ಮಂಗಳೂರು ಕೇಂದ್ರೀಯ ಮಾರುಕಟ್ಟೆಗೆ ಶತಮಾನಗಳ ಇತಿಹಾಸವಿದ್ದರೆ ಈಗ ಉರುಳಿದ ಮಾರುಕಟ್ಟೆ ಕಟ್ಟಡಕ್ಕೆ 65 ವರುಷಗಳ ಇತಿಹಾಸವಿದೆ.

ಮಂಗಳೂರು ಮಹಾನಗರ ಪಾಲಿಕೆಯು ಈ ಕಟ್ಟಡವನ್ನು ಉರುಳಿಸಿ ಆಧುನಿಕ ಮಾರುಕಟ್ಟೆ ನಿರ್ಮಾಣಕ್ಕೆ ಕೈ ಹಾಕಿದೆ. ಅದು ಇನ್ನೇನು ಕಾರ್ಯಗತ ಆಗುವ ದಿನ ಹತ್ತಿರದಲ್ಲಿದೆ.

2021ರಲ್ಲಿ ಮಹಾನಗರ ಪಾಲಿಕೆಯು ಕೂಡಲೆ ಅಂಗಡಿ ಮುಂಗಟ್ಟು ಕಾಲಿ ಮಾಡುವಂತೆ ವ್ಯಾಪಾರಿಗಳಿಗೆ ನೋಟೀಸು ನೀಡಿತ್ತು. ಎಲ್ಲ ಮಾಲುಗಳೊಡನೆ ಕೂಡಲೆ ಬಿಟ್ಟು ಹೋಗಲಾಗದು ಎಂದು ವ್ಯಾಪಾರಿಗಳು ಕೋರ್ಟು ಮೆಟ್ಟಿಲು ಏರಿದ್ದರು.

2021ರ ಏಪ್ರಿಲ್ 1ರಂದು‌ ಉಚ್ಚ ನ್ಯಾಯಾಲಯವು ಕೂಡಲೆ ಉರುಳಿಸುವುದಕ್ಕೆ ತಡೆ ನೀಡಿತ್ತು. ಅದಾಗಲೇ ಪಾಲಿಕೆ ಪ್ರವೇಶ ದ್ವಾರ ಇತ್ಯಾದಿ ಕೆಡವಿತ್ತು.

ಅನಂತರದ ಮಳೆಗಾಲದಲ್ಲಿ ಬಯ್ಕಂಪಾಡಿಯ ಎಪಿಎಂಸಿ ಯಾರ್ಡಿಗೆ ಹಣ್ಣು ತರಕಾರಿ ಇತ್ಯಾದಿ ವ್ಯಾಪಾರಿಗಳನ್ನು ದೂಡಿ ಪಾಲಿಕೆಯು ವಿಘ್ನ ಸಂತೋಷ ಅನುಭವಿಸಿತ್ತು.

ಕೇಂದ್ರೀಯ ಕಟ್ಟಡ ಅರೆಬರೆಯಾದುದರಿಂದ‌ ವ್ಯಾಪಾರಿಗಳು ಅಲ್ಲಿಂದ ‌ಬೇಗ ತೆರವು ಮಾಡಿದರು. ಕೆಲವರು ದಲ್ಲಾಳಿಗಳು ಬೀಗ ಇರುವ ಅಂಗಡಿಗಳಲ್ಲಿ ಕೆಲವರ ಸಾಮಾನುಗಳನ್ನು ತಾತ್ಕಾಲಿಕವಾಗಿ ಇಡಲು ಕೊಟ್ಟು‌ ಪುಡಿ ಕಾಸು ಮಾಡಿಕೊಂಡರು ಎನ್ನಲಾಗಿದೆ.

ಈಗ ಪಾಲಿಕೆ ವಿರುದ್ಧ ಅಲ್ಲಿ ನಿಲ್ಲಲು ಯಾವ ವ್ಯಾಪಾರಿಯೂ ಇಲ್ಲ. ಅಧಿಕೃತವಾಗಿ ಒಂದು ವರುಷದ ಬಳಿಕ 2022ರ ಏಪ್ರಿಲ್ 15ರಂದು ಸೆಂಟ್ರಲ್ ಮಾರುಕಟ್ಟೆಯ ಅಳಿದುಳಿದ ಕಟ್ಟಡ ಉರುಳಿಸುವ ಕೆಲಸ ಆರಂಭವಾಗಿದೆ.

ಮಂಗಳೂರು ಮಹಾನಗರ ಪಾಲಿಕೆಯು ಸ್ಮಾರ್ಟ್ ಸಿಟಿ ಮಾದರಿಯ ತುಂಡು ಕಾಮಗಾರಿ, ಆಮೆ ನಡಿಗೆ ಬಿಟ್ಟರೆ 2023ರ ಏಪ್ರಿಲ್‌ನಲ್ಲಿ ಹೊಸ ಮಾರುಕಟ್ಟೆ ತೆರೆದುಕೊಳ್ಳಬಹುದು.