ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಗಣಕವಿಜ್ಞಾನ ವಿಭಾಗವು ನಡೆಸುತ್ತಿರುವ ಪಿನ್ಯಾಕಲ್‌ ಐಟಿ ಕ್ಲಬ್‌ನ ವತಿಯಿಂದ 2023-24ನೇ ಶೈಕ್ಷಣಿಕ ವರ್ಷದಲ್ಲಿ ಆಯೋಜಿಸಲ್ಪಡುವ ಕಾರ್ಯಕ್ರಮಗಳಿಗೆ ಇಂದು ಕಾಲೇಜಿನ ಬೆಳ್ಳಿ ಹಬ್ಬ ಸಭಾಭವನದಲ್ಲಿ ಕಾರ್ಯಕ್ರಮದ ಅಧ್ಯಕ್ಷರಾದ ಕಾಲೇಜಿನ ಪ್ರಾಚಾರ್ಯ ವಂ| ಡಾ| ಆಂಟೊನಿ ಪ್ರಕಾಶ್‌ ಮೊಂತೆರೋರವರು ದೀಪ ಬೆಳಗಿಸುವುದರ ಮೂಲಕ ವಿಧ್ಯುಕ್ತ ಚಾಲನೆ ನೀಡಿದರು. ನಂತದ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು “ಇಂದಿನ ಡಿಜಿಟಲ್‌ ಯುಗದಲ್ಲಿ ಯುವಜನರು ಬೇಗನೆ ಭಾವೋದ್ವೇಗಕ್ಕೆ ಒಳಗಾಗುತ್ತಾರೆ.

ಇದರಿಂದಾಗುವ ಅನಾಹುತಗಳನ್ನು ತಡೆಗಟ್ಟುವ ಸಲುವಾಗಿ ಮಾನಸಿಕ ಪ್ರಥಮ ಚಿಕಿತ್ಸೆ ನೀಡಲಾಗುತ್ತದೆ. ಮನಸ್ಸಿನಲ್ಲಿ ಋಣಾತ್ಮಕ ಭಾವನೆಗಳನ್ನು ಬೆಳೆಸದೆ ಧನಾತ್ಮಕವಾಗಿ ಚಿಂತಿಸಿದಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಪಿನ್ಯಾಕಲ್‌ ಐಟಿ ಕ್ಲಬ್‌ನ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದಲ್ಲಿ ನಾಯಕತ್ವಗುಣ, ಕ್ರಿಯಾಶೀಲತೆ ಹೆಚ್ಚುವುದು ನಿಸ್ಸಂಶಯ. ವಿದ್ಯಾರ್ಥಿಗಳನ್ನು ಕ್ರಿಯಾಶೀಲರನ್ನಾಗಿಸುವ ಹತ್ತು ಹಲವು ಕಾರ್ಯಕ್ರಮಗಳು ಪಿನ್ಯಾಕಲ್‌ ಐಟಿ ಕ್ಲಬ್‌ನ ಮುಖಾಂತರ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಆಯೋಜಿಸಲ್ಪಡಲಿ“ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಲೇಜಿನ ಕ್ಯಾಂಪಸ್‌ ನಿರ್ದೇಶಕರಾದ ವಂ| ಸ್ಟ್ಯಾನಿ ಪಿಂಟೋರವರು “ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನಾವು ಹಂಚುವ ಒಂದು ಪುಟ್ಟ ಮಾಹಿತಿಯು ಕ್ಷಣಮಾತ್ರದಲ್ಲಿ ವೈರಲ್‌ ಆಗಬಹುದು. ಆದ್ದರಿಂದ ನಾವು ಆದಷ್ಟು ಜಾಗರೂಕರಾಗಿರಬೇಕು. ವಿದ್ಯಾರ್ಥಿಗಳೆಂದರೆ ಉತ್ಸಾಹದ ಚಿಲುಮೆಗಳು.

ಅವರಿಂದ ಪಿನ್ಯಾಕಲ್‌ ಐಟಿ ಕ್ಲಬ್‌ನ ಮುಖಾಂತರ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಒಳ್ಳೆಯ ಕಾರ್ಯಕ್ರಮಗಳು ಮೂಡಿ ಬರಲಿ ಎಂದು” ಶುಭಹಾರೈಸಿದರು.

ರೊವೀನಾ ಮತ್ತು ಬಳಗ ಪ್ರಾರ್ಥಿಸಿದರು. ಪಿನ್ಯಾಕಲ್‌ ಐಟಿಕ್ಲಬ್‌ ನ ಅಧ್ಯಕ್ಷ ಅಭಿ಼ಷೇಕ್‌ ಕಾಮತ್‌ ಸ್ವಾಗತಿಸಿದರು. ಪಿನ್ಯಾಕಲ್‌ ಐಟಿ ಕ್ಲಬ್‌ನ ಸಂಯೋಜಕಿ ರಾಜೇಶ್ವರಿ ಎಂ ಐಟಿ ಕ್ಲಬ್‌ ಮುಖಾಂತರ ಆಯೋಜಿಸಲ್ಪಡುವ ಸಂಭಾವ್ಯ ಕಾರ್ಯಕ್ರಮಗಳ ಮಾಹಿತಿ ನೀಡಿದರು. ಐಟಿ ಕ್ಲಬ್‌ನ ಉಪಾಧ್ಯಕ್ಷರಾದ ಆದಿತ್ಯ ದಿನೇಶ್‌ ವಂದನಾರ್ಪಣೆ ಮಾಡಿದರು. 

ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ವಿನಯಚಂದ್ರ ಹಾಗೂ ಪಿನ್ಯಾಕಲ್‌ ಐಟಿ ಕ್ಲಬ್‌ನ ಕಾರ್ಯದರ್ಶಿಯಾದ ಫರ್ವೇಜ್‌ ಅಕ್ತರ್‌ ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಥಮ ಬಿಸಿಎ ವಿದ್ಯಾರ್ಥಿಗಳಿಗೆ ಗಣಕ ವಿಜ್ಞಾನ ವಿಭಾಗದ ವತಿಯಿಂದ ನಡೆಸಿದ ಪ್ರವೇಶ ಮಟ್ಟದ ಸಾಮರ್ಥ್ಯ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು.