ಇತಿಹಾಸ ನೆನಪಿಸುವ ತಾಲೂಕು ಪಂಚಾಯತ್, ಮಿನಿ ವಿಧಾನ ಸೌಧದ ಬಳಿಯ ಹಳೆಯ ಮರಗಳಿಗೆ ಕಲ್ಲಿನ ಕಟ್ಟೆ ಕಟ್ಟಿ ರಕ್ಷಿಸುವ ಕೆಲಸ ಆರಂಭವಾಗದೆ. ನಗರದ ಕೆಲವು ಹಳೆಯ ಪ್ರದೇಶಗಳ ಮರಗಳು ಉಳಿದಿಲ್ಲ. ಕೆಲವೇ ಕೆಲವು ಕಡೆ ಅಂಥ ಮರಗಳು ಉಳಿದಿವೆ. ತಾಲೂಕು ಪಂಚಾಯತ್ ಬಳಿಯ ಅಂಥ ಮರಗಳು ನೂರರಿಂದ ಇನ್ನೂರು ವಸಂತಗಳನ್ನು ಕಂಡಿವೆ. ತಾಲೂಕು ಪಂಚಾಯತ್ ಬಳಿ ಇತಿಹಾಸ ಕಾಲದಲ್ಲಿ ನಗರ ರಕ್ಷಣೆಯ ಕೋತ್ವಾಲ ಕಟ್ಟೆ ಇತ್ತು. 1907ರಲ್ಲಿ ರೈಲು ಬರತೊಡಗಿದವು. ರೈಲು ಇಳಿದವರು ಮುಖ್ಯ ನಗರದತ್ತ ಆ ಕಡೆಯ ಹಾದಿಯಾಗಿಯೇ ಬರುತ್ತಿದ್ದರು.

ಮೈದಾನದಲ್ಲಿ ಸದಾ ಆಟ, ನಾಟಕ, ನಾನಾ ಪ್ರದರ್ಶನಗಳು ನಡೆಯುತ್ತಿದ್ದವು. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಕಾಂಗ್ರೆಸ್ ನಾಯಕರ ಬಹುತೇಕ ಹೋರಾಟಗಳು ಈ ಮೈದಾನದಲ್ಲಿಯೇ ಮೊಳಗಿವೆ. ಇವೆಲ್ಲದಕ್ಕೂ ಜನ ಈ ಹಾದಿಯ ಇಕ್ಕೆಲಗಳಿಂದಲೇ ಬರುತ್ತಿದ್ದರು. ಈ ಮರಗಳ ನೆರಳಿನಲ್ಲಿ ಕಾಯುತ್ತಿದ್ದರು. ಆ ಎಲ್ಲ ಮರಗಳು ಉಳಿದಿಲ್ಲವಾದರೂ ಎಲ್ಲ ಮರಗಳೂ ಅಳಿದಿಲ್ಲ ಎನ್ನುವುದು ಸಂತಸದ ವಿಷಯ.

ತಾಲೂಕು ಬೋರ್ಡ್ ರಚನೆಯ ಬಳಿಕ ಇದು ಜನರ ಮುಖ್ಯ ಭೂದಾಖಲೆ ನೆಲೆ ಎನಿಸಿತು. ಆಚೀಚೆ ಸರಕಾರೀ ಕಚೇರಿಗಳು,  ಇತ್ತ ಮಾರುಕಟ್ಟೆ ಎಂದು ಜನ ತಿರುಗುವ ಮುಖ್ಯ ಸ್ಥಳವಿದು. ಎದುರಿಗೆ ಟೌನ್ ಹಾಲ್ ಸಹ‌ ಬಂತು. ಒಟ್ಟಾರೆ ಮರಗಳು ಯಾವ ತಾರತಮ್ಯ ಮಾಡದೆ‌ ನೆರಳು ನೀಡುತ್ತಿದ್ದವು. ಜನ ಮಾತ್ರ ರಸ್ತೆ ಅಗಲ, ಅಭಿವೃದ್ಧಿ ಕಾಮಗಾರಿ ಎಂದು ಸಾಕಷ್ಟು ‌ಮರ ಸ್ವಾಹಾ ಮಾಡಿದ್ದಾರೆ. ತಾಲೂಕು ಪಂಚಾಯತ್ ಆವರಣದ ಉಳಿದ ‌ಮರವಾದರೂ ಉಳಿದೀತೇ ಎಂಬ ಸಂಶಯ ಕೆಲವರಿಗಿತ್ತು.

ತಾಲೂಕು ಪಂಚಾಯತ್ ಪ್ರಯತ್ನ, ಮಿನಿ ವಿಧಾನ ಸೌಧದ ಇರುವಿಕೆ, ಆಸಕ್ತರ‌ ಮನವಿ ಕೆಲಸ ಮಾಡಿದೆ. ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಕೂಡಿ ಸ್ಥಳದ ಅಭಿವೃದ್ಧಿ ‌ನಡೆಸಿವೆ. ತಾಲೂಕು ಪಂಚಾಯತ್ ಆವರಣದ ಮರಗಳಿಗೆ ಕಟ್ಟೆಯ ರಕ್ಷಣೆ ನೀಡುವ ಕೆಲಸ ಭರದಿಂದ ಸಾಗಿದೆ. ಮರದ ಬುಡ ಅಗಲಗೊಳಿಸಿ, ಒಣ ಗೊಬ್ಬರ ಹರಡಿ, ಮಣ್ಣು ಮುಚ್ಚಿ ಸುತ್ತ ಕಟ್ಟೆ ಎಬ್ಬಿಸಲಾಗಿದೆ. ಜನ ಕಟ್ಟೆಯ ಸುತ್ತ ನೆರೆದು ನೆರಳಿನಲ್ಲಿ ಕಟ್ಟೆಗೆ ಒರಗಬಹುದು; ಕೂರಲೂ ಬಹುದು. ನಮ್ಮಲ್ಲಿ ಕಿಡಿಗೇಡಿಗಳಿಗೇನೂ ಕೊರತೆ ಇಲ್ಲ. ಮುಂದೆ ಕಟ್ಟೆಗಳಿಗೆ ಹಾನಿಯಾಗದಂತೆ, ಹಾನಿ ಮಾಡದಂತೆ ನಿಗಾ ವಹಿಸಬೇಕಾಗುತ್ತದೆ. ಮರ ಬೆಳೆದವುಗಳಾದ್ದರಿಂದ ಅವು ಬೋರ್ ವೆಲ್ ನಂತೆ‌ ಬೇರು ಇಳಿಸಿ, ಸೋಲಾರ್ ಪ್ಯಾನಲ್ ನಂತೆ ಎಲೆ ಹರಡಿ ತಮ್ಮ ಪೋಷಣೆ ತಾವು ಮಾಡಿಕೊಳ್ಳುತ್ತವೆ.   


-By ಪೇಜಾ