ಮಂಗಳೂರು: "ಸ್ವಯಂಸೇವೆ ಎಂಬುದು ಒಂದು ನಿರಂತರ ಪ್ರಕ್ರಿಯೆ. ನಾವು ನಮ್ಮ ಇಚ್ಛಾಶಕ್ತಿಯಿಂದ ಅದರಲ್ಲಿ ಪಾಲ್ಗೊಳ್ಳುವುದರಿಂದ ಅದ್ಭುತವನ್ನು ಸಾಧಿಸಲು ಸಾಧ್ಯ," ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಹೇಳಿದ್ದಾರೆ.


ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಶನಿವಾರ, ಭಾರತ ಸರ್ಕಾರದ ಯುವಜನ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು, ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್‌ಕ್ರಾಸ್‌ ಘಟಕ, ಸೆಂಟರ್‌ ಫಾರ್‌ ಇಂಟಗ್ರೇಟೆಡ್‌ ಲರ್ನಿಂಗ್‌ ಮತ್ತು ಮಂಗಳೂರು ಸರ್ಫ್‌ ಕ್ಲಬ್‌ ಸಹಯೋಗದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸ್ವಯಂಸೇವಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಕೊವಿಡ್‌ ಸಾಂಕ್ರಾಮಿಕ ನಮ್ಮಲ್ಲಿ ಸ್ವಯಂಸೇವೆಯ ಕಿಚ್ಚು ಹಚ್ಚಿದೆ ಮತ್ತು ಧನಾತ್ಮಕ ಯೋಚನೆಯ ಪಾಠ ಹೇಳಿಕೊಟ್ಟಿದೆ. ನಮ್ಮ ನಡುವೆ ಸಹಾನುಭೂತಿಯಿರಬೇಕು. ಸಮಾಜದಿಂದ ಪಡೆದುಕೊಂಡಿರುದನ್ನು ಹಿಂದಿರುಗಿಸುವ ಋಣ ನಮ್ಮ ಮೇಲಿದೆ ಎಂದು ಎಚ್ಚರಿಸಿದೆ,” ಎಂದು ಕುಲಪತಿ ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಭಾರತೀಯ ರೆಡ್‌ಕ್ರಾಸ್‌ ಸೊಸೈಟಿಯ ಜಿಲ್ಲಾ ಘಟಕದ ಮುಖ್ಯಸ್ಥ ಶಾಂತಾರಾಮ್‌ ಶೆಟ್ಟಿ ಮಾತನಾಡಿ, "ಕೊವಿಡ್‌ ಸಂಕಷ್ಠದಲ್ಲಿ ಯಾರೂ ಮನೆಯಿಂದ ಹೊರಬರದ ಸ್ಥಿತಿಯಲ್ಲಿ ರೆಡ್‌ಕ್ರಾಸ್‌ ಸ್ವಯಂಸೇವಕರು ಜೀವದ ಹಂಗು ತೊರೆದು ಸ್ವಯಂಸೇವಕರಾಗಿ ದುಡಿದಿದ್ದಾರೆ. ಮುಂದಿನ ಮೂರು ತಿಂಗಳು ಮಾಡಬೇಕಾದ ಕೆಲಸಗಳ ಪಟ್ಟಿ ಸಿದ್ಧವಿದೆ", ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ. ಎ ಹರೀಶ್‌. ಸೆಂಟರ್‌ ಫಾರ್‌ ಇಂಟಗ್ರೇಟೆಡ್‌ ಲರ್ನಿಂಗ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಸಚಿತಾ ನಂದಗೋಪಾಲ್‌, ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಸಂಯೋಜಕ ರಘುವೀರ್‌ ಸೂಟರ್‌ಪೇಟ್‌, ವಿಶ್ವವಿದ್ಯಾನಿಲಯದ ರೆಡ್‌ಕ್ರಾಸ್‌ ನೋಡಲ್‌ ಅಧಿಕಾರಿ ಡಾ. ಗಣಪತಿ ಗೌಡ, ಯುವ ರೆಡ್‌ಕ್ರಾಸ್‌ನ ಜಿಲ್ಲಾ ಸಂಯೋಜಕ ಸಾಚೇತ್‌ ಸುವರ್ಣ ಮೊದಲಾದವರು ಭಾಗವಹಿಸಿದ್ದರು.

ಬಳಿಕ ʼಪೇಪರ್‌ ಸೀಡ್‌ʼನ ನಿತಿನ್‌ ವಾಸ್‌, ʼಮಂಗಳೂರು ಗ್ರೀನ್‌ ಬ್ರಿಗೇಡ್‌ʼನ ಜೀತ್‌ ಮಿಲನ್‌ ರೋಶ್‌, ʼಮಂಗಳೂರು ಸರ್ಫ್‌ ಕ್ಲಬ್‌ʼನ ಮಿಥುನ್‌ ಭಟ್‌ ಕಕ್ಕುಂಜೆ ಮೊದಲಾದವರಿಂದ ಅನುಭವ ಹಂಚಿಕೆ, ಚರ್ಚೆಗಳು ನಡೆದವು. ಹಿರಿಯ ಪತ್ರಕರ್ತ, ʼಸೆಂಟರ್‌ ಫಾರ್‌ ಇಂಟಗ್ರೇಟೆಡ್‌ ಲರ್ನಿಂಗ್‌ʼನ ಸಹ ಸಂಸ್ಥಾಪಕ ಶ್ರೀನಿವಾಸನ್‌ ನಂದಗೋಪಾಲ್‌ ಕಾರ್ಯಕ್ರಮ ನಡೆಸಿಕೊಟ್ಟರು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.