ದಕ್ಷಿಣ ಕನ್ನಡ:- ಕೊರೋನಾ ನೆಪವೊಡ್ಡಿ ಪಿಯುಸಿ ಪಠ್ಯಕ್ರಮದಲ್ಲಿ ಶೇ.30 ಕಡಿತ ಘೋಷಿಸಲಾಗಿದ್ದು, ಕತ್ತರಿಯಾಡಿಸುವ ಭರಾಟೆಯಲ್ಲಿ ಪ್ರಮುಖ ಅಧ್ಯಾಯಗಳನ್ನೇ ತೆಗೆದು ಹಾಕಿರುವುದಕ್ಕೆ ಎನ್.ಎಸ್.ಯು.ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ ಖಂಡನೆ ವ್ಯಕ್ತಪಡಿಸಿದ್ದಾರೆ.
ವ್ಯವಹಾರ ಅಧ್ಯಾಯನದಲ್ಲಿ ಫೈನಾನ್ಶಿಯಲ್ ಮಾರ್ಕೆಟಿಂಗ್, ಮಾರ್ಕೆಟಿಂಗ್ ಇತ್ಯಾದಿ ಪ್ರಸ್ತುತ ವಿಷಯಗಳನ್ನು ಕಡಿತ ಮಾಡಲಾಗಿದೆ. ದ್ವಿತೀಯ ಪಿಯು ಇತಿಹಾಸ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ವಿಷಯವನ್ನೇ ತೆಗೆದುಹಾಕಲಾಗಿದೆ. ರಾಜ್ಯಶಾಸ್ತ್ರದಲ್ಲಿ ಭಾರತದ ರಾಜಕೀಯದ ನೂತನ ಪ್ರವೃತ್ತಿ, ಅಸ್ಮಿತೆ, ರಾಜಕೀಯದ ಉಗಮ, ಭ್ರಷ್ಟಾಚಾರದ ವಿರುದ್ಧ ಯುವ ಜನಾಂಗ, ಸಮಕಾಲೀನ ರಾಜಕೀಯ ವಿದ್ಯಾಮಾನಗಳು ಸೇರಿ ಪ್ರಮುಖ ವಿಷಯಗಳಿಗೆ ಕತ್ತರಿ ಹಾಕಿದ್ದು ಸರಿಯಲ್ಲ.
ವಿದ್ಯಾರ್ಥಿಗಳು ಆನ್ ಲೈನ್, ಪೂರ್ವ ಮುದ್ರಿತ ತರಗತಿಗಳಲ್ಲಿ ಕಲಿತಿರುವ ಪಠ್ಯಗಳನ್ನು ಮತ್ತು ಭವಿಷ್ಯದ ಶಿಕ್ಷಣಕ್ಕೆ ಅವಶ್ಯವಿರುವ ಅಧ್ಯಾಯಗಳನ್ನು ಕಡಿತ ಮಾಡಿರುವುದಕ್ಕೆ ವಿದ್ಯಾರ್ಥಿಗಳು ಮತ್ತು ಪೋಷಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಅಧ್ಯಾಯಗಳನ್ನು ಆನ್ ಲೈನ್ ಮೂಲಕ ಬೋಧಿಸಲಾಗಿದೆಯಾದರೂ ಅವುಗಳ ಪರಿಪೂರ್ಣ ಜ್ಞಾನವನ್ನು ನೇರ ತರಗತಿಯಲ್ಲಿ ನೀಡಲು ಸಾಧ್ಯ. ಹೀಗಾಗಿ ಆನ್ ಲೈನ್ ಬೋಧನೆ ಆಧಾರದಲ್ಲಿ ಕಡಿತ ಮಾಡಿರುವುದು ಖಂಡನೀಯ. ಒಟ್ಟಾರೆ ಪಠ್ಯ ಕಡಿತದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಅನೇಕ ಅಧ್ಯಾಯಗಳನ್ನು ಕೈ ಬಿಟ್ಟಿರುವುದು ಮುಂದಿನ ಶೈಕ್ಷಣಿಕ ಬದುಕಿಗೆ ಮಾರಕವಾಗಲಿದೆ.
ಪ್ರಸಕ್ತ ಸಾಲಿನಲ್ಲಿ ಪ್ರಥಮ ಪಿಯುಸಿಗೆ ಸೇರಿದ ವಿದ್ಯಾರ್ಥಿಗಳಿಗೂ ಶೇ.70ರಷ್ಟು ಪಠ್ಯ ಮಾತ್ರ ಸಿಗಲಿದೆ. 2021-22ರಲ್ಲಿ ದ್ವಿತೀಯ ಪಿಯುಸಿಯಲ್ಲಿ ಶೇ.100ರಷ್ಟು ಪಠ್ಯ ಇರಲಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಲಿದೆ. ಆದ್ದರಿಂದ ಸರಕಾರ ಈ ಬಗ್ಗೆ ಪುನರ್ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಸವಾದ್ ಸುಳ್ಯ ಆಗ್ರಹಿಸಿದ್ದಾರೆ.