ಮಂಗಳೂರು, ಜು 04: ಮಂಗಳೂರಿನ ಸ್ವಾಭಾವಿಕ ಮಳೆ ಹರಿವನ್ನು ಬಿಜೆಪಿಯ ಆಡಳಿತವು ಅಸ್ವಾಭಾವಿಕ ಆಗಿಸಿದೆ. ಬಿಜೆಪಿ ಆಡಳಿತವೂ ಅಸ್ವಾಭಾವಿಕವಾದುದು ಎಂದು ಮಾಜೀ ಶಾಸಕ ಜೆ. ಆರ್. ಲೋಬೋ ಹೇಳಿದರು.

ಆಳುವವರು ಮಳೆಗಾಲ ಆರಂಭವಾಗುವಾಗ ಅದನ್ನು ಎದುರಿಸಲು ಸಿದ್ಧವಾಗಿರಬೇಕು. ಆದರೆ ಬಿಜೆಪಿಯವರು ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಕಾಂಪ್ಯಾಕ್ಟ್ ಮಾಡದ ಕಾಂಕ್ರೀಟ್ ಕೆಲಸ ಮಾತ್ರ ಮಾಡಿ, ಜನರು ಕೃತಕ ಪ್ರವಾಹ ಎದುರಿಸುವಂತೆ ಮಾಡಿದ್ದಾರೆ. ಪೀ ಬನ್ನಗ ಬಿತ್ತ್‌ಲ್ ನಾಡುನು ಎಂಬ ತುಳು ಗಾದೆಯಂತೆ ಬಿಜೆಪಿ ಮಳೆ ಬಂದ ಮೇಲೆ ಅದರ ಪರಿಹಾರದ ಬಗೆಗೆ ಯೋಚಿಸುತ್ತಿದೆ ಎಂದು ಲೋಬೋ ಹೇಳಿದರು.

ಹಿಂದೆ ಮೇ ಕಳೆದ ಮೇಲೆ ರಸ್ತೆ ಅಗೆಯುತ್ತಿರಲಿಲ್ಲ. ಈಗ ನೂರೆಂಟು ಯೋಜನೆಗಳ ಹೆಸರಿನಲ್ಲಿ ಕಾಂಕ್ರೀಟ್ ಮಾಡಿದ ರಸ್ತೆಯನ್ನೂ ಅಗೆಯುತ್ತಿದ್ದಾರೆ. ಇವರು ಕಾಂಕ್ರೀಟ್ ಅಗೆದು ಕೆಲವೆಡೆ ತಾರ್ ಹಾಕಿದ್ದಾರೆ. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳಿಗೆ ಏಪ್ರಿಲ್ ಬಳಿಕ ಡಾಮಾರು ಹಾಕುವುದಿಲ್ಲ. ಡಾಮಾರು ಅರ್ಧ ತಿಂಗಳು ಕರಗಿ ಸೆಟ್ ಆಗಬೇಕು. ಆದರೆ ಇವರು ಮಳೆಗಾಲದಲ್ಲಿ ಡಾಮಾರು ಹಾಕಿದರೆ ಯಾರ ಕೋಟಿ ರೂಪಾಯಿಗಳು ನಷ್ಟ ಆಗುವುದು ಎಂದು ಲೋಬೋ ಪ್ರಶ್ನಿಸಿದರು.

ಪಡೀಲ್, ಕೊಟ್ಟಾರ, ಪಂಪವೆಲ್ ಮೊದಲಾದ ಕಡೆ ಅವೈಜ್ಞಾನಿಕ ಕಾಮಗಾರಿಯ ಕಾರಣಕ್ಕೆ ನೀರು ನಿಲ್ಲುತ್ತದೆ. ಆದರೆ ಇವರು ಹಲವು ಮಳೆಗಾಲ ಕಳೆದರೂ ಇವರಿಗೆ ಆ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ. ನಾನು ನೀರು ಹರಿವ ಕೆಲವು ಕಡೆ ಕಂಬವಿಲ್ಲದೆ ನಿರ್ಮಾಣ ಆಗುವಂತೆ ನೋಡಿಕೊಂಡಿದ್ದೇನೆ. ಬಿಜೆಪಿಯವರು ತಾವು ಆರಾಮ ಆದರೆ ಸಾಕು ಎಂದು ಓಡಾಡುತ್ತಿದ್ದಾರೆ ಎಂದು ಲೋಬೋ ಹೇಳಿದರು.