ಮಂಗಳೂರು, ಫೆ. 26: ನಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ದಿನೇಶ್ ಎಂಬವರ ಮೇಲೆ ಬಜರಂಗ ದಳದ ಕಿಟ್ಟ ಅಲಿಯಾಸ್ ಕೃಷ್ಣ ಎಂಬವನು ಕನ್ಯಾಡಿ ರಾಮ ಮಂದಿರದ ಎದುರು ಮಾರಣಾಂತಿಕವಾಗಿ ಹಲ್ಲೆ ಮಾಡಿ ಆತನ ಕೊಲೆ ಮಾಡಿದ್ದಾನೆ ಎಂದು ಮಂಗಳೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜೀ ಶಾಸಕ ವಸಂತ ಬಂಗೇರ ಪತ್ರಿಕಾಗೋಷ್ಠಿ ನಡೆಸಿ ಹೇಳಿದರು.

ಒಳ ಗಾಯಗೊಂಡ ದಿನೇಶ್ ಅಲ್ಲೇ ಪಕ್ಕ ಹುಲ್ಲಿನ ಮೇಲೆ ಮಲಗಿದ. ಆಮೇಲೆ ತಾಯಿ ಬಂದು ಆತನನ್ನು ‌ವೈದ್ಯರಿಗೆ ತೋರಿಸಿದರೆ ದೊಡ್ಡ ಆಸ್ಪತ್ರೆಗೆ ಒಯ್ಯಲು ಹೇಳಿದರು. ಅಲ್ಲಿಂದ ಎಸ್‌ಡಿಎಂ ಆಸ್ಪತ್ರೆಗೆ ಒಯ್ದರೆ ಮಂಗಳೂರಿನ ಆಸ್ಪತ್ರೆಗೆ ಒಯ್ಯಲು ಹೇಳಿದರು. ವೆನ್ ಲಾಕ್ ಆಸ್ಪತ್ರೆಗೆ ತಂದು‌ ಸೇರಿಸಿದರು. ಆದರೆ ದಿನೇಶ್ ಮರಣಿಸಿದ. ಕಿಟ್ಟ ತಪ್ಪಿಸಿ ಓಡಿದ್ದಾನೆ ಎಂದು ಅವರು ಹೇಳಿದರು.

ಧರ್ಮಸ್ಥಳದಲ್ಲಿ ಈ ಕಿಟ್ಟ ಮತ್ತು ಈತನ ಅಣ್ಣ ಭಾಸ್ಕರ ಮೊದಲಾದವರು ಬಜರಂಗ ದಳ ಮತ್ತು ಬಿಜೆಪಿ ಹೆಸರಿನಲ್ಲಿ ಗೂಂಡಾಗಿರಿ, ಹೊಯಿಗೆ ಕಳ್ಳತನ, ಗೋ ಕಳ್ಳ ತನ ಇತ್ಯಾದಿ ಮಾಡುತ್ತಿದ್ದಾರೆ. ನಾವು ಹೆಣ ರಾಜಕೀಯ ಮಾಡಲಿಲ್ಲ. ಕ್ರಮ ಪ್ರಕಾರ ಅಂತ್ಯಕ್ರಿಯೆ ನಡೆಸಿದೆವು ಎಂದು ಬಂಗೇರ ತಿಳಿಸಿದರು.

ಇವರದು ಬಡ ಕುಟುಂಬ. ದಿನೇಶ್‌ರ ತಾಯಿ, ಮಡದಿ, ಮೂವರು ಸಣ್ಣ ಮಕ್ಕಳು ಇದ್ದಾರೆ. ಅವರಿಗೆ ಸರಕಾರ ಬೇಗನೆ ಪರಿಹಾರ ನೀಡಬೇಕು. ಯಾವುದೇ ಚುನಾವಣೆ ಬರುವಾಗ ಬಿಜೆಪಿ ಮತ್ತು ಬಜರಂಗ ದಳದವರು ಏನಾದರೂ ಮಾಡುತ್ತಿರುತ್ತಾರೆ. ಅದೀಗ ನಡೆದಿದೆ. ಈ ಬಜರಂಗ ದಳದ ಭಾಸ್ಕರ ಮದುವೆ ಮಾಡಿಸುವ ಜಿಹಾದ್ ನಡೆಸಿದ್ದಾರೆ. ಹೊಡೆದ ಸಿಸಿಟೀವಿ ದೃಶ್ಯಗಳು ಇವೆ. ನಾವು ಸರಕಾರ ಮತ್ತು ನಮ್ಮ ನಾಯಕರಿಗೆ ಬರೆದಿದ್ದೇವೆ. ನಾವು ಒಂದಷ್ಟು ಹಣ ಒಟ್ಟು ಮಾಡಿ ಪರಿಹಾರ ಒದಗಿಸುತ್ತೇವೆ ಎಂದು ವಸಂತ ಬಂಗೇರ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿಯ ಕಾಂಗ್ರೆಸ್ ನಾಯಕರಾದ ಸಾಹುಲ್ ಹಮೀದ್, ಮನೋಹರ ಕುಮಾರ್, ರಂಜನ್ ಗೌಡ, ಶೇಖರ ಕುಕ್ಕೇಡಿ, ಕೇಶವ ಬೆಳಾಲು, ದಿನೇಶ್‌ರ ತಾಯಿ ಪದ್ಮಾವತಿ ಹಾಜರಿದ್ದರು.