ವಿದ್ಯಾಗಿರಿ: ಪೆನಾಲ್ಟಿ ಶೂಟೌಟ್‍ನಲ್ಲಿ ಅಮೋಘ ಆಟ ಪ್ರದರ್ಶಿಸಿದ ಆಳ್ವಾಸ್ ಫಿಸಿಯೋಥೆರಪಿ ಕಾಲೇಜು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮೈಸೂರು ವಲಯ ಅಂತರ ಕಾಲೇಜು ಪುರುಷರ ವಿಭಾಗದ ಫುಟ್‍ಬಾಲ್ ಚಾಂಪಿಯನ್‍ಶಿಪ್ ಮುಡಿಗೇರಿಸಿಕೊಂಡಿತು.  

ಇಲ್ಲಿನ ಆಳ್ವಾಸ್ ಕಾಲೇಜಿನ ಅರಮನೆ ಮೈದಾನದಲ್ಲಿ ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಆಳ್ವಾಸ್ ಫಿಸಿಯೋಥೆರಪಿ ಕಾಲೇಜು ಮತ್ತು ಕಣಚೂರು ಅಲೈಡ್ ಹೆಲ್ತ್ ಸೈನ್ಸ್ ಕಾಲೇಜು 0-0 ಗೋಲುಗಳಿಂದ ಸಮಬಲ ಸಾಧಿಸಿತು.  ಚಾಂಪಿಯನ್‍ಶಿಪ್ ನಿರ್ಧರಿಸುವ ನಿರ್ಣಾಯಕ ಪೆನಾಲ್ಟಿ ಶೂಟೌಟ್‍ನಲ್ಲಿ ಆಳ್ವಾಸ್‍ನ ಆಟಗಾರರು ಹೊಡೆದ ಎಲ್ಲ 5 ಕಿಕ್‍ಗಳು ಗೋಲನ್ನು ಮುತ್ತಿಕ್ಕಿದ್ದರೆ, ಕಣಚೂರು ತಂಡದ ಗೋಲು ಹೊಡೆಯುವ ಪ್ರಯತ್ನವನ್ನು ಆಳ್ವಾಸ್ ಗೋಲ್‍ಕೀಪರ್ ರುಮನ್ ಎರಡು ಬಾರಿ ವಿಫಲಗೊಳಿಸಿದರು. ಅಂತಿಮವಾಗಿ ಆಳ್ವಾಸ್ ತಂಡವು 5-3 ಗೋಲುಗಳಿಂದ ಕಣಚೂರು ತಂಡವನ್ನು ಮಣಿಸಿ, ಪ್ರಶಸ್ತಿ ಜಯಿಸಿತು. 

ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಆಳ್ವಾಸ್ ಫಿಸಿಯೋಥೆರಪಿ ಕಾಲೇಜು ತಂಡವು 2-1 ಗೋಲುಗಳಿಂದ ಎಸ್‍ಸಿಎಸ್ ನರ್ಸಿಂಗ್ ಕಾಲೇಜು ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತ್ತು. 

ಇನ್ನೊಂದು ಸೆಮಿಫೈನಲ್‍ನಲ್ಲಿ ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜು ತಂಡವನ್ನು 2-0 ಗೋಲುಗಳಿಂದ ಮಣಿಸಿದ ಕಣಚೂರು ಅಲೈಡ್ ಹೆಲ್ತ್ ಸೈನ್ಸ್ ಕಾಲೇಜು ಫೈನಲ್‍ಗೆ ಪ್ರವೇಶ ಪಡೆದಿತ್ತು. 

ಒಟ್ಟು 72 ತಂಡಗಳು ಸ್ಪರ್ಧಿಸಿದ್ದು, 1,150 ಆಟಗಾರರುಟೂರ್ನಿಯಲ್ಲಿ ಪಾಲ್ಗೊಂಡರು.