ಮಂಗಳೂರು:- ಪ್ರಭಾಕರ್ ಪ್ರಭು ದಾರಿಯಲ್ಲಿ ಬರುತ್ತಿರುವಾಗ ಸಹ್ಯಾದ್ರಿ ಕಾಲೇಜಿನ ಬಳಿ ಒಂದು ಪರ್ಸ್ ಸಿಕ್ಕಿದ್ದು, ಅದರಲ್ಲಿ ಅಂದಾಜು ಒಂದು ಲಕ್ಷ ರೂಪಾಯಿ ಮಿಕ್ಕಿ ಮೌಲ್ಯದ ಚಿನ್ನದ ಗಟ್ಟಿ ಇತ್ತು. ಅದನ್ನು ಅವರು ತಮ್ಮ ಸಂಬಂಧಿಯಾಗಿರುವ ಶಾಸಕ ವೇದವ್ಯಾಸ ಕಾಮತ್ ಅವರ ಬಳಿ ಹೇಳಿದ್ದರು. ವೇದವ್ಯಾಸ ಕಾಮತ್ ಅವರ ಸಲಹೆಯಂತೆ ಮಹಾಲಕ್ಷ್ಮಿ ಜ್ಯುವೆಲ್ಲರ್ಸ್ ಮಾಲೀಕರಾಗಿರುವ ರವೀಂದ್ರ ನಿಕ್ಕಂ ಅವರು ತಮ್ಮ ಆಪ್ತರ ವಲಯದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದಾಗ ಅದು ಅಡ್ಯಾರ್ ಬಳಿಯ ನಿವಾಸಿ ಕೃಷ್ಣ ಆಚಾರ್ ಅವರಿಗೆ ಸೇರಿದ್ದು ಎಂದು ಗೊತ್ತಾಯಿತು. ಈ ಕುರಿತು ಕೃಷ್ಣ ಆಚಾರ್ ಅವರ ಬಳಿ ವಿಚಾರಿಸಿದಾಗ ಅದು ಹಿಂದಿನ ದಿನ ಕಳೆದುಹೋಗಿದ್ದನ್ನು ಅವರು ರವೀಂದ್ರ ನಿಕ್ಕಂ ಅವರಿಗೆ ತಿಳಿಸಿದರು.

ಆ ಬಳಿಕ ಮಂಗಳೂರಿನ ಜೋಡು ಮಠ ರಸ್ತೆಯಲ್ಲಿರುವ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಕಚೇರಿಯಲ್ಲಿ ಬುಧವಾರ ಟ್ರಸ್ಟ್ ಪ್ರಮುಖರಾದ ಹನುಮಂತ ಕಾಮತ್ ಅವರು ಪ್ರಭಾಕರ್ ಪ್ರಭು ಹಾಗೂ ರವೀಂದ್ರ ನಿಕ್ಕಂ ಅವರ ಉಪಸ್ಥಿತಿಯಲ್ಲಿ ಕೃಷ್ಣ ಆಚಾರ್ ಅವರಿಗೆ ಬಂಗಾರವನ್ನು ಹಸ್ತಾಂತರಿಸಿದರು. ಕೃಷ್ಣ ಆಚಾರ್ ಅವರು ಸಾಂಪ್ರದಾಯಿಕ ಚಿನ್ನದ ಕೆಲಸಗಾರರಾಗಿದ್ದು, ಬಂಗಾರದ ಆಭರಣ ಮಾಡಲು ಚಿನ್ನದ ಗಟ್ಟಿಯನ್ನು ಖರೀದಿಸಿ ದಾರಿಯಲ್ಲಿ ಬರುತ್ತಿದ್ದಾಗ ಕಳೆದುಕೊಂಡಿದ್ದರು. ಈ ಬಗ್ಗೆ ಮಾತನಾಡಿದ ಹನುಮಂತ ಕಾಮತ್ ಅವರು ಪ್ರಾಮಾಣಿಕವಾಗಿ ಬಂಗಾರವನ್ನು ಸಂಬಂಧಪಟ್ಟವರಿಗೆ ಮರಳಿಸಲು ಯೋಗ್ಯ ಕ್ರಮ ಕೈಗೊಂಡ ಪ್ರಭಾಕರ್ ಪ್ರಭು ಅವರನ್ನು ಅಭಿನಂದಿಸಿದರು ಹಾಗೂ ಬಂಗಾರದ ಮಾಲೀಕರಿಗೆ ಅದನ್ನು ಹಿಂತಿರುಗಿಸಲು ಸಹಕಾರ ನೀಡಿದ ರವೀಂದ್ರ ನಿಕ್ಕಂ ಅವರಿಗೂ ಅಭಿನಂದನೆ ಸಲ್ಲಿಸಿದರು.