ಉಡುಪಿ: ಕ್ರೀಡಾಕೂಟಗಳು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ವರ್ಧಿಸುತ್ತವೆ. ಒತ್ತಡ ಪೂರ್ಣ ಸನ್ನಿವೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಇಲಾಖೆಯು ಆಯೋಜಿಸಿರುವ ಕ್ರೀಡಾಕೂಟದಿಂದ ಪೊಲೀಸರ ದೈಹಿಕ ಆರೋಗ್ಯದ ಜೊತೆಗೆ ಮನಸ್ಸು ಕೂಡ ಲವಲವಿಕೆಯಿಂದೊಡಗೂಡಿ ಅವರ ಕಾರ್ಯಕ್ಷಮತೆ ಹೆಚ್ಚುತ್ತದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಹೇಳಿದರು. 

ಅವರು ನಗರದ ಅಜ್ಜರಕಾಡು ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಪೊಲೀಸ್ ಇಲಾಖೆಯ ವಾರ್ಷಿಕ ಕ್ರೀಡಾಕೂಟ-2025 ಅನ್ನು ಉದ್ಘಾಟಿಸಿ ಮಾತನಾಡಿದರು. 

ಪೊಲೀಸ್ ಇಲಾಖೆಯು ಅಚ್ಚುಕಟ್ಟಾಗಿ ಮತ್ತು ಶಿಸ್ತುಬದ್ಧವಾಗಿ ಕ್ರೀಡಾಕೂಟವನ್ನು ಆಯೋಜಿಸಿದೆ. ಕ್ರೀಡಾಮನೋಭಾವನೆಯನ್ನು ಹೆಚ್ಚಿಸುವ ಇಂತಹ ಕ್ರೀಡಾಕೂಟಗಳು ನಿಯಮಿತವಾಗಿ ನಡೆಯುತ್ತಿದ್ದಾಗ ದೇಹ ಸುಸ್ಥಿತಿಯಲ್ಲಿರುತ್ತದೆ. ಪೊಲೀಸರು ಹಲವಾರು ದಿನಗಳವರೆಗೆ ನಿರಂತರವಾಗಿ ಕೆಲಸ ಮಾಡುವ ಸನ್ನಿವೇಶಗಳು ಎದುರಾಗುತ್ತವೆ. ಈ ಸಮಯದಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ಫಿಟ್ ಆಗಿರಬೇಕಾಗುತ್ತದೆ. ನಿತ್ಯವೂ ಕ್ರೀಡೆ ಅಥವಾ ವ್ಯಾಯಾಮಗಳಲ್ಲಿ ತೊಡಗಿಸಿಕೊಂಡಾಗ ಫಿಟ್ನೆಸ್ ಅನ್ನು ಕಾಪಾಡಿಕೊಳ್ಳಬಹುದು. ಇತರ ಇಲಾಖೆಗಳು ಕೂಡ ಪೊಲೀಸ್ ಇಲಾಖೆಯಿಂದ ಸ್ಪೂರ್ತಿ ಪಡೆದು ಕ್ರೀಡಾಕೂಟಗಳನ್ನು ಆಯೋಜಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದರು. 

ಉದ್ಘಾಟನೆಗೂ ಮುನ್ನ ಪೊಲೀಸ್ ಇಲಾಖೆಯ ವಿವಿಧ ವಿಭಾಗದ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಅತಿಥಿಗಳು ಸಾಮೂಹಿಕ ಗೌರವ ರಕ್ಷೆ ಸ್ವೀಕರಿಸಿದ ಬಳಿಕ ಕ್ರೀಡಾ ಜ್ಯೋತಿ ಪ್ರದರ್ಶನ ನಡೆಯಿತು.

ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಸ್ವಾಗತಿಸಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ್ ವಂದಿಸಿದರು.