ಪುತ್ತೂರು: ಐಐಟಿ ಖರಗಪುರ ನಡೆಸಿದ 2022ರ ಸಾಲಿನ ರಾಷ್ಟ್ರೀಯ ಅರ್ಹತಾ ಪರೀಕ್ಷೆ -ಗೇಟ್ (GATE) ನಲ್ಲಿ ಸಂತ ಫಿಲೋಮಿನಾ ಕಾಲೇಜಿನ ಭೌತಶಾಸ್ತ್ರ ಸ್ನಾತಕೋತ್ತರ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿನಿ ಸವಿತಾ ಎಂ. ಎಸ್. ರವರು ರಾಷ್ಟ್ರಮಟ್ಟದಲ್ಲಿ ಉತ್ತಮ ರ್ಯಾಂಕ್‍ನೊಂದಿಗೆ ಉತ್ತೀರ್ಣರಾಗಿದ್ದಾರೆ. ಈ ಮೂಲಕ ರಾಷ್ಟ್ರ ಹಾಗೂ ಅಂತರ ರಾಷ್ಟ್ರೀಯ ಮಟ್ಟದ ಸಂಶೋಧನಾ ಸಂಸ್ಥೆಗಳಲ್ಲಿ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಫೆಲೋಶಿಪ್‍ನೊಂದಿಗೆ ಸಂಶೋಧನಾರ್ಥಿಯಾಗಿ ಸೇರಲು ಅರ್ಹತೆ ಪಡೆದಿದ್ದಾರೆ. 

ಪ್ರತಿಭಾವಂತ ವಿದ್ಯಾರ್ಥಿನಿಯಾಗಿರುವ ಇವರು ಈಗಾಗಲೇ ಇಸ್ರೋ (ಐ.ಎ..ಎಸ್ ಬೆಂಗಳೂರು ಪ್ರಾಯೋಜಿತ), ಐ.ಐ.ಎಸ್.ಎಸ್ ತಿರುವನಂತಪುರಂ, ಐ.ಐ.ಎ ಬೆಂಗಳೂರು ಮೊದಲಾದೆಡೆ ಸಮ್ಮರ್ ರಿಸರ್ಚ್ ಫೆಲೋಶಿಪ್‍ಗೆ ಆಯ್ಕೆಗೊಂಡು ಕಿರು ಸಂಶೋಧನೆಗಳನ್ನು ಯಶಸ್ವಿಯಾಗಿ ಪೂರೈಸಿರುತ್ತಾರೆ.

ಇವರ ಈ ಸಾಧನೆಗೆ ಕಾಲೇಜಿನ ಸಂಚಾಲಕರಾದ ಅತೀ ವಂ. ಲಾರೆನ್ಸ್ ಮಸ್ಕರೇನ್ಹಸ್, ಪ್ರಾಂಶುಪಾಲರಾದ ವಂ.ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಹಾಗೂ ವಿಭಾಗದ ಸಂಯೋಜಕ ಡಾ.ಇ ದೀಪಕ್ ಡಿಸಿಲ್ವ ಅಭಿನಂದಿಸಿದ್ದಾರೆ. 

ಕಾಸರಗೋಡು ಜಿಲ್ಲೆಯ ದೇಲಂಪಾಡಿಯ ಶಿವಪ್ಪ ಗೌಡ ಮತ್ತು ಯಮುನಾ ದಂಪತಿಗಳ ಪುತ್ರಿಯಾಗಿರುವ ಇವರು, ಹೈಸ್ಕೂಲ್ ವಿದ್ಯಾಭ್ಯಾಸವನ್ನು ಸರಕಾರಿ ಪ್ರೌಢಶಾಲೆ ದೇಲಂಪಾಡಿ, ಪಿಯುಸಿಯನ್ನು ಸರಕಾರಿ ಪದವಿ ಪೂರ್ವಕಾಲೇಜು ಪುತ್ತೂರು ಹಾಗೂ ಬಿ.ಎಸ್ಸಿ. ಪದವಿಯನ್ನು ಸಂತ ಫಿಲೋಮಿನಾ ಕಾಲೇಜಿನಲ್ಲಿ ಉತ್ತಮ ಶ್ರೇಣಿಯಲ್ಲಿ ಪಡೆದಿರುತ್ತಾರೆ.