ಹೂವು ಚೆಲುವೆಲ್ಲ ತಾನೆಂದಿತು, ಹೆಣ್ಣು ಹೂವ ಮುಡಿದು ಚೆಲುವೇ ತಾನೆಂದಿತು ಎಂದರೂ ಹೂವು ಮತ್ತು ಹೆಣ್ಣಿನ ‌ಉದ್ದೇಶವೇ ಸಂತಾನೋತ್ಪತ್ತಿಯಾಗಿದೆ.

ನಾಲ್ಕೂವರೆ ಕೋಟಿ ವರುಷಗಳಿಂದ ಭೂಮಿಯ ಮೇಲೆ ಸಸ್ಯಗಳು ಇವೆ. ಸಾಗರದಲ್ಲಿ ಮೊದಲು ಒಂದಣುವಾಗಿ ಮೂಡಿದ ಜೀವ ಸಸ್ಯ ಮತ್ತು ಪ್ರಾಣಿಗಳಾಗಿ ಬಹುಕೋಶೀಯ ಜೀವಿಗಳಾದುದು ಒಂದು ರಹಸ್ಯ. ಡಾರ್ವಿನ್ ಪ್ರಕಾರ ಆರಂಭದ ಹೂವಿಲ್ಲದೆಯೇ ಉಳಿದ ಮತ್ತು ಹೂವಿಲ್ಲದೆಯೇ ಬೀಜ ಬಿಟ್ಟ ಸಸ್ಯಗಳ ಲೋಕ ವಿಚಾರ ಸಹ ಒಂದು ರಹಸ್ಯ.

ಆರಂಭದ ಸಸ್ಯಗಳು ಬಹುಪಾಲು ನೆಲದಲ್ಲಿ ಹಾಗೆಯೇ ಒಣಗಿದವು. ಚೂರು ಪಾರು ನೆಲ ಬೇರು ಹಿಡಿದು ಉಳಿಯುವ ಸಾಹಸ ಮಾಡಿದವು. ಆಗ‌ ನಡೆದ ಪ್ರಾಕೃತಿಕ ಚೋದ್ಯವೇ ಸಸ್ಯಗಳು ಸಂತಾನೋತ್ಪತ್ತಿ ಹೂ ಬಿಡಲು ಆರಂಭಿಸಿದ್ದು. ಇದೇ ವೇಳೆ ಕೆಲವು ಹೂವು ಇಲ್ಲದೆಯೂ ಬೀಜ ‌ಬಿಟ್ಟವು. ಅವುಗಳಲ್ಲಿ ಸೂಜಿಮೊನೆ ಎಲೆಯ‌ ಗಾಳಿ (ಸರ್ವೆ) ಮರದಂಥವು ಈಗಲೂ ನಮ್ಮ ಮುಂದೆಯೇ ಇವೆ.

ಇಟ್ಟಿದ್ದರೂ ಹೂಗಳಿಂದ ಸಂತಾನೋತ್ಪತ್ತಿ ಅಷ್ಟು ಸುಲಭವಲ್ಲ. ಅದಕ್ಕೆ ಪರಾಗ ಸ್ಪರ್ಶ ಕ್ರಿಯೆ ನಡೆಯಬೇಕು. ಗಂಡು ಅಣು ಹೆಣ್ಣು ಅಂಡಾಣುವಿನಲ್ಲಿ ಬಿದ್ದು ಫಲಿಸಿದರೆ ಮಾತ್ರ ಬೀಜ, ಬೀಜದ ಫಲ ಎಂದಿತ್ಯಾದಿಯಾಗಿ ಸಂತಾನೋತ್ಪತ್ತಿ ಆಗುತ್ತದೆ.

ಒಂದೇ ಹೂಗೊಂಚಲಿನಲ್ಲಿ, ಒಂದೇ ಹೂವಿನಲ್ಲಿ, ಒಂದೇ ಗಿಡದ ಎರಡು ಕಡೆ, ಒಂದೇ ಜಾತಿಯ ಗಂಡು ಜಾತಿ ಮರ ಹೆಣ್ಣು ಜಾತಿ ಮರಗಳ ಹೂಗಳ ನಡುವೆ ಪರಾಗಸ್ಪರ್ಶ ಕ್ರಿಯೆ ನಡೆಯಬೇಕು. ಗಾಳಿ, ನೀರುಗಳಿಂದ ಪರಾಗಸ್ಪರ್ಶ ನಡೆದರೂ ಮುಖ್ಯವಾಗಿ ಜೇನುನೊಣಗಳು, ದುಂಬಿ, ಪತಂಗ, ಹಮ್ಮಿಂಗ್ ಬರ್ಡ್ ಬಗೆಯ ಹಕ್ಕಿಗಳಿಂದ ಪರಾಗಸ್ಪರ್ಶ ನಡೆಯುತ್ತದೆ. ಪ್ರಾಣಿಗಳ ಮೂಲಕ ಅಲ್ಪಸ್ವಲ್ಪ ಪರಾಗಸ್ಪರ್ಶ ನಡೆಯುವುದಿದೆ.

ದುಂಬಿಯಂಥವನ್ನು ಸೆಳೆಯಲು ಹೂವು ಬಣ್ಣ ಮತ್ತು ಪರಿಮಳಗಳನ್ನು ಹೊಂದಿರುತ್ತದೆ. ಆದರೆ ಎಲ್ಲ ಹೂಗಳು ಅಂಥ ಅನುಕೂಲ ಪಡೆದಿರುವುದಿಲ್ಲ. ಅದಕ್ಕೆ ಸಸ್ಯಗಳಲ್ಲಿ ಹಲವು ಉಪಾಯಗಳಿವೆ. ಕೆಲವು ಆರ್ಕಿಡ್ ಹೂವುಗಳು ದುಂಬಿಯಂತೆ ಕಾಣುವ, ಹೆಣ್ಣು ಜೇನ್ನೊಣದಂತೆ ಕಾಣುವ ಹೂವುಗಳನ್ನು ಬಿಡುತ್ತವೆ. ಕೆಲವು ಅತಿ ಪುಟ್ಟ ಹೂಗಳು ಗೊಂಚಲಿದ್ದರೂ ಎದ್ದು ಕಾಣಲು ಹೂ ಬಳಿಯ ಎಲೆಗಳು ಬೆಳ್ಳಗೆ ದೊಡ್ಡ ಹೂ ಪಕಳೆಗಳಂತೆ ಕಾಣುವ ರೂಪದಲ್ಲಿ ಇರುತ್ತವೆ.

ನಮ್ಮ (ತಾಳೆ) ಈರೋಲ್ ಮರದಂತೆ ಗಂಡು ಹೆಣ್ಣು ಮರಗಳು ಬೇರೆಯೇ ಇದ್ದಾಗ‌ ಮರಗಳು ಕಿಮೀಗಟ್ಟಲೆ ದೂರದಲ್ಲಿ ಇದ್ದರೆ ಪರಾಗಸ್ಪರ್ಶ ಕಷ್ಟ. ಈ ಎಲ್ಲ ಸಮಸ್ಯೆಗಳ ನಡುವೆಯೂ ಸಸ್ಯಗಳು ನಿಸರ್ಗದ ಸವಾಲುಗಳನ್ನು ಎದುರಿಸಿ ಮುನ್ನಡೆದಿವೆ.

ಫ್ರಾಂಕ್ಲೀನಿಯಾ ಮರದ ಸಹಿತ 600ರಷ್ಟು ಮರ ಮತ್ತು ಸಸ್ಯಗಳು ನಿರ್ವಂಶ ಆಗಿರುವ ವರದಿ ಇದೆ. ಇವೆಲ್ಲದರ‌ ನಡುವೆ ಹೂಗಳ ಚೆಲುವನ್ನು ತನ್ನ ಅಲಂಕಾರ, ವ್ಯಾಪಾರದ ಸರಕು ಮಾಡಿಕೊಂಡಿರುವ ಮಾನವನು ಹೊಸ ಕಸಿ ತಳಿಗಳತ್ತ ಮುಖ ಮಾಡಿದ್ದಾನೆ. ಈ ಕಾರಣದಿಂದಲೂ ಕೆಲವು ಸಸ್ಯಗಳು ಬದುಕಿ ಏಗಲಾಗದಾಗಿವೆ. ಅತ್ತಿಯಂಥ ಮರದ ಹೂಗಳು ನಮಗೆ ಕಾಣಿಸದಷ್ಟು ಸೂಕ್ಷ್ಮ. ಇಂಪೀರಿಯಲ್ ಅಲಿಸಂ, ಕ್ಯಾರಿಯೆಲ್ ಮೊದಲಾದ ಕೆಲವು ಹೂವುಗಳು ಕೊಳೆತ‌ ವಾಸನೆಯಿಂದಲೇ ಸಂತಾನೋತ್ಪತ್ತಿ ಮಾಡುತ್ತವೆ. ಇವುಗಳ ಕೊಳೆತ ವಾಸನೆಗೆ ಬರುವ ನೊಣದಂಥ ಕೆಲವು ಕೀಟಗಳು ಇವುಗಳಲ್ಲಿ ಪರಾಗಸ್ಪರ್ಶಕ್ಕೆ ಕಾರಣವಾಗುತ್ತವೆ.


ದೇಶದಲ್ಲಿ ವಾಣಿಜ್ಯ ರೀತಿಯಿಂದ ಕರ್ನಾಟಕ ಎರಡನೇ ಅತಿ ಹೆಚ್ಚು ಹೂವು ಬೆಳೆಯುವ ರಾಜ್ಯವಾಗಿದೆ. ಪ್ರತಿ ದಿನ ಮುಂಜಾವ 3ರಿಂದ 6 ಗಂಟೆಯವರೆಗೆ ನಡೆಯುವ ಬೆಂಗಳೂರಿನ ಸಗಟು ಹೂವು ಮಾರುಕಟ್ಟೆ ದೇಶದಲ್ಲೇ ಅತ್ಯಂತ ದೊಡ್ಡ ಹೂವಿನ ಸಂತೆ ಎನಿಸಿದೆ.

ಮಾನವನು ಹೂವುಗಳನ್ನು ಆಹಾರವಾಗಿಯೂ ಮಸಾಲೆಯಾಗಿಯೂ ಬಳಸುತ್ತಾನೆ. ಲವಂಗವು ಕಂಕುಲ ಹೂವಿನ ಮೊಗ್ಗು. ಕುಂಬಳದ ಹೂವಿನ ದೋಸೆ ಮಾಡಿದರೆ, ನುಗ್ಗೆ ಹೂವಿನ ಪಲ್ಯ ಮಾಡಿದರೆ, ಹುಣಸೆ ಹೂವಿನ ಚಟ್ನಿ ಮಾಡುತ್ತಾರೆ. ಹೀಗೆ ಹಲವು ಹೂವುಗಳು ದೇಹ‌ ಪೋಷಕವೂ ಆಗಿವೆ. 


-By ಪೇಜಾ