕನಿಷ್ಟ ಒಂದು ಲೀಟರ್ ಕಲ್ಪ ರಸ ಉತ್ಪಾದಿಸಬಹುದು, ಈ ದಿಸೆಯಲ್ಲಿ ತೆಂಗು ಉತ್ಪಾದಕರ ಕಂಪನಿ ಮುಂದಿನ ದಿನಗಳಲ್ಲಿ ಹೆಚ್ಚು ಕಾರ್ಯ ಪ್ರವೃತ್ತರಾಗಬೇಕು ಎಂದು ತಿಳಿಸಿದರು.
ಉಡುಪಿ ಜಿಲ್ಲಾ, ಹಾಪ್‍ಕಾಮ್ಸ್ ಅಧ್ಯಕ್ಷರಾದ ಸೀತಾರಾಮ್ ಗಾಣಿಗ, ಹಾಲಾಡಿ ಇವರು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಯುವಕರು ಕೃಷಿಯಲ್ಲಿ ಭಾಗವಹಿಸುತ್ತಿದ್ದಾರೆ. ಇದು ಕೃಷಿಕರಿಗೆ ಶುಭ ಸೂಚನೆ ಎಂದು ತಿಳಿಸಿದರು. ಕಾರ್ಯಕ್ರಮದ ಬಗ್ಗೆ ಪ್ರಾಸ್ತವಿಕವಾಗಿ ಮಾತನಾಡಿದ, ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ, ಡಾ. ಧನಂಜಯ ಬಿ ಇವರು ತೆಂಗು ದಿನಾಚರಣೆಯ ಮಹತ್ವ ಮತ್ತು ಮಾನವನ ಆರೋಗ್ಯದ ದೃಷ್ಠಿಯಿಂದ ತೆಂಗಿನ ಮೌಲ್ಯವರ್ದನಾ ಉತ್ಪನ್ನಗಳಾದ ವರ್ಜಿನ್ ತೆಂಗಿನ ಎಣ್ಣೆಯ ಪ್ರಾಮುಖ್ಯತೆಯನ್ನು ವಿವರಿಸಿದರು.
ತಾಂತ್ರಿಕ ಸಮಾವೇಶದಲ್ಲಿ ತೆಂಗಿನ ಪೋಷಕಾಂಶಗಳ ನಿರ್ವಹಣೆ ಕುರಿತು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಚೈತನ್ಯ ಹೆಚ್ ಎಸ್ ವಿವರಿಸಿದರು ಹಾಗೂ ತೆಂಗಿನ ತ್ಯಾಜ್ಯದಿಂದ ಎರೆಗೊಬ್ಬರ ಉತ್ಪಾದನೆ ಕುರಿತು ಮಾಹಿತಿಯನ್ನು ಡಾ. ನವೀನ್ ಎನ್. ಈ, ಬೇಸಾಯ ಶಾಸ್ತ್ರ ವಿಜ್ಞಾನಿ, ಕೃಷಿ ವಿಜ್ಞಾನ ಕೇಂದ್ರ ಇವರು ವಿವರಿಸಿದರು. ಕಾರ್ಯಕ್ರಮದ ನಂತರ ಪ್ರಾತ್ಯಕ್ಷಿಕೆ ಮೂಲಕ ತೆಂಗಿನ ಮರದ ಬುಡ ಬಿಡಿಸುವುದರ ಬಗ್ಗೆ ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಕುಂದಾಪುರ ಕಲ್ಪವೃಕ್ಷ ತೆಂಗು ಉತ್ಪಾದಕರ ಫೇಡರೇಶನ್‍ನ 45 ಸದಸ್ಯರು ಭಾಗವಹಿಸಿದರು. ಡಾ. ಎನ್ ಈ ನವೀನ್ ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಚೈತನ್ಯ ಹೆಚ್ ಎಸ್ ಸ್ವಾಗತಿಸಿದರು.