ಮಂಗಳೂರು, ಜು 17: ದಲಿತ ಸಂಘಟನೆಗಳ ಒಕ್ಕೂಟವು ಭಾನುವಾರ ಬೆಳ್ತಂಗಡಿಯ ನಾರಾಯಣ ಗುರು ಸಭಾಭವನದಲ್ಲಿ ಇತ್ತೀಚೆಗೆ ನಿಧನರಾದ ದಲಿತ ಚಿಂತಕ ಪಿ. ಡೀಕಯ್ಯರಿಗೆ ನುಡಿ ನಮನ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿತು.
ದಲಿತ ನಾಯಕ ಅಚ್ಯುತ ಸಂಪಯಿ ನುಡಿ ನಮನದ ಅಧ್ಯಕ್ಷತೆ ವಹಿಸಿದ್ದರು. ಮಾಜೀ ಶಾಸಕ ವಸಂತ ಬಂಗೇರ, ಮೇಲ್ಮನೆ ಸದಸ್ಯ ಪ್ರತಾಪ ಸಿಂಹ ನಾಯಕ್, ರಾಜೀವ್ ಸಾಲ್ಯಾನ್, ವಾಸುದೇವ ಬೆಳ್ಳೆ, ಕಾಂತಪ್ಪ ಅಲಂಗಾರ್, ರಕ್ಷಿತ್ ಶಿವರಾಂ, ಶಿವಕುಮಾರ್, ದಿವಂಗತ ಡೀಕಯ್ಯರ ಪತ್ನಿ ಆತ್ರಾಡಿ ಅಮೃತಾ ಶೆಟ್ಟಿ ಮೊದಲಾದವರು ನುಡಿ ನಮನ ಸಲ್ಲಿಸಿದರು.
ನಮಗರಿವಿಲ್ಲದೆಯೇ ಬುದ್ಧ ಪೂರ್ಣಿಮೆಯ ದಿನವೇ ಈ ಕಾರ್ಯಕ್ರಮ ನಡೆಯುತ್ತಿದೆ ಅದು ಡೀಕಯ್ಯರ ಗುರುವಿಕೆಗೆ ಸಾಕ್ಷಿ ಎಂದು ಪ್ರಸ್ತಾವನೆಯಲ್ಲಿ ಕಕ್ಯಪದವು ಅವರು ಹೇಳಿದರು.
ಎಂಎಲ್‌ಸಿ ಪ್ರತಾಪ ಸಿಂಹ ನಾಯಕ ಅವರು ಮಾತನಾಡಿ ಸಾಧಕರ ಸಾವು ಸಾವಿನಲ್ಲಿ ಶೂನ್ಯವನ್ನು ಸೃಷ್ಟಿಸುತ್ತದೆ ಎಂದರು.
ಮಾಜೀ ಶಾಸಕ ವಸಂತ ಬಂಗೇರ ಅವರು ಮಾತನಾಡಿ ಗ್ರಾಮ ಮಟ್ಟದಿಂದ ರಾಷ್ಟ್ರ ಮಟ್ಟದವರೆಗೆ ಹೋರಾಟ ಕಟ್ಟಿದವರು ಡೀಕಯ್ಯನವರು. ಶಾಲಾ ದಿನಗಳಿಂದ ಸಾವಿನ ಕ್ಷಣದವರೆಗೂ ಹೋರಾಟ ಮಾಡಿದವರು ಅವರು. ಅವರ ಕೊನೆಯ ಹೋರಾಟ ಪಠ್ಯ ಪುಸ್ತಕ ತಿರುಚುವಿಕೆ ವಿರುದ್ಧದ್ದು. ಅದರಲ್ಲಿ ನಾರಾಯಣ ಗುರುಗಳ ಪಠ್ಯದ ವಿಚಾರದಲ್ಲಿ ಫಲ ನೀಡಿದೆ ಎಂದು ಹೇಳಿದರು.
ಜಾತಿ ಹೆಸರುಗಳು ಪ್ರದೇಶವಾರು ವಿಭಿನ್ನವಾಗಿವೆ. ಅವನ್ನೆಲ್ಲ ವೈಜ್ಞಾನಿಕವಾಗಿ ಸರಿ ಮಾಡಬೇಕು ಎಂದು ಕೊನೆಯ ದಿನಗಳಲ್ಲಿ ಡೀಕಯ್ಯ ಪ್ರಯತ್ನ ಪಟ್ಟಿದ್ದರು. ಎಲ್ಲದರಲ್ಲೂ ಆಳವಾದ ಆಲೋಚನೆಯ ಡೀಕಯ್ಯರ ಆಳ ಅಗಲ ಮಾತಿನಲ್ಲಿ ಹಿಡಿದಿಡಲಾಗದು ಎಂದು ಡಾ. ವಾಸುದೇವ ಬೆಳ್ಳಿ ನುಡಿ ನಮನ ಸಲ್ಲಿಸಿದರು.
ಕೆಪಿಸಿಸಿ ಸಹ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಮಾತನಾಡಿ ಇಡೀ ರಾಜ್ಯದ ಪ್ರತಿನಿಧಿಗಳು ಇಲ್ಲಿದ್ದಾರೆ. ಯಾನ್ ದಿಕ್ಕೆ, ದಿಕ್ಕ್ ದಾಂತಿನಕಲೆಗ್ ದಿಕ್ಕ್ ತೋಜವುನಾಯೆ ಎಂದ ಡೀಕಯ್ಯರು ತುಂಬ ಸಂಕೀರ್ಣ ಕಾಲ ಘಟ್ಟದಲ್ಲಿ ನಮ್ಮನ್ನು ಅಗಲಿದ್ದಾರೆ ಎಂದು ಹೇಳಿದರು.
ಮಂಗಳೂರಿನಲ್ಲಿ ಅಂಬೇಡ್ಕರ್ ಭವನಕ್ಕೆ ಭೂಮಿ ಬೇಕು ಎಂದು 1994ರಲ್ಲಿ ಹೋರಾಟ ಆರಂಭಿಸಿ ಪೋಲೀಸು ಬಂಧನಕ್ಕೆ ಒಳಗಾದವರಲ್ಲಿ ಪ್ರಮುಖರು ಎಂದು ಕಾಂತಪ್ಪ ಅಲಂಗಾರ್ ಅವರು ಹೇಳಿದರು.
ಐಎಎಸ್ ಅಕಾಡೆಮಿಯ ಶಿವಕುಮಾರ್ ಮಾತನಾಡಿ ಡೀಕಯ್ಯ ದಂಪತಿಯರ ಮಾತಿನಿಂದ ಪ್ರೇರಣೆ ಪಡೆದವರಲ್ಲಿ ನಾನೂ ಒಬ್ಬ. ನಾವು ಯಾರು ಎಂಬ ಅವರ ಹೇಳಿಕೆಯಲ್ಲಿ ನಾನು ನನ್ನತನ ಕಂಡುಕೊಂಡಿದ್ದೇನೆ ಎಂದರು.
ಡೀಕಯ್ಯರು ಎಲ್ಲ ಜನರೊಂದಿಗೆ ಹೇಗೆ ಬೆರೆತಿದ್ದರು ಎಂದರೆ ನಾರಾಯಣ ಗುರು ಸಭಾ ಭವನವನ್ನು ಇಲ್ಲಿನ ಬಿರುವ ಸಂಘದವರು ಉಚಿತವಾಗಿ ನೀಡಿದ್ದಾರೆ. ಅವರ ಪರ ಹಾಜರಾದ ರಾಜೀವ್ ಸಾಲ್ಯಾನ್ ಅವರು ಮಾತನಾಡಿ ಮಂಡಲ್ ವರದಿ ಹೋರಾಟದಲ್ಲಿ ನನಗೆ ಹತ್ತಿರ ಆದವರು ಡೀಕಯ್ಯ ಎಂದು ತಿಳಿಸಿದರು.
ಸತೀಶ್ ಕಕ್ಯಪದವು ಆತ್ರಾಡಿ ಅಮೃತಾ ತಮ್ಮ ಶೋಕದಲ್ಲಿ ಮಾತನಾಡದಾದರು.
ಕೊನೆಯದಾಗಿ ಅಧ್ಯಕ್ಷತೆ ವಹಿಸಿದ್ದ ಪರಿವರ್ತನಾ ವೇದಿಕೆಯ ಅಚ್ಯುತ ಸಂಪಯಿ ಮಾತನಾಡಿದರು.
ಡೀಕಯ್ಯರು ಮಾತನಾಡಿದರೆ ಸಭೆ ಮೌನವಾಗುತ್ತದೆ. ಅವರನ್ನು ಮನುವಾದಿಗಳು ಸಭೆಯಲ್ಲಿ ಪ್ರಶ್ನಿಸಿದರೆ ಡೀಕಯ್ಯರು ಕೊಡುತ್ತಿದ್ದ ಉತ್ತರ ಎಲ್ಲರನ್ನೂ ದಂಗುಬಡಿಸುತ್ತಿತ್ತು. ಅವರ ತುಳು ಭಾಷೆಯ ಸ್ಪಷ್ಟತೆ ಬೇರೆಯವರಿಗೆ ಇರಲಿಲ್ಲ. ಎಲ್ಲ ಹಿಂದುಳಿದವರ ಪರ ಹೋರಾಡಿದ ಡೀಕಯ್ಯರು ತಾನು ಹುಟ್ಟಿದ ಜಾತಿಗೆ ನ್ಯಾಯ ಒದಗಿಸಲು ಸದಾ ಹೋರಾಡಿದರು. ಈಗ ನಮ್ಮ ಕರ್ತವ್ಯ ಅವರ ಕನಸನ್ನು ನನಸಾಗಿಸುವುದು ಎಂದು ಅಚ್ಯುತ ಸಂಪಯಿ ತಿಳಿಸಿದರು.