ಪಿಲಿಗಳು ಈಜಾಡಿದ, ನೀರು ಕುಡಿದ ಕೊಳದ ಸುತ್ತ ಮುತ್ತಿದ ಮಾನವರು ಪಿಲಿಗಳನ್ನು ಕುಲೆ ಮಾಡತೊಡಗಿದ ಮೇಲೆ ಹುಲಿ ಮತ್ತಿತರ ಕುಲೆ ಆದ ಪ್ರಾಣಿಗಳ ರಕ್ಷಣೆಗಾಗಿ ಪಿಲಿಕುಳ ನಿಸರ್ಗಧಾಮ ಎದ್ದು ಬಂತು.
ಆರಂಭದ ವರ್ಷಗಳಲ್ಲಿ 450 ಎಕರೆಗಳಷ್ಟು ವಿಸ್ತಾರವಾದ ರಕ್ಷಿತ ಪ್ರದೇಶ ಎನ್ನಲಾದ ಇದು 400 ಎಕರೆಗೆ ಕುಗ್ಗಿದ್ದು ಭಾರತೀಯ ರಾಜಕಾರಣಿಗಳನ್ನು ಬಲ್ಲವರಿಗೆ ವಿಶೇಷವೇನಲ್ಲ. ಪಿಲಿಕುಳ ನಿಸರ್ಗಧಾಮ ಮತ್ತು ಹೊಸ ಪಿಲಿಕುಳ ಪ್ರಾಧಿಕಾರ ಎರಡರಲ್ಲೂ ರಾಜಕಾರಣಿಗಳು ಸದಸ್ಯರಿದ್ದಾರೆ. ಅಲ್ಲದೆ ಮೂವರು ವಿಷಯ ತಜ್ಞರನ್ನು ಇವರು ನೇಮಿಸುತ್ತಾರೆ. ತಮಗೆ ಅಗತ್ಯದ ವಿಷಯ ತಜ್ಞರನ್ನು ತಾನೆ ಆಳುವವರು ನೋಡುವುದು.
ಇಣುಕುವ ಮೊಸಳೆ ಉಷ್ಟ್ರಪಕ್ಷಿ
ತುಳುನಾಡು ಪಿಲಿಕುಳ ನಿಸರ್ಗಧಾಮ ಇದಕ್ಕೆ ಸರಿಯಾದ ಹೆಸರು. ಅಲ್ಲಿ ಕಾರಂತರೇಕೆ ಬಂದರು, ಈ ನಿಸರ್ಗ ಧಾಮಕ್ಕೆ ಅವರ ಕೊಡುಗೆ ಏನು? ಭಾರತದಲ್ಲಿ ಇವನ್ನೆಲ್ಲ ಕೇಳುವಂತಿಲ್ಲ. ಜನಾಭಿಪ್ರಾಯ ಸಂಗ್ರಹಿಸದೆ ಯಾರದೋ ಮೂಗಿನ ನೇರಕ್ಕೆ ಹೆಸರು ಇಡುವುದು ಭಾರತೀಯ ಅಧಿಕಾರಶಾಹಿಯ ಕ್ರಮ.
ರೈತ ಹಕ್ಕಿ ಹುಲಿರಾಯ ಪಿಲಿ
ಪಿಲಿಕುಳಾರಂಭ
1996ರಲ್ಲಿ ಆಗಿನ ಜಿಲ್ಲಾಧಿಕಾರಿ ಆಗಿದ್ದ ಭರತ್ ಲಾಲ್ ಮೀನಾ ಅವರ ಕನಸಿನ ಕೂಸು ಪಿಲಿಕುಳ ಅಭಯಾರಣ್ಯ ಇಲ್ಲವೇ ನಿಸರ್ಗ ಧಾಮ. ಇದು ಇಂದು ಪ್ರಖ್ಯಾತ ಪ್ರವಾಸಿ ಆಕರ್ಷಣೆ ಆಗಿದೆ. ಭಾನುವಾರಗಳಂದು 2,000 ಮತ್ತು ಇತರ ದಿನಗಳಲ್ಲಿ 600ರಷ್ಟು ಜನ ಇಲ್ಲಿಗೆ ವಿಹರಿಸಲು ಬರುತ್ತಾರೆ. ದಿನವಿಡೀ ಸುತ್ತಿದರೂ ಮುಗಿಯದಷ್ಟು ವಿಚಾರಗಳು ಇಲ್ಲುಂಟು.
ಸ್ವಾಭಾವಿಕವಾಗಿ ಇಲ್ಲಿ ಇದ್ದ ಪ್ರಾಣಿ, ಪಕ್ಷಿ, ಸಸ್ಯಗಳ ರಕ್ಷಣೆ, ಪಶ್ಚಿಮ ಘಟ್ಟಗಳ ನಿಸರ್ಗ ನೆಲೆ ಸ್ಥಾಪನೆ, ನಿರ್ವಂಶದಂಚಿನ ಜೀವಾವಾರಗಳಿಗೆ ಅಭಯ ನೀಡುವುದು ಈ ನಿಸರ್ಗ ಧಾಮದ ಉದ್ದೇಶವಾಗಿದೆ.
ಪ್ರಾದೇಶಿಕ ವಿಜ್ಞಾನ ಕೇಂದ್ರ
ರಾಷ್ಟ್ರೀಯ ವಿಜ್ಞಾನ ಮ್ಯೂಸಿಯಂ ಕೌನ್ಸಿಲ್ ನ ಅನುದಾನದಡಿ ಇಲ್ಲಿನ 10 ಎಕರೆ ಪ್ರದೇಶದಲ್ಲಿ ಈ ಕೇಂದ್ರವಿದೆ. ಇಲ್ಲಿನ ಮಾದರಿಗಳು ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ವಿಜ್ಞಾನಾಸಕ್ತರೆಲ್ಲರಿಗೂ ಜ್ಞಾನ ನಿಧಿಯಾಗಿದೆ.
ಬಗೆ ಬಗೆ ಭತ್ತದ ಬೀಜ
ತಾರಾಲಯ
3ಡಿ ತಾರಾಲಯ ಆಗಿರುವ ಇದಕ್ಕೆ ವಿವೇಕಾನಂದರ ಹೆಸರು ಇಡಲಾಗಿದೆ. ಸ್ವಾಮೀಜಿಗೂ ತಾರಾ ವಿಜ್ಞಾನಕ್ಕೂ ಏನು ಸಂಬಂಧ ಗೊತ್ತಿಲ್ಲ. 18 ಮೀಟರ್ ವ್ಯಾಸ ಗುಮ್ಮಟ ಗೋಲದ ಈ ಮುಮ್ಮೈ (೩ಡಿ) ತಾರಾಲಯ ದೇಶದಲ್ಲೇ ಮೊದಲನೆಯದಾಗಿದ್ದು ಏಶಿಯಾದಲ್ಲಿ ಎರಡನೇ ಸ್ಥಾನ ಪಡೆದಿದೆ. ವ್ಯೋಮ ವಿಜ್ಞಾನ, ನಕ್ಷತ್ರ ಲೋಕ ಅರಿಯಲು ಇದು ಇದೆ. ಇತ್ತೀಚಿಗೆ ಇಲ್ಲಿ ಜಾಗತಿಕ ಪೂರ್ಣ ಡೋಮ್ ಸಮ್ಮೇಳನವು ಯಶಸ್ಸು ಕಂಡಿದೆ.
ಮೀನು ಮಂದಿರ
ಇಲ್ಲಿನ ಮತ್ಸ್ಯಾಲಯ ಸರ್ವರಿಗೂ ಮೀನುಗಳ ವಿಶ್ವರೂಪ ದರ್ಶನ ಮಾಡಿಸುತ್ತದೆ. ಇದನ್ನು ಪಶು ಸಂಗೋಪನೆ ಇಲಾಖೆಯ ಅನುದಾನದಡಿ ನಿರ್ವಹಣೆ ಮಾಡಲಾಗುತ್ತದೆ. ಇಲ್ಲಿ ಅಪರೂಪದ ಮೀನು ತಳಿಗಳ ರಕ್ಷಣೆ ಮತ್ತು ಸಂತಾನೋತ್ಪತ್ತಿ ನಡೆದಿದೆ.
ಪರಪೋಕು ಗ್ರಾಮ
ತುಳುನಾಡಿನ ಗುತ್ತು ಮನೆ, ಅಲ್ಲಿನ ಆಗಿನ ವ್ಯವಸ್ಥೆ, ವಸ್ತು ಪರಿಕರಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಅಲ್ಲದೆ 35 ಎಕರೆ ಪ್ರದೇಶದಲ್ಲಿ ಕೆರೆ ಕಟ್ಟೆ, ತೆಂಗು ಕಂಗು ತೋಟ, ನಾಗಬನ ಅಲ್ಲದೆ ತುಳುನಾಡ ಮೂಲ ಕಲಾ ಸಂಪತ್ತು ಸಾಕಾರಗೊಳಿಸಲು ಇಲ್ಲಿ ಪ್ರಯತ್ನಿಸಲಾಗಿದೆ.
ತುಳುನಾಡ ಕುಶಲಕರ್ಮಿಗಳ ಗ್ರಾಮ
ಕುಂಬಾರಿಕೆ, ಕಮ್ಮಾರಿಕೆ, ಬಡಗಿ ಕಜ್ಜ, ನೇಕಾರಿಕೆ, ಕಲ್ಲು ಕೆತ್ತನೆ, ಬೆತ್ತ ಬಿದಿರಿನ ಕೈ ಕಸುಬು, ಅವಲಕ್ಕಿ, ಬೆಲ್ಲ ತಯಾರಿಕೆ, ಎಣ್ಣೆ ಗಾಣ ಎಲ್ಲ ಇಲ್ಲಿವೆ. ಪರಂಪರಾ ಎಂಬ ಮಳಿಗೆಯ ಮೂಲಕ ಇಲ್ಲಿ ತಯಾರಿಸಿದವನ್ನು ಮಾರಾಟ ಮಾಡುವ ವ್ಯವಸ್ಥೆ ಇದೆ. ಒಂದು ಸುತ್ತು ಹಾಕಿ ಹಳತನ್ನು ನೆನಪಿಸಿಕೊಳ್ಳಬಹುದು; ಕೊಳ್ಳಬಹುದು.
ಕೃತಕ ನೀರ್ಬೀಳು
ಕಾಡು ವಸತಿ
ಕರ್ನಾಟಕ ಸರಕಾರದ ಜಂಗಲ್ ಲಾಡ್ಜ್ ಸ್ ಮತ್ತು ರೆಸಾರ್ಟ್ಸ್ ಲಿಮಿಟೆಡ್ ನಿರ್ವಹಣೆಯ ಕೇಂದ್ರವಿದು. ಇಲ್ಲಿ ಬರುವ ಪ್ರವಾಸಿಗರು ಕಾಡು ವಾಸದ ಆನಂದ ಶಾಂತಿ ಅನುಭವಿಸಬಹುದು. ಅಜ್ಜಿ ಮದ್ದು, ತುಳು ಮನೆ ಮದ್ದು, ಸಿದ್ದ ಮದ್ದು ಮಜ್ಜನ ಲಭ್ಯವಿದೆ. ಹೆಸರು ಮಾತ್ರ ಆಯುರ್ವೇದ ಕೇಂದ್ರ.
ಗಾಲ್ಫ್ ಕ್ಲಬ್
ಸಿರಿವಂತರ ಆಟವಾದ ಗಾಲ್ಫ್ ಆಡಲು 75 ಎಕರೆ ಪ್ರದೇಶದಲ್ಲಿ 18 ಗುಂಡಿಯ ಗಾಲ್ಫ್ ಕೋರ್ಸ್ ಮಾಡಲಾಯಿತು. 15 ಗಾಲ್ಫ್ ಕ್ಲಬ್ ಗಳೊಂದಿಗೆ ಅಫಿಲಿಯೇಟ್ ಆಗಿರುವ ಇದು ಸದ್ಯ 600 ಸದಸ್ಯರನ್ನು ಹೊಂದಿದೆ. ದೆಹಲಿ, ಆಂಧ್ರ, ತಮಿಳುನಾಡು, ಕರ್ನಾಟಕದ ಗಾಲ್ಫ್ ಕಲಿಗಳು ಬರುತ್ತಿರುತ್ತಾರೆ.
ಕೆರೆಗೆ ಕರೆಯುವ ನೆಲ ಮೀನು
ನೀರುದ್ಯಾನ
15 ಎಕರೆ ವ್ಯಾಪಿಸಿರುವ ವಾಟರ್ ಪಾರ್ಕ್ ಇದು. ಖಾಸಗಿತನ ರಕ್ಷಣೆಯ ಇಲ್ಲಿ ಪ್ರವಾಸಿಗರಿಗೆ ಎಲ್ಲ ಬಗೆಯ ಜಲಕ್ರೀಡೆಗಳ ಸವಲತ್ತು ಲಭ್ಯವಿದೆ. ಚಟುವಟಿಕೆಗೆ ಕೋವಿಡ್ ಗ್ರಹಣ ಬಡಿದಿದೆ; ಗ್ರಹಣ ಬಿಡುವ ಕಾಲವಿದು.
ದೋಣಿ ವಿಹಾರ
ಪೆಡಲಿಂಗ್ ಮತ್ತು ಯಂತ್ರಚಾಲಿತ ಬೋಟುಗಳು ನೀರಿನಲ್ಲಿ ಸವಾರಿ ಮಾಡಿಸಲು ನಿಮಗೆ ಲಭ್ಯವಿವೆ. ಖಾಸಗಿಯವರ ನಿರ್ವಹಣೆಯ ಇಲ್ಲಿ ರಕ್ಷಣೆಗೆ ಆದ್ಯತೆ ನೀಡಿ ಕಾರ್ಯವೆಸಗುತ್ತಿವೆ. ಇಲ್ಲೇ ಹೂವಿನ ತೋಟ, ಮಕ್ಕಳ ಆಟದ ವಿಭಾಗಗಳೂ ಇವೆ. ಅಲ್ಲಿ ಮಕ್ಕಳಿಗೆ ವಿವಿಧ ಮನೋಹರ ಆಟದ ವಸ್ತುಗಳು ಕೂಡ ಸಿಗುತ್ತವೆ. ಪ್ರೇಮಿಗಳಿಬ್ಬರ ದೋಣಿ ವಿಹಾರ, ನಾಲ್ವರ ದೋಣಿ ವಿಹಾರ, ಹೆಚ್ಚು ಜನರ ಬೋಟು ವಿಹಾರದ ವ್ಯವಸ್ಥೆ ಸಿಗುತ್ತದೆ.
ಅಡುಗೆ ಮನೆ
ನಗರ ಕೈ ಮತ್ತು ಜಿಲ್ಲಾ ಸೈ
ಕೇಂದ್ರ ಸರ್ಕಾರದ 3 ಕೋಟಿ ಅನುದಾನದಲ್ಲಿ ನಡೆಯುವ ಕೈಗಾರಿಕಾ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆ ಅರ್ಬನ್ ಹಾಥ್ ಇಲ್ಲಿದೆ. ವಿಶ್ರಾಂತಿಗೆ, ಊಟ ತಿಂಡಿಗಳಿಗೆ ಕಟ್ಟಡಗಳಿವೆ. ರಾಜ್ಯ ಸರ್ಕಾರದ ಒಂದೂವರೆ ಕೋಟಿ ರೂಪಾಯಿ ಅನುದಾನದಿಂದ ಸ್ವಸಹಾಯ ಗುಂಪು, ಸ್ತ್ರೀ ಶಕ್ತಿ ಗುಂಪು, ಮಹಿಳಾ ಉತ್ಪಾದನಾ ಘಟಕಗಳ ಮಾರಾಟಕ್ಕೆ ಜಿಲ್ಲಾ ಹಾಥ್ ಎಂಬ ಮಳಿಗೆಯ ನೆರವು ಇದೆ.
ಬಯಲು ರಂಗಮಂದಿರ
ಪಿಲಿಕುಳದಲ್ಲಿ ಜನಪದ ಮತ್ತು ಇತರ ಮನೋರಂಜನೆ ನೀಡಲು ಬಯಲು ರಂಗಮಂದಿರ ಇದೆ.
ನಗರ ಇಕೋ ವನ
ಅರ್ಬನ್ ಇಕೋ ಪಾರ್ಕ್ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ 17.60 ಕೋಟಿ ರೂಪಾಯಿ ಅನುದಾನದಡಿ ತೆರೆದುಕೊಂಡಿದೆ. ಮಹಿಳಾ ಗುಂಪುಗಳು ಮತ್ತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಇಲ್ಲಿ ನೆರವು ಕೇಂದ್ರ ಕೆಲಸ ಮಾಡುತ್ತದೆ.
ಬಾವಿಗೆ ಹಗ್ಗ
ಮೂಲಿಕೆ ಮತ್ತು ಸಸ್ಯ ಮ್ಯೂಸಿಯಂ
ಹರ್ಬೇರಿಯಂ ಮತ್ತು ಬೊಟಾನಿಕಲ್ ಮ್ಯೂಸಿಯಂ ಕರ್ನಾಟಕ ರಾಜ್ಯ ಜೀವ ವೈವಿಧ್ಯ ಮಂಡಳಿಯ ಅನುದಾನದಡಿ ನಡೆಯುತ್ತದೆ. ಎಲ್ಲ ಬಗೆಯ ಮರ, ಗಿಡ, ಸಸ್ಯ, ಮೂಲಿಕೆಗಳ ಪ್ರಾತ್ಯಕ್ಷಿಕೆ ಲಭ್ಯ. ಅಳಿವಿನಂಚಿನಲ್ಲಿರುವವಕ್ಕೆ ವಿಶೇಷ ಆದ್ಯತೆ ನೀಡಿ ಉಳಿಸುವ ಕೆಲಸವೂ ಇಲ್ಲಿ ನಡೆದಿದೆ. ಜ್ಞಾನ ವಿಜ್ಞಾನ ನಿಧಿಯಿದು.
ಇದರೊಂದಿಗೆ ಕುದುರೆಮುಖ ಕಬ್ಬಿಣ ಅದಿರು ಕಂಪನಿಯ ಅನುದಾನದಿಂದ 5 ಎಕರೆ ಪ್ರದೇಶದಲ್ಲಿ ಕುದುರೆಮುಖ ಟ್ರೀ ಪಾರ್ಕ್ ಸ್ಥಾಪಿಸಲಾಗಿದೆ. ಪಶ್ಚಿಮ ಘಟ್ಟಗಳ ಸಸ್ಯ ವೈವಿಧ್ಯ ಉಳಿಸುವುದು ಇದರ ಗುರಿ. ಇಂಡೋ ನಾರ್ವೆ ಸೌಹಾರ್ದ ಯೋಜನೆಯಡಿ ಸಸ್ಯೋದ್ಯಾನ ತೆರೆದು ನೆರೆದಿದೆ.
ಆವಿಷ್ಕಾರ ಕೇಂದ್ರ
ಕೊಲ್ಕತ್ತಾದ ನ್ಯಾಶನಲ್ ಕೌನ್ಸಿಲ್ ಆಫ್ ಸಯನ್ಸ್, ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಇವುಗಳ 1.8 ಕೋಟಿ ಅನುದಾನದಿಂದ ಇನೋವೇಶನ್ ಹಬ್ ಇಲ್ಲವೇ ಆವಿಷ್ಕಾರ ಕೇಂದ್ರ ತೆರೆಯಲಾಗಿದೆ. ವಿದ್ಯಾರ್ಥಿಗಳು ಹೊಸ ಆವಿಷ್ಕಾರ ಮಾಡುವವರು ಇಲ್ಲಿ ಕಾಲೂರಬಹುದು.
ಇಷ್ಟೆಲ್ಲ ಇದೆ ಸರಿ, ಅವೆಲ್ಲ ಸರಿ ಇದೆಯೇ ಎನ್ನುವುದು ಪ್ರಶ್ನೆ. ಪ್ರವೇಶ ಶುಲ್ಕಕ್ಕೆ ತಕ್ಕುದೆಲ್ಲ ಇದೆಯಾದರೂ, ನೇರ ಸಂಬಳದ ಮತ್ತು ಗುತ್ತಿಗೆ ಆಧಾರದ ನೌಕರರು ಇದ್ದಾರಾದರೂ ಪ್ರವಾಸಿಗರಿಗೆ ಸರಿಯಾದ ಮಾಹಿತಿ ಸಿಗುವುದು ಕಷ್ಟ. ಕೆಲವು ಸ್ಥಳ ಎಲ್ಲಿದೆ ಎಂದು ಪ್ರವಾಸಿಗರು ಹುಡುಕುವುದೂ ಕಷ್ಟ. ಹುಡುಕಿ ಹೋದರೂ ಕೆಲವೆಡೆ ನಿಮಗೆ ಮೂಕ ದರ್ಶನ ಬಿಟ್ಟರೆ ಯಾವ ಮಾಹಿತಿಯೂ ಸಿಗದ ಸ್ಥಿತಿಯೂ ಇದೆ. ಇಡೀ ದಿನ ಇಲ್ಲೇ ಕಳೆಯಲು ಪ್ರವಾಸಿಗರಿಗೂ ವ್ಯವದಾನವಿಲ್ಲ. ಹಾಗಾಗಿ ಸಿಕ್ಕಿದರೆ ಸೀರುಂಡೆ ಎಂದು ಲಭ್ಯವಿರುವುದನ್ನು ನೋಡಿ ಆನಂದಿಸಬಹುದು. ಏನು ಅವ್ಯವಸ್ಥೆ ಎಂದು ಗೊಣಗಾಡುವ ಜನ ಎಲ್ಲಿ ತಾನೆ ಇರುವುದಿಲ್ಲ? ಇಲ್ಲೂ ಇರುತ್ತಾರೆ. ಪಿಲಿಕುಳದಲ್ಲಿ ಪಿಲಿ ಇರುವುದಂತೂ ಸತ್ಯ, ಬಿಲ ತೋಡುವ ಜೀವಿಗಳೂ ಇವೆ. ಕಣ್ಣು, ಹೃದಯ ಎರಡೂ ತೆರೆದಿಟ್ಟುಕೊಂಡು ನೋಡಿ.
-By ಪೇಜಾ