ಉಡುಪಿ,(ಸೆಪ್ಟೆಂಬರ್, 2): "ಸೆಪ್ಟೆಂಬರ್ 7 ರಿಂದ 19 ರವರೆಗೆ ನಡೆಯುವ ದ್ವೀತಿಯ ಪಿಯುಸಿ ಪೂರಕ ಪರೀಕ್ಷೆಯಲ್ಲಿ ಪರೀಕ್ಷಾ ಪಾವಿತ್ರ್ಯತೆಯನ್ನು ಕಾಪಾಡುವುದರೊಂದಿಗೆ ಯಾವುದೇ ಲೋಪವಿಲ್ಲದಂತೆ ಪರೀಕ್ಷೆ ನಡೆಸಬೇಕೆಂದು" ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.
ಅವರು ಇಂದು ನಗರದ ತಮ್ಮ ಕಛೇರಿ ಸಭಾಂಗಣದಲ್ಲಿ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೊರೋನಾ ಬಿಕ್ಕಟ್ಟಿನಲ್ಲಿ ನಡೆಯುತ್ತಿರುವ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯದ ದೃಷ್ಠಿಯಿಂದ ಅಗತ್ಯ ಮುಂಜಾಗೃತ ಕ್ರಮಗಳನ್ನು ಕೈಗೊಂಡು ಇಲಾಖೆಯ ಮಾರ್ಗಸೂಚಿಯಂತೆ ಪರೀಕ್ಷೆಯನ್ನು ನಡೆಸಬೇಕೆಂದು ಸೂಚನೆ ನೀಡಿದರು.
ಜಿಲ್ಲೆಯ ಒಟ್ಟು 4 ಪರೀಕ್ಷಾ ಕೇಂದ್ರಗಳಲ್ಲಿ 1104 ವಿದ್ಯಾರ್ಥಿಗಳು, 614 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 1718 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದ ಅವರು, ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಣೆ ಮಾಡಲಾಗುವುದು ಎಂದರು.
ಕೊರೋನಾ ದೃಢಪಟ್ಟ ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಅನುಮತಿ ನೀಡಿದರೆ ಅಂತಹ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪರೀಕ್ಷಾ ಕೇಂದ್ರವನ್ನು ಸಿದ್ಧಪಡಿಸಬೇಕೆಂದು ಸೂಚನೆ ನೀಡಿದರು.
ಈಗಾಗಲೇ ಎಸ್.ಎಸ್.ಎಲ್.ಸಿ ಹಾಗೂ ಸಿ.ಇ.ಟಿ ಪರೀಕ್ಷೆಯನ್ನು ಜಿಲ್ಲೆಯಲ್ಲಿ ಸುವ್ಯವಸ್ಥಿತವಾಗಿ ನಡೆಸಲಾಗಿರುವ ಅನುಭವವಿದ್ದು ಅದೇ ರೀತಿಯಲ್ಲಿ ಪಿಯುಸಿ ಪೂರಕ ಪರೀಕ್ಷೆಯನ್ನು ಸಹ ವ್ಯವಸ್ಥಿತ ರೀತಿಯಲ್ಲಿ ನಡೆಸಬೇಕು, ಎಂದ ಅವರು ಪರೀಕ್ಷಾ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಬೇಕು. ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ತಿಳಿಸಬೇಕಾಲ್ಲದೇ ಪ್ರತೀಯೊಬ್ಬ ವಿದ್ಯಾರ್ಥಿಗಳ ಥರ್ಮಾಲ್ ಸ್ಕ್ಯಾನಿಂಗ್ ನಡೆಸಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಬೇಕೆಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮಾತನಾಡಿ ‘ಪರೀಕ್ಷಾ ಕೇಂದ್ರದ ಹೊರ ಭಾಗದಲ್ಲಿ ಹಾಗೂ ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಶಿಕ್ಷಕರು ಎಚ್ಚರವಹಿಸಬೇಕು' ಎಂದು ತಿಳಿಸಿದರು.
ಸಭೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಭಗವಂತ ಕಟ್ಟಿಮನಿ, ತಹಶೀಲ್ದಾರರುಗಳಾದ ಪ್ರದೀಪ್ ಎಸ್ ಕುರುಡೇಕರ್, ಮಹೇಶ್ಚಂದ್ರ ಹಾಗೂ ಕಾರ್ಕಳ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಾಧವ್.ಭಟ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ನಗರದ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಬೃಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದ ಅಂಗವಾಗಿ ಸರಳವಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್‌ರವರು ಬೃಹ್ಮಶ್ರೀ ನಾರಾಯಣ ಗುರು ಭಾವಚಿತ್ರಕ್ಕೆ ಪುಷ್ಪ ಅರ್ಚನೆ ಮಾಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಬಿ. ಸದಾಶಿವ ಪ್ರಭು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶೇಷಪ್ಪ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.