ವರದಿ ರಾಯಿ ರಾಜ ಕುಮಾರ
ಕರ್ನಾಟಕ ಸರಕಾರದ ತಾಂತ್ರಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಗೊಳಪಡುವ ರಾಜ್ಯದ ಎಲ್ಲಾ ಪಾಲಿಟೆಕ್ನಿಕ್ ಗಳ ಎನ್ಎಸ್ಎಸ್ ಘಟಕಗಳ ಕಾರ್ಯಕ್ರಮ ಅಧಿಕಾರಿಗಳಿಗೆ ಹಾಗೂ ಕಾಲೇಜಿನ ಪ್ರಾಚಾರ್ಯರುಗಳಿಗೆ ಒಂದು ದಿನದ ಪುನರ್ ಮನನ ಕಾರ್ಯಗಾರ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯಿತು. ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ವಿಶೇಷ ಸಾಧನೆ ಮಾಡಿದ ಕಾರ್ಯಕ್ರಮಾಧಿಕಾರಿ ಮತ್ತು ಸ್ವಯಂಸೇವಕರುಗಳಿಗೆ ಇಲಾಖಾ ಹಂತದ ರಾಜ್ಯ ಪ್ರಶಸ್ತಿ ನೀಡಲಾಯಿತು. ಈ ಪ್ರಶಸ್ತಿಯನ್ನು ಎಸ್ ಎನ್ ಮೂಡಬಿದ್ರೆ ಪಾಲಿಟೆಕ್ನಿಕ್ ನ ಎನ್ಎಸ್ಎಸ್ ಘಟಕ -2 ರ ಕಾರ್ಯಕ್ರಮ ಅಧಿಕಾರಿ ಗೋಪಾಲಕೃಷ್ಣ ಕೆ. ಎಸ್. ಮತ್ತು ವಿದ್ಯಾರ್ಥಿಗಳಾದ ವಿನೋದ್ ಹಾಗು ಚಿತ್ರಶ್ರೀ ಇವರು ಕ್ರಮವಾಗಿ ರಾಜ್ಯ ಮಟ್ಟದ ಉತ್ತಮ ಕಾರ್ಯಕ್ರಮಾಧಿಕಾರಿ, ಉತ್ತಮ ಸ್ವಯಂ ಸೇವಕ ಮತ್ತು ಉತ್ತಮ ಸ್ವಯಂ ಸೇವಕಿ ಪ್ರಶಸ್ತಿಯನ್ನು ಪಡೆದುಕೊಂಡರು. ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ಶ್ರೀಮತಿ ಮಂಜುಶ್ರೀ ಎನ್., ತಾಂತ್ರಿಕ ಶಿಕ್ಷಣ ಇಲಾಖೆಯ ಆಡಳಿತಾಧಿಕಾರಿ ರಜನಿಕಾಂತ್ ಕೆಎಎಸ್, ರಾಜ್ಯ ಎನ್ ಎಸ್ ಎಸ್ ಅಧಿಕಾರಿಯಾದ ಡಾ.ಪ್ರತಾಪ್ ಲಿಂಗಯ್ಯ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಎನ್ಎಸ್ಎಸ್ ಸಂಯೋಜನಾಧಿಕಾರಿ ಡಾ.ಗುರುಪ್ರಸಾದ್ ಹೂಗಾರ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಕಳೆದ ಹತ್ತು ವರ್ಷಗಳಲ್ಲಿ ಎಸ್.ಎನ್.ಎಂ.ಪಾಲಿಟೆಕ್ನಿಕ್ ನ ಎನ್ಎಸ್ಎಸ್ ಘಟಕಕ್ಕೆ 9 ರಾಜ್ಯ ಪ್ರಶಸ್ತಿಗಳು ಬಂದಿರುವುದು ಶ್ಲಾಘನೀಯ.
ಕಾಲೇಜಿನ ಎನ್ಎಸ್ಎಸ್ ಘಟಕ ಒಂದರ ಕಾರ್ಯಕ್ರಮಾಧಿಕಾರಿ ರಾಮ್ ಪ್ರಸಾದ್ ಎಮ್, ಸ್ವಯಂಸೇವಕರುಗಳಾದ ಪ್ರಮೋದ್, ಶುಭಶ್ರೀ, ಪ್ರಖ್ಯಾತ್, ಪ್ರೀತಿ, ಧನುಶ್ರೀ ಈ ಮೊದಲು ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದರು.
ಈ ಎಲ್ಲರಿಗೂ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಪ್ರಾಂಶುಪಾಲರು, ಅಧ್ಯಾಪಕವೃಂದ, ವಿದ್ಯಾರ್ಥಿಗಳು ಹಾಗೂ ಹಿರಿಯ ವಿದ್ಯಾರ್ಥಿಗಳು ಅಭಿನಂದನೆಯನ್ನು ತಿಳಿಸಿದ್ದಾರೆ.