ಮಂಗಳೂರುಕೊರೋನಾ ನಿಯಂತ್ರಿಸಲು ದಕ್ಷಿಣ ಕನ್ನಡ ಜಿಲ್ಲೆಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಮಾಜಿ ಶಾಸಕ ಐವನ್ ಡಿಸೋಜಾ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕರೋನಾ ವಾರಿಯರ್ಸ್ ನಿಯೋಗ ಮಂಗಳವಾರ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಸರಕಾರಕ್ಕೆ ಮನವಿ ಸಲ್ಲಿಸಿತು.

ಮುಖ್ಯಮಂತ್ರಿಗೆ ಬರೆದಿರುವ ಪತ್ರದಲ್ಲಿ, “ರಾಜ್ಯದಲ್ಲಿ ಕೋವಿಡ್-19 ನಿಯಂತ್ರಣ ಮಾಡಲು ರಾಜ್ಯ ಸರಕಾರ ಕೈಗೊಂಡಿರುವ ಕಾರ್ಯಕ್ರಮಗಳು ಒಟ್ಟಾರೆ ವಿಫಲವಾಗಿದ್ದು, ರಾಜ್ಯದಲ್ಲಿರುವ ಕಾರ್ಮಿಕರು, ದಿನಗೂಲಿ ನೌಕರರು ಮತ್ತು ವ್ಯಾಪಾರಸ್ಥರ ಪರಿಸ್ಥಿತಿ ತೀರ ದುಸ್ಥಿತಿಯಲ್ಲಿದ್ದು, ವಿಶೇಷ ಪ್ಯಾಕೇಜುಗಳನ್ನು ಘೋಷಿಸಬೇಕು. 2ನೇ ಮತ್ತು 3ನೇ ಹಂತದ ಕೋವಿಡ್ ಹರಡುವುದನ್ನು ನಿಯಂತ್ರಿಸಲು, ದ.ಕ. ಜಿಲ್ಲೆಯು ಹೆಚ್ಚುವರಿ ಅನುದಾನ ಬಿಡುಗಡೆ ಮಾಡಬೇಕು. ಜಿಲ್ಲೆಯಲ್ಲಿ ಐಸಿಯು ಮತ್ತು ಆಕ್ಸಿಜನ್ ಬೆಡ್‍ಗಳ ಕೊರತೆಯಿದ್ದು, ಇದನ್ನು ನೀಗಿಸಲು ಹೆಚ್ಚುವರಿ ಅನುದಾನ ಬಿಡುಗಡೆ ಮಾಡಬೇಕು” ಎಂದು ಆಗ್ರಹಿಸಲಾಗಿದೆ.

“ಕೋವಿಡಿನಿಂದ ಮೃತರಾದ ಮೃತದೇಹವನ್ನು ಸುಡುವುದಕ್ಕೆ ವಿಧಿಸುತ್ತಿರುವ ಶುಲ್ಕವನ್ನು ಸಂಪೂರ್ಣವಾಗಿ  ಮಾಫಿ ಮಾಡಬೇಕು. ಲಸಿಕೆಯು ಬೇಕಾದಷ್ಟು ಪ್ರಮಾಣದಲ್ಲಿ ಲಭ್ಯವಿಲ್ಲದಿರುವುದರಿಂದ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ದೊರಕಿಸಿಕೊಡಬೇಕು. ಕೋವಿಡ್ 2ನೇ ಮತ್ತು 3ನೇ ಹಂತದಲ್ಲಿ ಸಾವುಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಇದನ್ನು “ರಾಷ್ಟ್ರೀಯ ಆಪತ್ತು” ಎಂದು ಘೋಷಿಸಬೇಕು.” ಎಂದು ಒತ್ತಾಯಿಸಲಾಗಿದೆ.

ಆಸ್ಪತ್ರೆಗಳಲ್ಲಿ ಕೃತಕ ಆಮ್ಲಜನಕದ ಕೊರತೆಯಿದ್ದು, ಈ ಕೊರತೆ ನೀಗಿಸಲು ಜಿಲ್ಲೆಯಲ್ಲಿ ಕೈಗೊಂಡ ಕ್ರಮದ ಬಗ್ಗೆ ಸಾರ್ವಜನಿಕ ಪ್ರಕಟನೆ ನೀಡುವುದು, ಸ್ಮಾರ್ಟ್ ಸಿಟಿ ವತಿಯಿಂದ 35 ಬೆಡ್‍ಗಳ ಐಸಿಯು ಹಾಸಿಗೆವುಳ್ಳ ಆಸ್ಪತ್ರೆಯನ್ನು ಆವರಣದಲ್ಲಿ ನಿರ್ಮಿಸುವ ಕಾರ್ಯ ತ್ವರಿತಗೊಳಿಸುವುದು, ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಜಿಲ್ಲೆಯಲ್ಲಿರುವ ಒಟ್ಟು ಆಕ್ಸಿಜನ್ ಬೆಡ್, ಸಾಮಾನ್ಯ ಬೆಡ್, ಐಸಿಯು ಬೆಡ್ ಗಳ ವಿವರಣೆ ಪ್ರತಿದಿನ ಪ್ರಕಟ ನೀಡುವಂತೆ ಆರೋಗ್ಯ ಇಲಾಖೆಗೆ ಸೂಚಿಸುವುದು ಹಾಗೂ ಕೋವಿಡ್‍ಗಳ ಲಕ್ಷಣಗಳುಳ್ಳ ವ್ಯಕ್ತಿಗಳಿಗೆ ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ನಡೆಸಿ, ರೋಗ ಪತ್ತೆಹಚ್ಚಲು ಕ್ರಮ ಕೈಗೊಳ್ಳಬೇಕೆಂದು ಇದೇ ವೇಳೆ ಜಲ್ಲಾಧಿಕಾರಿಗೆ ಸಲಹೆ ನೀಡಲಾಯಿತು.

ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಪಿ.ವಿ ಮೋಹನ್, ಲುಕ್ಮನ್ ಬಂಟ್ವಾಳ್, ಶಾಹುಲ್ ಹಮೀದ್, ಶಶಿಧರ್ ಹೆಗ್ಡೆ, ಮಲಾರ್ ಮೋನು, ಪ್ರಕಾಶ್ ಸಾಲ್ಯಾನ್, ಜೆಸಿಂತಾ ಆಲ್ಫ್ರೆಡ್, ಎ.ಸಿ ವಿನಾಯರಾಜ್, ಮುಹಮ್ಮದ್ ಕುಂತ್ತಬೈಲ್, ಕುಮಾರಿ ಅಪ್ಪಿ, ನಝೀರ್ ಬಜಾಲ್, ಆಶೀತ್ ಪಿರೇರಾ, ಸಿ.ಎಂ ಮುಸ್ತಫಾ, ಸವಾದ್ ಗೂನಡ್ಕ, ಸದಾಶಿವ ಅಮೀನ್,  ಯೂಸುಫ್ ಉಚ್ಚಿಲ್, ಲಿಯಾಕತ್ ಅಲಿ, ನಮಿತಾ ಡಿ ರಾವ್, ದುರ್ಗಾ ಪ್ರಸಾದ್, ದಿನೇಶ್ ರಾವ್, ಮಂಜುಳಾ ನಾಯ್ಕ್,  ಮಹೇಶ್ ಕೋಡಿಕಲ್ ಉಪಸ್ಥಿತರಿದ್ದರು.