ಮಂಗಳೂರು, ಏಪ್ರಿಲ್ 2: ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು, ಫಾ. ಮು. ಕಾಲೇಜ್ ಆಫ್ ಅಲೈಡ್ ಸಯನ್ಸಸ್, ಫಾ. ಮು. ನರ್ಸಿಂಗ್ ಕಾಲೇಜು, ಫಾ. ಮು. ಮಾತು ಮತ್ತು ಕೇಳುವಿಕೆ ಕಾಲೇಜು, ಫಾದರ್ ಮುಲ್ಲರ್ ಸ್ಕೂಲ್ ಆಫ್ ನರ್ಸಿಂಗ್ ಇವುಗಳ ಪದವಿ ಪ್ರದಾನ ಸಮಾರಂಭವು ಏಪ್ರಿಲ್ 2ರಂದು ಫಾದರ್ ಮುಲ್ಲರ್ ಕನ್ವೆನ್ಶನ್ ಸೆಂಟರ್‌ನಲ್ಲಿ ಅದ್ಭುತವಾಗಿ ನಡೆಯಿತು.

142 ವರುಷಗಳ ಹಿಂದೆ ಆರಂಭವಾದ ಎಫ್.ಎಂ.ಸಿ.ಐ. ನಿರ್ದೇಶಕರಾಗಿ ರೆವರೆಂಡ್ ಫಾದರ್ ರಿಚರ್ಡ್‌ ಅಲೋಯಿಸಸ್ ಕುವೆಲೊ ಮಾರ್ಗದರ್ಶನದಲ್ಲಿ ಸಂಸ್ಥೆಯು ಇಂದು ದೇಶದಲ್ಲೇ ಪ್ರತಿಷ್ಠಿತ ಆಸ್ಪತ್ರೆ ಮತ್ತು ವಿದ್ಯಾ ಸಂಸ್ಥೆಯಾಗಿ ಬೆಳೆದಿದೆ.

ಅತಿ ವಂದನೀಯ ಮಂಗಳೂರು ಧರ್ಮ ಪ್ರಾಂತ್ಯದ ಬಿಶಪ್ ರೆವರೆಂಡ್ ಡಾ. ಪೀಟರ್ ಪಾವುಲ್ ಸಲ್ದಾನ್ಹಾ, ವಿಶಾಖಪಟ್ಟಣದ ಜಿಐಟಿಎಎಂ ವೈದ್ಯಕೀಯ ವಿಜ್ಞಾನಿಗಳ ವಿಶ್ವವಿದ್ಯಾನಿಲಯದ ಉಪಕುಲಪತಿ ಮತ್ತು ಭುಬನೇಶ್ವರ ಎಐಐಎಂಎಸ್‌ನ ಮಾಜೀ ನಿರ್ದೇಶಕರಾದ ಡಾ. ಗೀತಾಂಜಲಿ ಬತ್ಮನಬಾನೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕರ್ನಾಟಕ ಉಚ್ಚ ನ್ಯಾಯಾಲಯದ ಮಾಜೀ ನ್ಯಾಯಾಧೀಶ ಜಾನ್ ಮೈಕೆಲ್ ಡಿಕುನಾ ಅವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. 

ನಾನಾ ವೈದ್ಯಕೀಯ ಮತ್ತು ಸಹ ವೈದ್ಯಕೀಯ ವಿಭಾಗದಲ್ಲಿ ಒಟ್ಟು 615 ವಿದ್ಯಾರ್ಥಿಗಳು ಪದವಿಯನ್ನು ಈ ಸಂದರ್ಭದಲ್ಲಿ ಸ್ವೀಕರಿಸಿದರು. ಸಮಾರಂಭದಲ್ಲಿ ಹೊಸ ಪದವೀದರರ ಹೆತ್ತವರೂ ಸಾಕಷ್ಟು ಜನ ಸೇರಿದ್ದರು. ಅವರನ್ನು ನೀವು ನಮ್ಮ ರಾಯಭಾರಿಗಳು ಎಂದು ಕೊಯಿಲೋ ಸ್ವಾಗತಿಸಿದರು. ಪದವಿ ಪಡೆದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ನೀವು ಇಲ್ಲಿಂದ ಪಡೆದ ಶಿಕ್ಷಣ ಮತ್ತು ಸ್ಪೂರ್ತಿ ಲೋಕಕ್ಕೆ ಸಲ್ಲಬೇಕು ಎಂದರು.

ಅಗಸ್ಟಸ್ ಮುಲ್ಲರ್‌ರಿಂದ ಸೇವಾ ಗುರಿಯೊಂದಿಗೆ 1880ರಲ್ಲಿ ಹುಟ್ಟಿದ ಫಾದರ್ ಮುಲ್ಲರ್ ಸಂಸ್ಥೆಯು ಈಗ ದೇಶದ ಹೆಮ್ಮೆಯ ಸಂಸ್ಥೆಯಾಗಿದೆ. ಬಡವರ ಆಸ್ಪತ್ರೆ ಮತ್ತು ಜ್ಞಾನ ದಾಹಿಗಳ ದೇಗುಲವಾಗಿದೆ ಫಾದರ್ ಮುಲ್ಲರ್ ಆವರಣ ಎಂದೂ ರೆವರೆಂಡ್ ಫಾದರ್ ರಿಚರ್ಡ್ ಅಲೋಸಿಯಸ್ ಕೊಯಿಲೋ ತಿಳಿಸಿದರು.