ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದಾಗಿನಿಂದ ಹಿಂದೂ ಕಾರ್ಯಕರ್ತರನ್ನು ಅದರಲ್ಲೂ ಹಿಂದೂ ಮಹಾ ಸಭಾದವರನ್ನು ಸುಳ್ಳು ಮೊಕದ್ದಮೆಗಳಡಿ ಜೈಲಿಗೆ ಕಳುಹಿಸುವುದನ್ನೇ ಉದ್ಯೋಗ ಮಾಡಿಕೊಂಡಿದೆ ಎಂದು ಹಿಂದೂ ಮಹಾ ಸಭಾದ ರಾಜ್ಯ ಅಧ್ಯಕ್ಷರಾದ ರಾಜೇಶ್ ಪವಿತ್ರನ್ ಹೇಳಿದರು. 

ನನ್ನ ಮೇಲೆ ಸುಳ್ಳು ಹನಿ ಟ್ರ್ಯಾಪ್ ಮೊಕದ್ದಮೆ ಹಾಕಿದರು. ಆದರೆ ನ್ಯಾಯಾಧೀಶರೇ ಖಂಡಿಸಿ ಜಾಮೀನು ನೀಡಿದರು. ನಮ್ಮ ಸಂಘಟನೆ ಇಡೀ ರಾಜ್ಯದಲ್ಲಿ ಚುನಾವಣಾ ಶಕ್ತಿಯಾಗಿ ಹೊರಹೊಮ್ಮುವುದನ್ನು ತಡೆಯಲು ನಮ್ಮನ್ನು ನಾನಾ ರೀತಿಯಲ್ಲಿ ಜೈಲಿಗೆ ಕಳುಹಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪವಿತ್ರನ್ ತಿಳಿಸಿದರು.

ಹಿಂದೂ ಮಹಾ ಸಭಾದಡಿ, ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಪುನಶ್ಚೇತನ ಸಮಾವೇಶ ನಡೆಯುತ್ತದೆ. ನಾವು ಹಿಂದೂ ಸಮಾನ‌ ಮನಸ್ಕರೊಡನೆ ಮುಂದಿನ ಚುನಾವಣೆಯಲ್ಲಿ ಎಲ್ಲ ಕಡೆ ಸ್ಪರ್ಧಿಸುತ್ತೇವೆ. ಈ ಸರಕಾರ ರಾಜಕೀಯವಾಗಿ ಪೈಪೋಟಿ ನೀಡಲಿ, ನಕಲಿ ಪ್ರಕರಣಗಳಿಂದ ಅಲ್ಲ ಎಂದು ಪವಿತ್ರನ್ ತಿಳಿಸಿದರು.

ಬಿಜೆಪಿಗೆ ಚುನಾವಣೆ ಬಂದಾಗ ಮಾತ್ರ ಹಿಂದುತ್ವ. ನಮಗೆ ಹಾಗಲ್ಲ, ಹಿಂದುತ್ವವೇ ಉಸಿರು ಎಂದರು. ಜಿಲ್ಲೆಯಲ್ಲಿ ಆರು ಕ್ಷೇತ್ರಗಳ ಅಭ್ಯರ್ಥಿಗಳು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ ಎಂದೂ ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಧರ್ಮೇಂದ್ರ, ರಾಜ್ಯ ಪ್ರಭಾರಿ ರಾಜೇಶ್ ಪೂಜಾರಿ, ಮುರಳಿ, ಕಿರಣ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.