ಮಂಗಳೂರು:- ಮಾಂಡ್ ಸೊಭಾಣ್ ಪ್ರಾಯೋಜಿತ ತಿಂಗಳ ವೇದಿಕೆ ಸರಣಿಯ 227ನೇ ಕಾರ್ಯಕ್ರಮವು 06-12-2020 ರಂದು ಸಂಜೆ 6.30 ಗಂಟೆಗೆ ಶಕ್ತಿನಗರದಲ್ಲಿರುವ ಕಲಾಂಗಣದ ನೋರಿನ್ ಮತ್ತು ರೊನಾಲ್ಡ್ ಮೆಂಡೊನ್ಸಾ ಬಯಲು ರಂಗಮಂದಿರದಲ್ಲಿ ನಡೆಯಲಿದೆ. ಲಾಕ್‍ಡೌನ್ ನಂತರ ಎಂಟು ತಿಂಗಳ ಬಳಿಕ ವೇದಿಕೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ನಗರದ ಪ್ರಖ್ಯಾತ ಸಿ.ಎ. ಹಾಗೂ ಸಂಗೀತ ಪ್ರೇಮಿ ಒಲ್ವಿನ್ ರಾಡ್ರಿಗಸ್ ಘಂಟೆ ಬಾರಿಸಿ ಚಾಲನೆ ನೀಡಲಿದ್ದಾರೆ.
ಅರುಣ್‍ರಾಜ್ ರಾಡ್ರಿಗಸ್ ಪರಿಕಲ್ಪನೆಯಲ್ಲಿ ಮೂಡಿ ಬಂದ `ಯೆವಾ ನಾಚಾ ತೆಂಚಾ ವಾಂಗ್ಡಾ’ (ಬನ್ನಿ ಅವರ ಸಂಗಡ ಕುಣಿಯೋಣ) ಈ ಕಾರ್ಯಕ್ರಮವನ್ನು ಸುಮೇಳ್, ಕಲಾಕುಲ್ ಹಾಗೂ ನಾಚ್ ಸೊಭಾಣ್ ಕಲಾವಿದರು ಪ್ರಸ್ತುತಪಡಿಸುವರು. ಕ್ರಿಸ್ಮಸ್ ಸಂಬಂಧಿ ಹಾಡುಗಳು, ನೃತ್ಯಗಳು, ಕಿರುನಾಟಕ ಹಾಗೂ ನ್ಯೂಸ್ಟಾರ್ ಬ್ರಾಸ್ ಬ್ಯಾಂಡ್ ಇವರಿಂದ ಬ್ಯಾಂಡ್ ಇರಲಿದೆ. ಎರಿಕ್ ಒಝೇರಿಯೊ ಸಂಗೀತ ನಿರ್ದೇಶನ, ವಿಕಾಸ್ ಲಸ್ರಾದೊ (ರಂಗಾಯಣ) ನಾಟಕ ನಿರ್ದೇಶನ ಹಾಗೂ ರಾಹುಲ್ ಪಿಂಟೊ (ನಾಚ್ ಸೊಭಾಣ್) ನೃತ್ಯ ಸಂಯೋಜನೆ ನೀಡಿದ್ದಾರೆ. ಆಗಮಿಸಿದ ಎಲ್ಲಾ ಪ್ರೇಕ್ಷಕರಿಗೆ ಕುಸ್ವಾರ್ ನೀಡಲಾಗುವುದು.
ಲಾಕ್‍ಡೌನ್ ಘೋಷಣೆಯಾದ ಬಳಿಕ, ಎಲ್ಲಾ ತಿಂಗಳ ವೇದಿಕೆ ಕಾರ್ಯಕ್ರಮಗಳನ್ನು ದಾಯ್ಜಿವಲ್ರ್ಡ್ ವಾಹಿನಿಯಲ್ಲಿ ಪ್ರಸಾರಗೊಳಿಸಿ ಈ ಸರಣಿಯ ನಿರಂತರತೆಯನ್ನು ಉಳಿಸುವ ಪ್ರಯತ್ನ ಮಾಡಲಾಗಿತ್ತು. ಕೋವಿಡ್ 19 ನಿಯಮಾವಳಿಗಳನ್ನು ಪಾಲಿಸಿ ಈ ಕಾರ್ಯಕ್ರಮ ನಡೆಯಲಿರುವುದರಿಂದ, ಪ್ರೇಕ್ಷಕರು ಮಾಸ್ಕ್ ಧರಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಪ್ರಕಟನೆ ತಿಳಿಸಿದೆ.