ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿಯವರ ಕನಸಿನ ಯೋಜನೆ "ಯಕ್ಷಧ್ರುವ ಪಟ್ಲಾಶ್ರಯ  ಯೋಜನೆಯಲ್ಲಿ 26ನೇ ಮನೆಯ ಹಸ್ತಾಂತರ  ಫಲಾನುಭವಿಯಾದ ಪರಿಶಿಷ್ಟ ವರ್ಗಕ್ಕೆ ಸೇರಿದ ವಿಶಿಷ್ಟ ಚೇತನ ಯಕ್ಷಗಾನ ಕಲಾವಿದ ಮನೋಜ್ ಕುಮಾರ್ ವೇಣೂರು ಇವರಿಗೆ  ಪಟ್ಲ ಸತೀಶ್ ಶೆಟ್ಟಿಯವರ ನೇತೃತ್ವದಲ್ಲಿ ಟ್ರಸ್ಟಿನ ಬೆಳ್ತಂಗಡಿ ಘಟಕದ ಪದಾಧಿಕಾರಿಗಳ ಸಮಕ್ಷದಲ್ಲಿ ನೆರವೇರಿತು.

ಈ ಮನೆಯ ನಿರ್ಮಾಣದ ವೆಚ್ಚವನ್ನು  ಉದ್ಯಮಿ, ಯಕ್ಷಧ್ರುವ ಪಟ್ಲ ಟ್ರಸ್ಟಿನ ಮಹಾದಾನಿ ಹಾಗೂ ಪ್ರಧಾನ ಸಂಚಾಲಕರಾದ ಶಶಿ ಕೇಟರರ್ಸ್ ಮತ್ತು ಕಾಶೀ ಪ್ಯಾಲೇಸ್  ಉಜಿರೆಯ ಮಾಲಕ  ಶಶಿಧರ ಶೆಟ್ಟಿ, ಬರೋಡ ಇವರು ಕೊಡುಗೆಯಾಗಿ ನೀಡಿದರು. 

ಕಲಾವಿದ ಮನೋಜ್ ಕುಮಾರ್   ಒಂದು ಕಾಲನ್ನು ಕಳೆದುಕೊಂಡರೂ ಎದೆಗುಂದದೆ ಕೃತಕ ಕಾಲನ್ನು ಜೋಡಿಸಿ ಯಕ್ಷಗಾನ ಕಲೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ವಿಶೇಷ. ಯಕ್ಷಗಾನ ಕಲೆಯ ಮೇಲಿರುವ ಪ್ರೀತಿ, ಅಭಿಮಾನ, ನಿಷ್ಠೆಯನ್ನು ದಾನಿಗಳಾದ ಶ್ರೀ ಶಶಿಧರ ಶೆಟ್ಟಿ, , ಪಟ್ಲ ಟ್ರಸ್ಟಿನ ಸ್ಥಾಪಕಾಧ್ಯಕ್ಷರಾದ ಶ್ರೀ ಸತೀಶ್ ಶೆಟ್ಟಿ, ಟ್ರಸ್ಟಿನ ಎಲ್ಲಾ ಪದಾಧಿಕಾರಿಗಳು ಮುಕ್ತ ಕಂಠದಿಂದ ಪ್ರಶಂಸಿದ್ದಾರೆ. ಪಟ್ಲಾಶ್ರಯ ಯೋಜನೆಯ 12 ಮನೆಗಳು ನಿರ್ಮಾಣದ ಕೊನೆಯ ಹಂತದಲ್ಲಿದ್ದು 100 ಮನೆಗಳ ನಿರ್ಮಾಣದ ಯೋಜನೆ ಶೀಘ್ರದಲ್ಲಿ  ಸಾಕಾರಗೊಳ್ಳಲಿದೆ ಎಂದು ಪಟ್ಲ ಸತೀಶ್ ಶೆಟ್ಟಿ ತಿಳಿಸಿದ್ದಾರೆ.