ಮಂಗಳೂರು: ಕೊಂಕಣಿ ಸಾಂಸ್ಕೃತಿಕ ಸಂಘ (ರಿ.) ಕಳೆದ 43 ವರ್ಷಗಳಿಂದ ಮಂಗಳೂರು ನಗರದಲ್ಲಿ ಕಾರ್ಯಾಚರಿಸುತ್ತಿದ್ದು ಕೊಂಕಣಿ ಕಲೆ, ಭಾಷೆ, ಸಂಸ್ಕೃತಿ ಹೀಗೆ ಹತ್ತು ಹಲವು ಧೈಯಗಳನ್ನು ಮುಂದಿಟ್ಟುಕೊಂಡು ಜನರ ಪ್ರೀತಿ ಮನ್ನಣೆಗೆ ಪಾತ್ರವಾಗಿದೆ. ದಿ| ಜಿ.ಜಿ.ವಾಸುದೇವ ಪ್ರಭು ಅವರಿಂದ ಬೆರಳೆಣಿಕೆ ಮಂದಿ ಒಡಗೂಡಿ ಸ್ಥಾಪನೆಗೊಂಡ ಈ ಸಂಸ್ಥೆಯಲ್ಲಿ ಪ್ರಸ್ತುತ 650ಕ್ಕೂ ಮಿಕ್ಕಿ ಸದಸ್ಯರಿದ್ದಾರೆ ಎನ್ನುವುದು ಒಂದು ಹೆಮ್ಮೆಯ ವಿಚಾರ.

ಪ್ರಸ್ತುತ ನಮ್ಮ ಕಾರ್ಯ ಕಛೇರಿ ಮಂಗಳೂರಿನ ಬಿ.ಇ.ಎಂ. ರಸ್ತೆಯಲ್ಲಿರುವ ಶ್ರೀ ಗಾಯತ್ರಿ ದೇವಸ್ಥಾನದಲ್ಲಿ ಇದ್ದು ದೇವಳದ ಆಡಳಿತ ವರ್ಗದ ಸಂಪೂರ್ಣ ಸಹಕಾರ ಸಿಗುತ್ತಿರುವುದು ನಮ್ಮ ಸಂತೋಷವನ್ನು ಇಮ್ಮಡಿಗೊಳಿಸಿದೆ. ವರ್ಷಕ್ಕೆ ಕನಿಷ್ಠ 8ರಿಂದ 10 ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು ಇದರಲ್ಲಿ ವಿದ್ಯಾರ್ಥಿಗಳಿಗೆ ಗೀತಾ ಕಂಠಪಾಠ ಸ್ಪರ್ಧೆ, ಆಶುಭಾಷಣ, ಛದ್ಮವೇಷ ಸ್ಪರ್ಧೆ, ಮಕರ ಸಂಕ್ರಾತಿ ಆಚರಣೆ, ಕೊಂಕಣಿ ನಾಟಕ, ಕೊಂಕಣಿ ಯಕ್ಷಗಾನ, ಕೃಷ್ಣ ಜನ್ಮಾಷ್ಟಮಿ ಸ್ಪರ್ಧೆಗಳು, ಭಜನಾ ಕಾರ್ಯಕ್ರಮ, ರಥಬೀದಿ ಶಾರದಮಹೋತ್ಸವದ ಸಂದರ್ಭದಲ್ಲಿ ಕೊಂಕಣಿ ಭಾಷೆಯಲ್ಲಿ ಸ್ತಬ್ಧ ಚಿತ್ರ, ಸದಸ್ಯರ ಧಾರ್ಮಿಕ ಪ್ರವಾಸ ಇತ್ಯಾದಿ ಮುಂಚೂಣಿಯಲ್ಲಿವೆ.

ಬಹುಜನರ ಅಪೇಕ್ಷೆ ಮೇರೆಗೆ “ಸೀತಾ ಕಲ್ಯಾಣ" ಎಂಬ ಕೊಂಕಣಿ ಕಾಲಮಿತಿ ಯಕ್ಷಗಾನವನ್ನು ಇದೇ ಬರುವ  ಮೇ 31, 2024ರಂದು ಶುಕ್ರವಾರ ಸಂಜೆ 5.30ಕ್ಕೆ ಸರಿಯಾಗಿ ಮಂಗಳೂರಿನ ಪುರಭವನದಲ್ಲಿ ಆಯೋಜಿಸಲಾಗಿದೆ.

ಈ ಯಕ್ಷಗಾನದ ತರಬೇತಿಯನ್ನು ಯಕ್ಷಕಲಾವಿದ ಗಣೇಶಪುರ ಗಿರೀಶ್ ನಾವಡ ಇವರು ನೀಡುತ್ತಿದ್ದು, ಸಾಹಿತ್ಯವನ್ನು ಶ್ರೀ ಎಂ. ಶಾಂತರಾಮ ಕುಡ್ವ, ಮೂಡಬಿದ್ರೆ ಇವರು ರಚಿಸಿರುತ್ತಾರೆ. ಪಾತ್ರವರ್ಗದಲ್ಲಿ ಗಣೇಶ್ ಪಾಲೆಚಾರ್ (ಕಟೀಲು ಮೇಳದ ಕಲಾವಿದ), ಪ್ರಕಾಶ್ ನಾಯಕ್ ನೀರ್ಚಾಲು (ಹನುಮಗಿರಿ ಮೇಳದ ನಿವೃತ್ತ ಕಲಾವಿದ), ಎಂ. ಶಾಂತಾರಾಮ ಕುಡ್ವಾ (ಯಕ್ಷಗಾನ ಕಲಾವಿದರು & ಲೇಖಕರು), ಸಂತೋಷ್ ಭಂಡಾರ್ಕಾರ್ (ಹವ್ಯಾಸಿ ಕಲಾವಿದ), ಪ್ರಸಾದ್ ಭಂಡಾರ್ಕಾರ್ (ಹವ್ಯಾಸಿ ಕಲಾವಿದ), ಮಣೇಲ್ ಗಜಾನನ ಶೆಣೈ, ಕೇಶವ ಕಾಮತ್, ಕೃಷ್ಣ ಕಾಮತ್, ಪ್ರಭಾ ಭಟ್, ಶ್ವೇತಾ ಕಾಮತ್, ಅನುರಾಗ ನಾಯಕ್, ರಂಜಿತಾ ಶೆಣೈ, ಸದಾಶಿವ ಕಾಮತ್, ಅರ್ನವ್ ಪ್ರಭು ಇವರು ಭಾಗವಹಿಸುತ್ತಿದ್ದಾರೆ.

ಮಣೇಲ್ ಗಜಾನನ ಶೆಣೈ ಇವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮವು ನಡೆಯಲಿದ್ದು ಮುಖ್ಯ ಅತಿಥಿಯಾಗಿ ಸಿ.ಡಿ. ಕಾಮತ್ (ನಿವೃತ್ತ ನಿರ್ದೇಶಕರು ಟಾಟಾ ಗ್ರೂಪ್), ನಂದಗೋಪಾಲ ಶೆಣೈ (ಅಧ್ಯಕ್ಷರು ವಿಶ್ವ ಕೊಂಕಣಿ ಕೇಂದ್ರ, ಮಂಗಳೂರು & ಮಾಲಕರು-ದೇವಗಿರಿ ಚಾಹ), ಪ್ರಶಾಂತ್ ಶೇಟ್ (ಮಾಲಕರು ಎಸ್.ಎಲ್. ಶೇಟ್ ಜುವೆಲ್ಲರ್ಸ್ & ಡೈಮಂಡ್ಸ್, ಕೆ.ಎಸ್. ರಾವ್ ರಸ್ತೆ ಮಂಗಳೂರು), ನರಸಿಂಹ ಭಂಡಾರ್ಕಾರ್ (ಗೌರವಾಧ್ಯಕ್ಷರು-ಸಾಧನಾ ಬಳಗ, ಮಂಗಳೂರು) ಇವರೊಂದಿಗೆ ವೇದಿಕೆಯಲ್ಲಿ ಉಪಸ್ಥಿತರಿರುತ್ತಾರೆ.

ಈ ಪ್ರಸಂಗದಲ್ಲಿ ಪಾತ್ರವಹಿಸುವ ಕಟೀಲು ಮೇಳದ ಕಲಾವಿದರಾದ ಗಣೇಶ್ ಪಾಲೆಚಾರ್ ಅವರನ್ನು ಯಕ್ಷಗಾನ ರಂಗದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ "ಕೊಂಕಣಿ ಸಾಂಸ್ಕೃತಿಕ ರಾಯಭಾರಿ" ಎಂಬ ಬಿರುದನ್ನು ನೀಡಿ ಸನ್ಮಾನಿಸಲಾಗುವುದು.

ಮಣೇಲ್ ಗಜಾನನ ಶೆಣೈ, ಅಧ್ಯಕ್ಷರು ಕೊಂಕಣಿ ಸಾಂಸ್ಕೃತಿಕ ಸಂಘ, ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕೃಷ್ಣ ಕಾಮತ್, ಕಾರ್ಯದರ್ಶಿ, ಕೊಂಕಣಿ ಸಾಂಸ್ಕೃತಿಕ ಸಂಘ, ರತ್ನಾಕರ ಕುಡ್ವಾ ಎಂ., ಖಜಾಂಚಿ, ಕೊಂಕಣಿ ಸಾಂಸ್ಕೃತಿಕ ಸಂಘ, ಸಂತೋಷ್ ಶೆಣೈ, ಮಾಜಿ ಅಧ್ಯಕ್ಷರು, ಕೊಂಕಣಿ ಸಾಂಸ್ಕೃತಿಕ ಸಂಘ, ಎಂ. ಶಾಂತಾರಾಮ ಕುಡ್ವಾ, ಮೂಡಬಿದ್ರೆ, ಯಕ್ಷಗಾನ ಕಲಾವಿದರು & ಲೇಖಕರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು