ಮಂಗಳೂರು:- ಯಾವುದೇ ಕ್ರೀಡೆಯಲ್ಲಿ  ಆಟಗಾರನು  ಪ್ರದರ್ಶಿಸುವ  ಕೌಶಲ್ಯದಲ್ಲಿ  ಆತನು ಪಡೆದಿರುವ  ಕಠಿಣ ತರಬೇತಿಯೇ  ಅದರ ಅಡಿಪಾಯವಾಗಿದ್ದು  ಅದರ  ಫಲವಾಗಿಯೇ  ಓರ್ವ ಕ್ರೀಡಾಪಟು ನಿರ್ಮಾಣಗೊಳ್ಳಲು ಸಾಧ್ಯವೆಂದು  ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ರವಿಶಂಕರ್ ಮಿಜಾರ್  ಹೇಳಿದರು. ಪ್ರಾಧಿಕಾರದ ಅಧ್ಯಕ್ಷರಾಗಿ  ಸಾಮಾಜಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ  ನಿಟ್ಟಿನಲ್ಲಿ  ಉರ್ವಾಸ್ಟೋರ್ಸ್ ನಲ್ಲಿರುವ   ವಾಲಿಬಾಲ್ ತರಬೇತಿ ನೀಡುವ  ಪ್ರಖ್ಯಾತ ಸಂಸ್ಥೆಯಾಗಿರುವ  ಮಂಗಳಾ ಫ್ರೆಂಡ್ಸ್ ಸರ್ಕಲ್ ಕ್ರೀಡಾಂಗಣಕ್ಕೆ ಭೇಟಿ ನೀಡಿ ಅಲ್ಲಿನ ಚಟುವಟಿಕೆಗಳನ್ನು ವೀಕ್ಷಿಸಿ  ತರಬೇತಿ ಪಡೆಯುತ್ತಿರುವ  ಯುವ ಆಟಗಾರರನ್ನು ಉದ್ದೇಶಿಸಿ  ಹೇಳಿದರು.

ತರಬೇತುದಾರರು  ನೀಡುವ ಹಾಗೂ ಹೇಳಿಕೊಡುವ  ಪಾಠವೇ ನಿಮ್ಮ ಮುಂದಿನ  ಭವಿಷ್ಯ ನಿರ್ಮಾಣದಲ್ಲಿ  ಭದ್ರಬುನಾದಿಯಾಗಿರುತ್ತದೆ. ಹಾಗೂ  ಅದರ ಮುಖಾಂತರ  ನಿಮ್ಮ  ಆಟದ ಕೌಶ್ಯಲ್ಯತೆಯ  ಗುಣಮಟ್ಟ  ಪರೀಕ್ಷಿಸಲ್ಪಡುತ್ತದೆ. ಆದ್ದರಿಂದ  ತಪ್ಪದೇ ತರಬೇತಿಯಲ್ಲಿ ಪಾಲ್ಗೊಂಡು  ಉತ್ತಮ ಆಟಗಾರರಾಗಿ ಮೂಡಿಬಂದು ಸಂಸ್ಥೆಯ ಕೀರ್ತಿಪತಾಕೆಯನ್ನು ಉತ್ತುಂಗಕ್ಕೆ  ಏರಿಸುವ ಕೆಲಸ ಮಾಡಬೇಕೆಂದರು. ನೂರಕ್ಕೂ ಮಿಗಿಲಾಗಿ  ಆಟಗಾರರಿಗೆ ವರ್ಷಪೂರ್ತಿ  ಸಂಪೂರ್ಣ ಉಚಿತ ತರಬೇತಿಯನ್ನು ನೀಡುವ  ಮಂಗಳಾ ಫ್ರೆಂಡ್ಸ್ ಸರ್ಕಲ್  ನಿಜಕ್ಕೂ ಒಂದು ಶ್ರೇಷ್ಠ ಸಂಸ್ಥೆ ಎಂದು ಕೊಂಡಾಡಿದರು.  

ಸಂಸ್ಥೆಯು ಕೈಗೊಂಡಿರುವ  ಕ್ರೀಡಾಂಗಣ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯಗಳ  ಕಾಮಗಾರಿಗೆ ಪ್ರಾಧಿಕಾರದ ಸಂಪೂರ್ಣ  ಸಕ್ರಿಯ ಸಹಕಾರ ನೀಡುವುದಾಗಿಯೂ ಅವರು  ಈ. ಸಂದರ್ಭದಲ್ಲಿ  ಹೇಳಿದರು.  ಆಟಗಾರರ ಶಿಸ್ತನ್ನು ಬಹಳವಾಗಿ ಪ್ರಶಂಸಿಸಿದರು. ಸಂಸ್ಥೆಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಫ್ರ್ಯಾಂಕ್ಲಿನ್ ಮೊಂತೆರೊ  ತಮ್ಮ  ಪ್ರಾಸ್ತಾವಿಕ  ಮಾತುಗಳಲ್ಲಿ  ಸಂಸ್ಥೆ ನಡೆಸುವ ಚಟುವಟಿಕೆಗಳನ್ನು ವಿವರಿಸಿದರು. 

ಅಧ್ಯಕ್ಷ  ರಮೇಶ್ ಶೆಟ್ಟಿ ಸ್ವಾಗತಿಸಿದರು. ತರಬೇತುದಾರ  ಅರುಣ್ ಬ್ಯಾಪ್ಟಿಸ್ಟ್ ,  ಸಂಸ್ಥೆಯ ಪದಾಧಿಕಾರಿಗಳಾದ  ಗುರುಪ್ರಸಾದ್ ರಾವ್ , ಮನೋಹರ್ ಸುವರ್ಣ , ಸುಭಾಸ್ ಉರ್ವಾಸ್ಟೋರ್ಸ್ , ಅಶೋಕ್ ಕುಮಾರ್ (ತಮ್ಮ )  ನಿವೃತ್ತ ಶಿಕ್ಷಕ ಶ್ರೀ ಪದಕಣ್ಣಾಯ ,  ಸಚಿನ್ ಕದ್ರಿ, ಹರೀಶ್ , ಹಾಗೂ ತರಬೇತಿಯನ್ನು ಪಡೆಯುತ್ತಿರುವ  ಬಾಲಕ ಬಾಲಕಿಯರ ಸಹಿತ  ಸಂಸ್ಥೆಯ ಹಿರಿಯ ಆಟಗಾರರು  ಕೂಡಾ  ಈ ಸಂದರ್ಭದಲ್ಲಿ  ಉಪಸ್ಥಿತರಿದ್ದರು.ರಾಜೇಂದ್ರರವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು . ನಿರ್ಮಾಣದ ಕಾಮಗಾರಿಗಾಗಿ  ಅನುದಾನಕ್ಕಾಗಿ ಸಂಸ್ಥೆಯ ವತಿಯಿಂದ  ಪ್ರಾಧಿಕಾರದ ಅಧ್ಯಕ್ಷರಿಗೆ ಮನವಿಯನ್ನು ನೀಡಲಾಯಿತು.